ಮಹಾರಾಷ್ಟ್ರದಲ್ಲಿ ಭೀಕರ ಅಪಘಾತ: ಸೇತುವೆ ಮೇಲಿಂದ ಕೆಳಗೆ ಬಿದ್ದ ಕಾರು; ಶಾಸಕನ ಪುತ್ರ ಸೇರಿ 7 ವೈದ್ಯಕೀಯ ವಿದ್ಯಾರ್ಥಿಗಳ ಸಾವು!
ವಾರ್ಧಾ: ಮಹಾರಾಷ್ಟ್ರದ ವಾರ್ಧಾ-ಯವತ್ಮಾಲ್ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಕಾರೊಂದು ಸೇತುವೆ ಮೇಲಿಂದ ಸುಮಾರು 50 ಅಡಿ ಕೆಳಗೆ ಬಿದ್ದ ಪರಿಣಾಮ ಶಾಸಕನ ಪುತ್ರ ಸೇರಿ 7 ಮಂದಿ ವೈದ್ಯಕೀಯ ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ಸೋಮವಾರ ತಡರಾತ್ರಿ ನಡೆದಿದೆ.
ಮೃತಪಟ್ಟಿರುವ 7 ಮಂದಿ ಸಾವಂಗಿಯ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಎಂದು ಪ್ರಾಥಮಿಕ ತನಿಖೆಯಿಂದ ತಿಳುದುಬಂದಿದೆ.
ಅಪಘಾತದಲ್ಲಿ ಗೊಂಡಿಯಾ ಜಿಲ್ಲೆಯ ತಿರೋಡಾ ಶಾಸಕ ವಿಜಯ್ ರಹಂಗ್ಡೇಲ್ ಅವರ ಪುತ್ರ ಆವಿಷ್ಕರ್ ಕೂಡ ಸಾವನ್ನಪ್ಪಿದ್ದಾರೆಂದು ವರದಿಗಳು ತಿಳಿಸಿವೆ.
ಸೆಲ್ಸುರಾ ಪ್ರದೇಶದಲ್ಲಿ ರಾತ್ರಿ 1.30ರ ಸುಮಾರಿಗೆ ದಿಯೋಲಿಯಿಂದ ವಾರ್ಧಾ ಕಡೆಗೆ ಬರುತ್ತಿದ್ದ ಝೈಲೋ ಕಾರು ಸೇತುವೆಯಿಂದ ನೇರವಾಗಿ ಕೆಳಗೆ ಬಿದ್ದಿದೆ. ಪರಿಣಾಮ ಕಾರಿನಲ್ಲಿದ್ದ ಎಲ್ಲಾ ಏಳು ಮಂದಿ ಸ್ಥಳದಲ್ಲೇ ದುರ್ಮರಣವನ್ನಪ್ಪಿದ್ದಾರೆ.
ಗೊಂಡಿಯಾ ಜಿಲ್ಲೆಯ ತಿರೋಡಾ ಶಾಸಕ ವಿಜಯ್ ರಹಂಗ್ಡೇಲ್ ಅವರ ಪುತ್ರ ಕೂಡ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆಂದು ಹೇಳಲಾಗುತ್ತಿದ್ದು, ಇನ್ನುಳಿದ 6 ಮಂದಿ ವೈದ್ಯಕೀಯ ಕೋರ್ಸ್ಗಳಿಗಾಗಿ ದೇಶದ ವಿವಿಧ ಭಾಗಗಳಿಂದ ಬಂದವರು ಎಂದು ತಿಳಿದು ಬಂದಿದೆ.
ಮೃತರನ್ನು ನೀರಜ್ ಚೌಹಾಣ್, ನಿತೇಶ್ ಸಿಂಗ್, ವಿವೇಕ್ ನಂದನ್, ಪ್ರತ್ಯೂಷ್ ಸಿಂಗ್, ಶುಭಂ ಜೈಸ್ವಾಲ್, ಪವನ್ ಶಕ್ತಿ ಎಂದು ಗುರುತಿಸಲಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿರುವ ಪೊಲೀಸರು ಪರಿಶೀಲನೆ ಕೈಗೊಂಡಿದ್ದಾರೆ. ಬಳಿಕ ಮೃತದೇಹಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಮೃತರ ಸಂಬಂಧಿಕರು ಆಸ್ಪತ್ರೆ ಬಳಿ ದೌಡಾಯಿಸಿದ್ದು, ಆಸ್ಪತ್ರೆ ಬಳಿ ಮೃತರ ಕುಟುಂಬಸ್ಥರ ರೋದನೆ ಮುಗಿಲು ಮುಟ್ಟಿದೆ. ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
2 ಲಕ್ಷ ಪರಿಹಾರ ಘೋಷಣೆ
ದುರ್ಘಟನೆಗೆ ತೀವ್ರ ಸಂತಾಪ ಸೂಚಿಸುವ ಪ್ರಧಾನಮಂತ್ರಿ ನರೇಂದ್ರ ಮೋದಿವಯವರು ಮೃತರ ಕುಟುಂಬಸ್ಥರಿಗೆ ತಲಾ ರೂ.2 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ. ಅಲ್ಲದೆ, ಗಾಯಾಳುಗಳಿಗೆ ರೂ.50,000 ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ.