Log In
BREAKING NEWS >
ಜೂನ್ 1 ರಿಂದ 9ರವರೆಗೆ ಉಡುಪಿಯ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ…

ಮಹಾರಾಷ್ಟ್ರದಲ್ಲಿ ತಗ್ಗದ ಕೊರೋನಾ ಅಬ್ಬರ: ಆದರೂ ಸೋಮವಾರದಿಂದ ಶಾಲೆಗಳ ಪುನರಾರಂಭಕ್ಕೆ ನಿರ್ಧಾರ

ಮುಂಬೈ: ಮಹಾರಾಷ್ಟ್ರದಲ್ಲಿ ಮಹಾಮಾರಿ ಕೊರೋನಾ ಅಬ್ಬರ ಇನ್ನೂ ತಗ್ಗಿಲ್ಲ. ಆದರೂ ವೈರಸ್‌ನಿಂದ ಮುಚ್ಚಲಾಗಿದ್ದ ಶಾಲೆಗಳನ್ನು ಸೋಮವಾರದಿಂದ ಮತ್ತೆ ತೆರೆಯಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ.

ಮಹಾರಾಷ್ಟ್ರದ ಶಾಲಾ ಶಿಕ್ಷಣ ಸಚಿವೆ ವರ್ಷಾ ಗಾಯಕ್‌ವಾಡ್ ಅವರು ಈ ಕುರಿತು ಮಾಹಿತಿ ನೀಡಿದ್ದು, ರಾಜ್ಯದಲ್ಲಿ 1 ರಿಂದ 12ನೇ ತರಗತಿವರೆಗಿನ ಶಾಲೆಗಳನ್ನು ಪುನರಾರಂಭಿಸಲಾಗುತ್ತಿದೆ. ಮುಂಬೈ ಸೇರಿದಂತೆ ಮಹಾರಾಷ್ಟ್ರದಲ್ಲಿನ ಆಫ್‌ಲೈನ್ ತರಗತಿಗಳು ಜನವರಿ 24 ರಿಂದ ಪ್ರಾರಂಭವಾಗುತ್ತವೆ ಎಂದು ಹೇಳಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಶಾಲಾ ಶಿಕ್ಷಣ ಇಲಾಖೆ ಕಳುಹಿಸಿದ್ದ ಪ್ರಸ್ತಾವನೆಗೆ ಅನುಮೋದನೆ ನೀಡಿದ್ದಾರೆ ಎಂದು ವರ್ಷಾ ಗಾಯಕ್‌ವಾಡ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

“ಮುಂದಿನ 10-15 ದಿನಗಳಲ್ಲಿ ರಾಜ್ಯಾದ್ಯಂತ ದೈಹಿಕ ತರಗತಿಗಳನ್ನು ಪುನರಾರಂಭಿಸಲು ರಾಜ್ಯ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿದೆ” ಎಂದು ರಾಜ್ಯ ಆರೋಗ್ಯ ಸಚಿವ ರಾಜೇಶ್ ಟೋಪೆ ಇತ್ತೀಚೆಗೆ ಹೇಳಿದ್ದರು. ಈ ಬೆನ್ನಲ್ಲೇ ಮಹಾರಾಷ್ಟ್ರ ಸರ್ಕಾರ ಶಾಲೆಗಳನ್ನು ಪುನಾರಂಭ ಮಾಡುವ ನಿರ್ಧಾರ ತೆಗೆದುಕೊಂಡಿದೆ.

ಕೋವಿಡ್ ಪ್ರಕರಣಗಳ ಹೆಚ್ಚಳದಿಂದಾಗಿ ಮಹಾರಾಷ್ಟ್ರ ಸರ್ಕಾರ ಜನವರಿ 8 ರಂದು, ಫೆ. 15ರವರೆಗೆ 1 ರಿಂದ 12 ತರಗತಿಯ ಶಾಲೆಗಳನ್ನು ಬಂದ್ ಮಾಡುವಂತೆ ಆದೇಶ ಹೊರಡಿಸಿತ್ತು. ಇನ್ನೊಂದೆಡೆ ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ಮುಂಬೈನಲ್ಲಿ ಜನವರಿ 31 ರವರೆಗೆ ಶಾಲೆಗಳನ್ನು ಮುಚ್ಚುವಂತೆ ಆದೇಶ ಮಾಡಿತ್ತು. ಆದರೆ, ಈಗ ರಾಜ್ಯದಲ್ಲಿ ಕೊರೋನಾ ಪ್ರಕರಣಗಳಲ್ಲಿ ಇಳಿಮುಖವಾಗಿದೆ. ಇದರಿಂದಾಗಿ ಶಾಲೆಗಳನ್ನು ತೆರೆಯಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಬುಧವಾರ 43,697 ಕೊರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಅದೇ ಸಮಯದಲ್ಲಿ, ಮಹಾನಗರ ಮುಂಬೈನಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದೆ. ಕಳೆದ 24 ಗಂಟೆಗಳಲ್ಲಿ 6032 ಕೊರೋನಾ ಸೋಂಕಿತರು ಕಾಣಿಸಿಕೊಂಡಿದ್ದಾರೆ. ಪ್ರಸ್ತುತ, ಮುಂಬೈನಲ್ಲಿ ಸಕ್ರಿಯ ಕೊರೋನಾ ರೋಗಿಗಳ ಸಂಖ್ಯೆ 31,856 ಆಗಿದೆ. ಮಹಾನಗರಿಯಲ್ಲಿ ಇದುವರೆಗೆ ಒಟ್ಟು 16,488 ಜನರು ಕೊರೋನಾದಿಂದ ಸಾವನ್ನಪ್ಪಿದ್ದಾರೆ.

No Comments

Leave A Comment