ಮೇಕೆದಾಟು ಪಾದಯಾತ್ರೆ: ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ಎಫ್ಐಆರ್ ದಾಖಲು
ಬೆಂಗಳೂರು: ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ವೇಳೆ ವಾರಾಂತ್ಯದ ನಿಷೇಧಾಜ್ಞೆ ಉಲ್ಲಂಘಿಸಿದ ಆರೋಪದ ಮೇರೆಗೆ ಪಾದಯಾತ್ರೆ ಆಯೋಜಕರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವರ ವಿರುದ್ಧ ಎಫ್ಐಆರ್ ದಾಖಲಾಗಿದೆ ಎಂದು ತಿಳಿದುಬಂದಿದೆ.
ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಸಾತನೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ ಎಂದು ವರದಿಗಳು ತಿಳಿಸಿವೆ.
ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನೇತೃತ್ವದಲ್ಲಿ ನಿನ್ನೆ ಮೇಕೆದಾಟುನಿಂದ ಪಾದಯಾತ್ರೆ ಚಾಲನೆ ನೀಡಲಾಗಿದೆ. ವಿಪತ್ತು ನಿರ್ವಹಣಾ ಕಾಯ್ದೆ 2005ರ ಅಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆಂದು ತಿಳಿದುಬಂದಿದೆ.
ಕನಕಪುರದ ಕಾವೇರಿ ಸಂಗಮದಿಂದ ಕಾಂಗ್ರೆಸ್ ವತಿಯಿಂದ ನಿನ್ನೆ ಆರಂಭಗೊಂಡ ಮೇಕೆದಾಟು ಪಾದಯಾತ್ರೆಯು ಸಾಯಂಕಾಲ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹುಟ್ಟೂರು ದೊಡ್ಡ ಆಲಹಳ್ಳಿ ಗ್ರಾಮಕ್ಕೆ ತಲುಪಿತ್ತು. ಇದೂ ಕೂಡ ಪಾದಯಾತ್ರೆ ಮುಂದುವರೆದಿದ್ದು, ಜ.19ರಂದು ಕೊನೆಯ ದಿನ ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನಕ್ಕೆ ಸಾಗಿ ಅಲ್ಲಿ ಸಮಾರೋಪ ಸಭೆ ನಡೆಯಲಿದೆ.
ಕಾರ್ಯಕ್ರಮ ಆಯೋಜಕರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪಾದಯಾತ್ರೆಯ ವಿಡಿಯೋಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಲೇ ಇದ್ದೇವೆ ಎಂದು ಜಿಲ್ಲಾ ಉಪ ಆಯುಕ್ತ ರಾಕೇಶ್ ಕುಮಾರ್ ಅವರು ಹೇಳಿದ್ದಾರೆ.