Log In
BREAKING NEWS >
ಜೂನ್ 1 ರಿಂದ 9ರವರೆಗೆ ಉಡುಪಿಯ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ…

ಚಂಡೀಗಢ: ಕೇವಲ ಒಂದು ಮತದಿಂದ ಎಎಪಿಗೆ ಸೋಲು: ಬಿಜೆಪಿಯ ಸರಬ್ಜಿತ್ ಕೌರ್ ನೂತನ ಮೇಯರ್

ಚಂಡೀಗಢ: ಪಂಜಾಬ್ ರಾಜ್ಯದ ಚಂಡೀಗಢ ಮುನ್ಸಿಪಲ್ ಕಾರ್ಪೋರೇಷನ್  ಮೇಯರ್ ಹುದ್ದೆಗೆ ಬಿಜೆಪಿ ಮತ್ತು ಆಮ್ ಆದ್ಮಿ ಪಕ್ಷದ ನಡುವೆ ಏರ್ಪಟ್ಟ ಪೈಪೋಟಿಯಲ್ಲಿ ಕೇವಲ ಒಂದೇ ಒಂದು ಮತದಿಂದ ಆಮ್ ಆದ್ಮಿ ಪಕ್ಷವನ್ನು ಸೋಲಿಸಿದ ಬಿಜೆಪಿ ಮೇಯರ್ ಸ್ಥಾನ ಪಡೆದುಕೊಂಡಿದೆ.

ಆಮ್ ಆದ್ಮಿ ಪಕ್ಷದ ಅಂಜು ಕತ್ಯಾಲ್ ಅವರನ್ನು ಕೇವಲ ಒಂದೇ ಒಂದು ಮತದಿಂದ ಸೋಲಿಸಿದ ಬಿಜೆಪಿಯ ಕೌನ್ಸಿಲರ್ ಸರಬ್ಜಿತ್ ಕೌರ್ ಚಂಡೀಗಢ ಮುನ್ಸಿಪಲ್ ಕಾರ್ಪೋರೇಷನ್ ನ ನೂತನ ಮೇಯರ್ ಆಗಿ ಆಯ್ಕೆಯಾದರು.

ಒಟ್ಟು 36 ಮತಗಳಲ್ಲಿ 28 ಮತ ಚಲಾವಣೆಯಾಗಿದ್ದು, ಏಳು ಕಾಂಗ್ರೆಸ್ ಕಾನ್ಸಿಲರ್ ಗಳು ಮತ್ತು ಶಿರೋಮಣಿ ಅಕಾಲಿದಳದ ಏಕೈಕ ಕೌನ್ಸಿಲರ್ ಗೈರಾಗಿದ್ದರು. ಕೌರ್ 14 ಮತಗಳನ್ನು ಪಡೆದರೆ, ಕತ್ಯಾಲ್ 13 ಮತಗಳನ್ನು ಪಡೆದರು ಮತ್ತು ಒಂದು ಅಸಿಂಧು ಎಂದು ಘೋಷಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.  ಫಲಿತಾಂಶ ಪ್ರಕಟವಾದ ನಂತರ ಸದನದಲ್ಲಿ ಎಎಪಿ ಸದಸ್ಯರಿಂದ ಗದ್ದಲವೇರ್ಪಟ್ಟಿತ್ತು, ನಂತರ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.

ಚಂಡೀಗಢ ಮುನ್ಸಿಪಲ್ ಕಾರ್ಪೋರೇಷನ್ ನ 35 ವಾರ್ಡ್ ಗಳಿಗೆ ನಡೆದ ಚುನಾವಣೆ ಫಲಿತಾಂಶ ಡಿಸೆಂಬರ್ 27 ರಂದು ಪ್ರಕಟವಾಗಿತ್ತು. ಅದರಲ್ಲಿ ಆಮ್ ಆದ್ಮಿ ಪಕ್ಷ 14 ಮತ್ತು ಬಿಜೆಪಿ 12 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಕಾಂಗ್ರೆಸ್ ಎಂಟು ಮತ್ತು ಶಿರೋಮಣಿ ಅಕಾಲಿ ದಳ ಒಂದು ಸ್ಥಾನ ಪಡೆದಿತ್ತು.

ಆದರೆ, ಚುನಾವಣೆ ಫಲಿತಾಂಶ ಪ್ರಕಟವಾದ ಕೆಲವೇ ದಿನಗಳಲ್ಲಿ ಕಾಂಗ್ರೆಸ್ ನ ಮುನ್ಸಿಪಲ್ ಕೌನ್ಸಿಲರ್ ಹರ್ಪೀತ್ ಕೌರ್ ಬಬ್ಲಾ ಬಿಜೆಪಿಗೆ ಸೇರ್ಪಡೆಗೊಂಡಿದ್ದರು.  35 ಕಾನ್ಸಿಲರ್ ಗಳಲ್ಲದೆ ಮುನ್ಸಿಪಲ್ ಕಾರ್ಪೋರೇಷನ್ ನಲ್ಲಿ ಪದನಿಮಿತ್ತ ಸದಸ್ಯರಾಗಿರುವ ಚಂಡೀಗಢ ಸಂಸದರೂ ಕೂಡಾ ಮತದಾನದ ಹಕ್ಕನ್ನು ಹೊಂದಿದ್ದಾರೆ.

No Comments

Leave A Comment