ಮಂಗಳೂರಿನಲ್ಲಿ ಎನ್‌ಐಎಯಿಂದ ಬಂಧಿಸಲ್ಪಟ್ಟ ದಂತ ವೈದ್ಯೆ ಮರಿಯಂಳಿಂದ ಸ್ಫೋಟಕ ಮಾಹಿತಿ ಬಹಿರಂಗ
ಬೆಂಗಳೂರು: ಕಳೆದ ಎರಡು ದಿನಗಳ ಹಿಂದೆ ಮಂಗಳೂರಿನಲ್ಲಿ ಎನ್ಐಎ ಅಧಿಕಾರಿಗಳಿಂದ ಬಂಧಿಸಲ್ಪಟ್ಟ ದಂತ ವೈದ್ಯೆ ದೀಪ್ತಿ ಮಾರ್ಲ ಅಲಿಯಾಸ್ ಮರಿಯಂಳಿಂದ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಪ್ರಕರಣದಲ್ಲಿ ಹನಿಟ್ರ್ಯಾಪ್, ಮತಾಂತರ ಹಾಗೂ ಉಗ್ರ ಸಂಘಟನೆಯ ನಂಟಿನ ಶಂಕೆ ವ್ಯಕ್ತವಾಗಿದೆ.
ಮಂಗಳೂರಿನ ಉಳ್ಳಾಲದಲ್ಲಿ ರಾಷ್ಟ್ರೀಯ ತನಿಖಾ ದಳ ಬಂಧಿಸಿರುವ ದಂತ ವೈದ್ಯೆ ದೀಪ್ತಿ ಮಾರ್ಲ ಅಲಿಯಾಸ್ ಮರಿಯಂ ಪ್ರಕರಣದಲ್ಲಿ ಹಲವು ಸ್ಫೋಟಕ ಮಾಹಿತಿಗಳು ಹೊರ ಬರುತ್ತಿವೆ. ಮಾಜಿ ಶಾಸಕ ಇದನಬ್ಬರ ಮೊಮ್ಮಗನ ಮದುವೆ ಆದ ಬಳಿಕ ಇಸ್ಲಾಂಗೆ ಮತಾಂತರವಾಗಿದ್ದ ದೀಪ್ತಿ ಮಾರ್ಲ ಅಲಿಯಾಸ್ ಮರಿಯಂ, ಕ್ರೋನಿಕಲ್ ಫೌಂಡೇಶನ್ ಎಂಬ ಇನ್ಸ್ಟಾಗ್ರಾಂ ಪೇಜ್‌ನಲ್ಲಿ ಯುವಕರನ್ನ ಮತಾಂತರಕ್ಕೆ ಪ್ರೇರೇಪಿಸುತ್ತಿದ್ದಳಂತೆ. ಬಳಿಕ ಮತಾಂತರಗೊಂಡ ಯುವಕರನ್ನ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಗೆ ಸೇರಿಸುತ್ತಿದ್ದಳು ಎಂದು ಎನ್‌ಐಎ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ ಎನ್ನಲಾಗ್ತಿದೆ.