Log In
BREAKING NEWS >
ಉಡುಪಿ ನಗರದಲ್ಲಿ ರಿಕ್ಷಾ ಮೀಟರ್ ಕನಿಷ್ಠದರ ರೂ.40/-ಫಿಕ್ಸ್:ಕಿ.ಮೀಟರ್ ಗೆ ರೂ.20/-ಜಾರಿಗೆ ಕ್ಷಣಗಣನೆ…

ಬೆಂಗಳೂರಿನಲ್ಲಿ ಸಿಲಿಂಡರ್ ಸ್ಫೋಟ: 7 ಮಂದಿಗೆ ಗಾಯ, ಮಹಿಳೆ ಗಂಭೀರ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅಡುಗೆ ಅನಿಲ ಸಿಲಿಂಡರ್ ಸ್ಫೋಟಗೊಂಡಿದ್ದು, ದುರ್ಘಟನೆಯಲ್ಲಿ 7 ಮಂದಿ ಗಾಯಗೊಂಡಿದ್ದು, ಓರ್ವ ಮಹಿಳೆ ಪರಿಸ್ಥಿತಿ ಗಂಭೀರವಾಗಿದೆ.

ಮೂಲಗಳ ಪ್ರಕಾರ ಬೆಂಗಳೂರಿನ ಚಂದ್ರಾಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಅ‍ತ್ತಿಗುಪ್ಪೆಯ ಮನೆಯೊಂದರಲ್ಲಿ ಸಿಲಿಂಡರ್‌ ಸ್ಫೋಟಗೊಂಡು 7 ಮಂದಿ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಸುಕುಮಾರ್‌ (48), ಹರ್ಷಾ (41), ಗಾನಶ್ರೀ (13), ಹೇಮೇಶ್ವರ್‌ (7), ಮನೆ ಮಾಲೀಕರಾದ ರಾಮಕ್ಕ (65), ಅನಿತಾ (31) ಹಾಗೂ ರಚನಾ (21) ಗಾಯಗೊಂಡಿದ್ದು, ಈ ಪೈಕಿ ರಾಮಕ್ಕ ಸ್ಥಿತಿ ಗಂಭೀರವಾಗಿದೆ. ಎಲ್ಲರನ್ನೂ ರಾಜಾಜಿನಗರದ ಇಎಸ್‌ಐ ಹಾಗೂ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಅತ್ತಿಗುಪ್ಪೆ 2ನೇ ತಿರುವಿನಲ್ಲಿರುವ ಮನೆಯಲ್ಲಿ ಸೋಮವಾರ ರಾತ್ರಿ 8.45ರ ಸುಮಾರಿಗೆ ಸ್ಫೋಟವಾಗಿತ್ತು. ಮನೆಯ ನೆಲ ಮಹಡಿಯಲ್ಲಿ ವಾಸವಿದ್ದ ಹರ್ಷಾ ಎಂಬುವರು ಆಹಾರ ಬಿಸಿ ಮಾಡಲು ಅಡುಗೆ ಕೋಣೆಗೆ ಹೋಗಿದ್ದಾಗ ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗುತ್ತಿರುವುದು ಗೊತ್ತಾಗಿದೆ. ಕೂಡಲೇ ಅವರು ಮನೆಯವರಿಗೆಲ್ಲಾ ಮಾಹಿತಿ ನೀಡಿದ್ದು ಎಲ್ಲರೂ ಹೊರಗೆ ಓಡಿ ಬಂದಿದ್ದಾರೆ’ ಎಂದು ಪೊಲೀಸರು ತಿಳಿಸಿದರು.

‘ನೆಲ ಮಹಡಿಯಲ್ಲಿ ಜನರು ಕೂಗುತ್ತಿರುವುದನ್ನು ಕೇಳಿ ಮೊದಲ ಮಹಡಿಯಲ್ಲಿದ್ದ ರಾಮಕ್ಕ ಅವರು ಕೆಳಗೆ ಇಳಿದು ಬಂದಿದ್ದಾರೆ. ಹೊರ ಓಡಿಬಂದಿದ್ದವರೆಲ್ಲಾ ಮನೆಯೊಳಗೆ ಏನಾಗುತ್ತಿದೆ ಎಂದು ಇಣುಕಿ ನೋಡಿದ್ದಾರೆ. ಈ ವೇಳೆ ದೇವರ ಮನೆಯಲ್ಲಿ ಇಟ್ಟಿದ್ದ ದೀಪದಿಂದ ಬೆಂಕಿ ಹೊತ್ತಿಕೊಂಡು ಸಿಲಿಂಡರ್‌ ಸ್ಫೋಟಗೊಂಡಿದೆ. ಬೆಂಕಿಯ ಜ್ವಾಲೆ ಕೊಠಡಿಯಲ್ಲೆಲ್ಲಾ ವ್ಯಾಪಿಸಿದೆ. ಮನೆಯಲ್ಲಿದ್ದ ಎಲ್ಲಾ ವಸ್ತುಗಳು ಸುಟ್ಟು ಕರಕಲಾಗಿವೆ. ಈ ವೇಳೆ ಅಲ್ಲಿದ್ದ 7 ಮಂದಿಗೆ ಸುಟ್ಟ ಗಾಯಗಳಾಗಿವೆ. ಬೆಂಕಿ ಹೊತ್ತಿ ಉರಿಯುತ್ತಿರುವುದನ್ನು ಗಮನಿಸಿದ ಸ್ಥಳೀಯರು ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಸಿಬ್ಬಂದಿ ನಿರಂತರ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆಎಂದು ಹೇಳಿದ್ದಾರೆ.

ಬಳಿಕ ಗಾಯಾಳುಗಳನ್ನು ರಾಜಾಜಿನಗರದ ಇಎಸ್ಐ ಆಸ್ಪತ್ರೆ ಮತ್ತು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

No Comments

Leave A Comment