
ಉಡುಪಿ: ಪತ್ರಕರ್ತ, ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ದನ ಭಂಡಾರ್ಕರ್ ನಿಧನ
ಉಡುಪಿ:ಡಿ. 25: ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ದನ ಭಂಡಾರ್ಕರ್ ಅವರು ಅಲ್ಪಕಾಲದ ಅನಾರೋಗ್ಯದಿಂದ ಇಂದು ಸಂಜೆ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಜನಾರ್ದನ ಭಂಡಾರ್ಕರ್ ಅವರು ಕಳೆದ ಕೆಲವು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಂಜೆ ಮೃತಪಟ್ಟಿದ್ದಾರೆ.
ಕರಂಬಳ್ಳಿ ವಿ.ಎಮ್. ನಗರದ ನಿವಾಸಿಯಾಗಿರುವ ಜನಾರ್ದನ ಭಂಡಾರ್ಕರ್, ಉಡುಪಿ ಬ್ಲಾಕ್ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ಉಡುಪಿ ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇಂದ್ರದ ಮಾಜಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಜನಾರ್ದನ ಅವರು ಕಾಂಗ್ರೆಸ್ ಪಕ್ಷದ ಕೆಲಸ ಮತ್ತು ಅನೇಕ ಪಕ್ಷದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದು, ಹಲವಾರು ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದರು.ಉಡುಪಿ ರಥಬೀದಿ ಶ್ರೀಗಣೇಶೋತ್ಸವ ಸಮಿತಿಯ ಸದಸ್ಯರಾಗಿದ್ದರು.ಆರ೦ಭದಲ್ಲಿ ಪತ್ರಿಕಾ ವಿತರಕರಾಗಿಯೂ, ಸ೦ಜೆ ಪತ್ರಿಕೆ ವರದಿಗಾರರಾಗಿಯೂ ಹೊಟೇಲ್ ಉದ್ಯಮಿಯಾಗಿಯೂ,ಐರೋಡಿ ಸ೦ಸ್ಥೆಯಲ್ಲಿ ಮೇಲ್ವಿಚಾರಕರಾಗಿ ಸೇವೆ ಸಲ್ಲಿಸಿದವರಾಗಿದ್ದರು.
ಮೃತರು ತಾಯಿ , ಪತ್ನಿ, ಇಬ್ಬರು ಪುತ್ರಿಯರು, ಬಂಧು ಮಿತ್ರರನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಅಪಾರ ಅಭಿಮಾನಿಗಳು ಸ೦ತಾಪ ಸೂಚಿಸಿದ್ದಾರೆ.