ಗೋವಾ ವಿಧಾನಸಭೆ ಚುನಾವಣೆಗೂ ಮುನ್ನ ಬಿಜೆಪಿಗೆ ಶಾಕ್: ಶಾಸಕಿ ಅಲಿನಾ ಸಲ್ಡಾನಾ ರಾಜಿನಾಮೆ; ಆಪ್ ಗೆ ಸೇರ್ಪಡೆ
ಪಣಜಿ: ಗೋವಾದ ಮಾಜಿ ಸಚಿವೆ ಮತ್ತು ಎರಡು ಬಾರಿಯ ಶಾಸಕಿ ಅಲಿನಾ ಸಲ್ದಾನಾ ತಮ್ಮ ಶಾಸಕತ್ವಕ್ಕೆ ರಾಜೀನಾಮೆ ನೀಡಿ, ರಾಷ್ಟ್ರ ರಾಜಧಾನಿಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಮ್ಮುಖದಲ್ಲಿ ಆಮ್ ಆದ್ಮಿ ಪಾರ್ಟಿ ಸೇರಿದ್ದಾರೆ.
ರಾಜಿನಾಮೆ ನೀಡಿದ ನಂತರ ಕೆಲವು ಗಂಟೆಗಳಲ್ಲೇ ದೆಹಲಿಗೆ ತೆರಳಿದ ಸಲ್ದಾನಾ ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ಎಎಪಿ ಸೇರ್ಪಡೆಯಾದರು. ಕೇಜ್ರಿವಾಲ್ ಸಲ್ದಾನಿಯಾ ಅವರನ್ನು ಸ್ವಾಗತಿಸಿದ್ದಾರೆ.
69 ವರ್ಷ ವಯಸ್ಸಿನ ಶಾಸಕಿ ಗೋವಾ ವಿಧಾನಸಭೆಯ ಸ್ಪೀಕರ್ ಅವರಿಗೆ ರಾಜೀನಾಮೆ ಸಲ್ಲಿಸಿದರು, 40 ಸದಸ್ಯರ ಸದನದ ಬಲ35 ಕ್ಕೆ ಇಳಿದಿದೆ. ಮನೋಹರ್ ಪರಿಕ್ಕರ್ ಸಂಪುಟದಲ್ಲಿ ಸಚಿವರಾಗಿದ್ದ ಅಲೀನಾ ಸಲ್ಡಾನ್ಹಾ ಬಿಜೆಪಿ ನಾಯಕ ಮಥನಿ ಸಲ್ಡಾನ್ಹಾ ಅವರ ಪತ್ನಿ. “ನಾನು ಮಾನ್ಯ ಕಾರಣಗಳಿಗಾಗಿ ರಾಜೀನಾಮೆ ನೀಡಿದ್ದೇನೆ ಎಂದು ಹೇಳಿದ್ದಾರೆ.
ಸಲ್ದಾನಾ ರಾಜಿನಾಮೆ ರಾಜ್ಯ ಬಿಜೆಪಿ ಪಾಲಿಗೆ ಆಘಾತಕಾರಿ ಬೆಳವಣಿಗೆಯಾಗಿದೆ. ಪ್ರಸಕ್ತ ವಿಧಾನಸಭಾ ಅವಧಿಯಲ್ಲಿ ಬಿಜೆಪಿಗೆ ರಾಜೀನಾಮೆ ನೀಡಿದ ಮೊದಲ ಶಾಸಕಿಯಾಗಿದ್ದಾರೆ. ಈ ಬೆಳವಣಿಗೆಗೆ ಕ್ಷಿಪ್ರವಾಗಿ ಸ್ಪಂದಿಸಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಸದಾನಂದ ಶೇಟ್ ತಾನಾವಡೆ ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಸಲ್ದಾನಾ ಅವರನ್ನು ಪಕ್ಷದಿಂದ ಉಚ್ಚಾಟಿಸಿದ್ದಾರೆ.
ರವಿವಾರ ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡುವ ಕಾರ್ಯಕ್ರಮವಿದ್ದು, ಈ ಸಂಬಂಧ ಕಾರ್ಯಯೋಜನೆಗಳನ್ನು ರೂಪಿಸಲು ಬುಧವಾರ ಸಂಜೆ ನಡೆಸಿದ ಸಭೆಯಲ್ಲಿ ಪಾಲ್ಗೊಂಡಿದ್ದ ಸಲ್ಡಾನಾ, ಸ್ಪೀಕರ್ ಕಚೇರಿಗೆ ಯಾವುದೇ ಮಾಹಿತಿ ನೀಡದೇ ತಮ್ಮ ರಾಜೀನಾಮೆ ಪತ್ರವನ್ನು ಶಾಸಕಾಂಗ ಕಾರ್ಯದರ್ಶಿಗಳಿಗೆ ನೀಡಿದ್ದಾರೆ. ಸ್ಪೀಕರ್ ರಾಜೇಶ್ ಪಠಾಣ್ ಕರ್ ಇನ್ನೂ ರಾಜೀನಾಮೆಯನ್ನು ಸ್ವೀಕರಿಸಿಲ್ಲ.