ಮಂಗಳೂರು, ನ 27 : ನಗರದ ಕೂಳೂರು ಮತ್ತು ಕೋಡಿಕಲ್ ನಾಗಬನಗಳಲ್ಲಿ ಆರಾಧನಾ ನಾಗನ ಕಲ್ಲುಗಳನ್ನು ಭಗ್ನಗೊಳಿಸಿ , ಅಪವಿತ್ರಗೊಳಿಸಿ ಕೋಮು ಸೌಹಾರ್ದತೆ ಕದಡಲು ಸಂಚು ಹೂಡಿರುವ 8ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ನ.27 ರ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಬಂಧಿತರನ್ನು ಕಾವೂರಿನ ಶಾಂತಿನಗರ ಮಸೀದಿ ಬಳಿಯ ಸಫ್ವಾನ್ ಯಾನೆ ಚಪ್ಪು ( 25 ), ಶಾಂತಿನಗರದ ಮೊಹಮ್ಮದ್ ಸುಹೈಬ್ (23), ನಿಖಿಲೇಶ್ (23) ಕುಳೂರು ಪಂಜಿಮೊಗರು ಗ್ರಾಮದ ಪ್ರವೀಣ್ ಅನಿಲ್ ಮೊಂತೆರೋ (27 ), ಸುರತ್ಕಲ್ ನ ಜಯಂತ್ ಕುಮಾರ್ ( 30) ಬಂಟ್ವಾಳದ ಪಡೂರು ಗ್ರಾಮದ ಪ್ರತೀಕ್ (24 ) ಕೂಳೂರು ಪಡುಕೋಡಿ ಗ್ರಾಮದ ಮಂಜುನಾಥ್ ಪೂಜಾರಿ (30) ಹಾಸನದ ಬೇಲೂರಿನ ನೌಷದ್ ಅರೇಹಳ್ಳಿ(30) ಎಂದು ಗುರುತಿಸಲಾಗಿದೆ.
ಕೋಮು ಸೌಹಾರ್ಧತೆ ಕದಡಲು ಸಂಚು ರೂಪಿಸಿದ್ದ ಇವರು ಮಂಗಳೂರು ನಗರದ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಪಡುಕೋಡಿ ಗ್ರಾಮದ ಬಂಗ್ರ ಕೂಳೂರು ಕೋಟ್ಯಾನ್ ಕುಟುಂಬದ ನಾಗಬನ ಅಕ್ಟೋಬರ್ 21ರಂದು ಒಂದು ಕಲ್ಲನ್ನು ಧ್ವಂಸಗೊಳಿಸಿ ಉಳಿದ 5 ಕಲ್ಲುಗಳನ್ನುಅಪವಿತ್ರಗೊಳಿಸಿದ್ದರು. ಇದಾದ ಬಳಿಕ ನವೆಂಬರ್ 12 ರಂದು ಮಂಗಳೂರು ನಗರದ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಕೋಡಿಕಲ್ ನಾಗಬನದ ಮೂರ್ತಿಗಳನ್ನು ಕಿತ್ತೆಸೆದು ಹಾನಿಗೊಳಿಸಿ ಅಪವಿತ್ರಗೊಳಿಸಿದ್ದರು.
ಪೊಲೀಸರ ನಿಗಾ ಬೇರೆಡೆ ಸೆಳೆಯಲು ಸರಗಳ್ಳತನ ಆರೋಪಿಗಳಿಂದ ಸಂಚು
ಸರಗಳ್ಳನ ಪ್ರಕರಣದ ಹಿನ್ನಲೆಯಲ್ಲಿ ಪೊಲೀಸರು ನಗರದಲ್ಲಿ ಗಸ್ತು ತೀವ್ರವಾಗಿ ಹೆಚ್ಚಿಸಿದಾಗ ಹಿಶಾಮ್, ಅಚ್ಚು ಎಂಬಿಬ್ಬರು ಸರಗಳ್ಳತನ ಆರೋಪಿಗಳು ಪೊಲೀಸರ ನಿಗಾ ಬೇರೆಡೆ ಸೆಳೆಯುವ ಕೃತ್ಯವೆಸಗುವಂತೆ ಆರೋಪಿಗಳಾದ ಸಫ್ವಾನ್ ಹಾಗೂ ಮೊಹಮ್ಮದ್ ಸುಹೈಬ್ ಗೆ ಪ್ರಚೋದನೆ ನೀಡಿದ್ದರು. ಈ ವೇಳೆ ಇವರೆಲ್ಲರ ಪರಿಚಯಸ್ಥ ಚಿಲಿಂಬಿ ಗುಡ್ಡೆ ಅನೈತಿಕ ಪೊಲೀಸ್ ಗಿರಿ ಪ್ರಕರಣ ಆರೋಪಿ ಶಾಕಿರ್ ನಾಗಬನದ ಕಲ್ಲು ದ್ವಂಸ ಮಾಡುವ ಪ್ಲ್ಯಾನ್ ತಿಳಿಸಿದ್ದ.
ಪೊಲೀಸರ ಗಮನ ಸೆಳೆಯಲು ನಾಗಬನ ಕಲ್ಲು ಧ್ವಂಸ ಸೂಕ್ತ ಇದರಿಂದ ಕೋಮು ಗಲಭೆ ಸೃಷ್ಟಿಯಾಗಬಹುದು ಎಂದು ಎಂದು ಹಿಶಾಮ್, ಅಚ್ಚು ಎಂಬಿಬ್ಬರು ಪ್ರವೀಣ್ ಮೊಂತೆರೋ ಆರೋಪಿ ಪ್ರವೀಣ್ ಮೊಂತೆರೋ ಗೆ 10 ಸಾವಿರ ಸುಫಾರಿ ನೀಡಿದ್ದರು.
ಪ್ರಕರಣದ ಆರೋಪಿಗಳಾದ ಸಫ್ವಾನ್ ವಿರುದ್ದ 2 ಎನ್.ಡಿ.ಪಿ.ಎಸ್ (ಮಾದಕ ವಸ್ತು ) ಶೋಯೆಬ್ ವಿರುದ್ದ 1 ಎನ್‌ಡಿಪಿಎಸ್ ಪ್ರಕರಣ , ಪ್ರವೀಣ್ ವಿರುದ್ದ 3 ಕಳ್ಳತನ , ಜಯಂತ್ ವಿರುದ್ದ 2 ಎನ್.ಡಿ.ಪಿ.ಎಸ್ ಕೇಸ್ ವಿವಿಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಹಿಂದೂ ಸಂಘಟನೆ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದ್ದ, ಕರಾವಳಿ ಶಾಂತಿ ಭಂಗ ತಂದಿದ್ದ ಪ್ರಕರಣ ನಾಗನಕಲ್ಲು ದ್ವಂಸ ಪ್ರಕರಣ ಬೇಧಿಸಿದ ಪೊಲೀಸ್ ತನಿಖಾ ತಂಡದ 25 ಸಾವಿರ ನಗದು ಬಹುಮಾನವನ್ನು ಘೋಷಿಸಿ ಬಹುಮಾನ ಮೊತ್ತವನ್ನು ನಗರ ಪೊಲೀಸ್ ಆಯುಕ್ತ ತನಿಖಾ ತಂಡಕ್ಕೆ ಹಸ್ತಾಂತರಿಸಿದ್ದಾರೆ.
ಇನ್ನು ಈ ಕೃತ್ಯಕ್ಕೆ ಸಹಕರಿಸಿದ ಹಾಗೂ ಆರೋಪಿಗಳಿಗೆ ಆಶ್ರಯ ನೀಡಿದ ಇತರ ವ್ಯಕ್ತಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ.