ದೇವನಹಳ್ಳಿ : ಅನೈತಿಕ ಸಂಬಂಧಕ್ಕೆ ಹುಟ್ಟಿದ ಮಗು ಅಥವಾ ಹೆಣ್ಣು ಮಗು ಎಂಬ ಕಾರಣಕ್ಕೋ, ಆಗತಾನೆ ಹುಟ್ಟಿದ ನವಜಾತ ಶಿಶುವನ್ನು ದೇವಿಗೆ ಅರ್ಪಿಸುವ ರೀತಿ ದೇವಾಲಯದ ಮುಂದೆ ಇಟ್ಟು ತಾಯಿ ಪರಾರಿಯಾಗಿರುವ ಘಟನೆ ವಿಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರ – ಚಿಕ್ಕಬಳ್ಳಾಪುರ ರಸ್ತೆಯ ಕೆರೆಯ ಮೇಲಿರುವ ದುರ್ಗಮ್ಮ ಗುಡಿ ಬಳಿ ರಾತ್ರಿಯಷ್ಟೇ ಹುಟ್ಟಿದ ನವಜಾತ ಹೆಣ್ಣು ಶಿಶುವನ್ನು ದೇವರ ಮುಂದೆ ಸಮರ್ಪಿಸುವಂತೆ ಬಟ್ಟೆಯಲ್ಲಿ ಸುತ್ತಿ ದೇವಿಯ ಮುಂದೆ ಇಟ್ಟು ಹೋಗಿದ್ದಾರೆ. ಶಿಶು ಅಳುತ್ತಿದ್ದ ಧ್ವನಿ ಕೇಳಿ ಗುಡಿ ಬಳಿಗೆ ಬಂದ ಕೃಷ್ಣಮೂರ್ತಿ ಎನ್ನುವವರು ಮಗು ರಕ್ಷಣೆ ಮಾಡಿ ವಿಜಯಪುರ ಸರ್ಕಾರಿ ಆಸ್ಪತ್ರೆಗೆ ನೀಡಿದ್ದಾರೆ.
ಹೆಣ್ಣು ಎಂಬ ಕಾರಣಕ್ಕೋ ಅಥವಾ ಅನೈತಿಕ ಸಂಬಂಧಕ್ಕೆ ಹುಟ್ಟಿದ ಮಗುವೆಂದು ಹೆದರಿ ಗುಡಿಯ ಮುಂಭಾಗದಲ್ಲಿ ಬಿಟ್ಟು ಹೋಗಿದ್ದಾರೆ ಎಂಬ ಸಂಶಯ ವ್ಯಕ್ತವಾಗುತ್ತಿದೆ.