Log In
BREAKING NEWS >
ಉಡುಪಿಯ ಕಲ್ಸ೦ಕದ ರೋಯಲ್ ಗಾರ್ಡನ್ ನಲ್ಲಿ ಉಡುಪಿ ಉತ್ಸವ ಆರ೦ಭವಾಗಿದ್ದು ಪ್ರತಿ ನಿತ್ಯವೂ ಸಾಯ೦ಕಾಲ 4ರಿ೦ದ 9ಗ೦ಟೆಯವರೆಗೆ ವೀಕ್ಷಿಸಲು ಅವಕಾಶವಿದೆ....

‘ಒಮೈಕ್ರಾನ್’ ರೂಪಾಂತರಿ ಕೊರೋನಾ ವೇಗವಾಗಿ ಹಬ್ಬುವ ಸಾಧ್ಯತೆಯಿದೆ, ಜನರೇ ಎಚ್ಚರವಾಗಿರಿ: ಆರೋಗ್ಯ ಸಚಿವ ಡಾ ಕೆ ಸುಧಾಕರ್ ಮನವಿ

ಬೆಂಗಳೂರು: ಕಳೆದೊಂದು ವಾರದಿಂದ B.1.1.529 ಒಮೈಕ್ರಾನ್ ಎಂಬ ರೂಪಾಂತರಿ ಕೊರೋನಾ ವೈರಸ್ ಕಾಣಿಸಿಕೊಂಡಿದೆ. ಒಮೈಕ್ರಾನ್ ಇಡೀ ಸಮುದಾಯಕ್ಕೆ ಬಂದಾಗ ವೇಗವಾಗಿ ಹರಡಬಹುದು ಎಂಬ ಮಾಹಿತಿಯಿದೆ ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ಹೇಳಿದ್ದಾರೆ.

ರೂಪಾಂತರಿ ಕೊವಿಡ್ ವೈರಸ್ ಬಹಳ ವೇಗವಾಗಿ ಹರಡುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯೇ ಈ ಬಗ್ಗೆ ಮಾಹಿತಿ ನೀಡಿದೆ. ಹೊಸ ವೈರಸ್ ಬಗ್ಗೆ ಜನರು ಆತಂಕಪಡದೆ ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ. ನಿನ್ನೆ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಹೊರಡಿಸಲಾಗಿದೆ. ರೂಪಾಂತರಿ ವೈರಸ್ ಇರುವ ದೇಶದಿಂದ ಬರುವ ನಾಗರಿಕರಿಗೆ ವಿಮಾನ ನಿಲ್ದಾಣಗಳಲ್ಲಿ ಕಡ್ಡಾಯವಾಗಿ ಟೆಸ್ಟ್ ಮಾಡಲಾಗುವುದು ಎಂದರು.

ಕೋವಿಡ್ ಟೆಸ್ಟ್ ಮಾಡಿಸಿದ ನಂತರ ಪಾಲಿಟಿವ್ ಬಂದವರನ್ನು ಪ್ರತ್ಯೇಕವಾಗಿ ಇರಿಸಲಾಗುವುದು. ಏಳು ದಿನಗಳ ನಂತರ ಮತ್ತೆ ಟೆಸ್ಟ್ ಮಾಡಿ ನೆಗೆಟಿವ್ ಇದೆಯೇ ಎಂದು ಖಚಿತಪಡಿಸುತ್ತೇವೆ ಎಂದು ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡುತ್ತಾ ಹೇಳಿದರು.

ದಕ್ಷಿಣ ಆಫ್ರಿಕಾ, ಬೊಟ್ಸ್ವಾನಾ, ಹಾಂಕಾಂಗ್, ಇಸ್ರೇಲ್ ಹೀಗೆ ನಾಲ್ಕೈದು ದೇಶಗಳಲ್ಲಿ ಕೊರೋನಾ ರೂಪಾಂತರಿ ಕಾಣಿಸಿಕೊಂಡಿದೆ. ಕಳೆದ 9 ತಿಂಗಳಿನಿಂದ ಡೆಲ್ಟಾ ರೂಪಾಂತರಿ ಆಲ್ಪಾ, ಬೀಟಾ, ಗಾಮಾ, ಕಾಫಾ ಎಲ್ಲದಕ್ಕೂ ಮೀರಿ ಅದೊಂದೇ ಇಡೀ ವಿಶ್ವದಲ್ಲಿ ಹರಡಿತ್ತು. 9 ತಿಂಗಳಿನಿಂದ ಡೆಲ್ಟಾ ರೂಪಾಂತರಿಗಿಂತ ತೀವ್ರವಾದ ವೈರಸ್ ಹರಡಿ ಮನುಷ್ಯನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಿರಲಿಲ್ಲ ಎಂದರು.

ಕಡ್ಡಾಯವಾಗಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ: ಕೋವಿಡ್-10 ಸೋಂಕಿಗೆ ಎರಡೂ ಡೋಸ್ ಗಳು ಡೆಲ್ಟಾ ರೂಪಾಂತರಿಯನ್ನು ನಿಗ್ರಹ ಮಾಡುವ ಶಕ್ತಿಯಿತ್ತು. ಆದರೆ ಇನ್ನೂ ರಾಜ್ಯದಲ್ಲಿ 45 ಲಕ್ಷ ಮಂದಿ ಎರಡನೇ ಡೋಸ್ ಹಾಕಿಸಿಕೊಂಡಿಲ್ಲ. ಮೊದಲ ಲಸಿಕೆ ತೆಗೆದುಕೊಂಡು ಅವಧಿ ಮುಗಿದಿದ್ದರೂ ಎರಡನೇ ಲಸಿಕೆ ಪಡೆದಿಲ್ಲ, ಉದಾಸೀನ, ನಿರ್ಲಕ್ಷ್ಯ ಮಾಡದೆ ಲಸಿಕೆ ಹಾಕಿಸಿಕೊಳ್ಳಿ ಎಂದು ಜನತೆಗೆ ಸಚಿವ ಸುಧಾಕರ್ ಮನವಿ ಮಾಡಿಕೊಂಡರು.

ರೂಪಾಂತರಿ ವೈರಸ್ ಬರುತ್ತಿರುವ ಹಿನ್ನೆಲೆ ಜನತೆ ಎಚ್ಚೆತ್ತುಕೊಳ್ಳಬೇಕು. ಎಲ್ಲರೂ ಒಟ್ಟಾಗಿ ಕೊರೊನಾ ಸೋಂಕು ಸೋಲಿಸಬೇಕಾಗಿದೆ. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕೆಂದು ಅಂತ ತಿಳಿಸಿದರು. B.1.1.529 ರೂಪಾಂತರಿಗೆ ‘ಒಮೈಕ್ರೋನ್’ ಎಂದು ಹೆಸರು. ‘ಒಮೈಕ್ರೋನ್’ ವೈರಸ್ ಹರಡುವ ಪ್ರಮಾಣ ಹೆಚ್ಚಾಗಿದೆ. ಆದರೆ ರೋಗ ಲಕ್ಷಣಗಳು ಮೊದಲಿನಂತೆ ಇವೆ. ಡೆಲ್ಟಾಗಿಂತ ಗಂಭೀರ ಇದೆಯೇ ಎಂದು ಪರಿಶೀಲಿಸಬೇಕು. ಜಿನೋಮಿಕ್ ಸೀಕ್ವೆನ್ಸಿಂಗ್ ಮೂಲಕ ತಿಳಿಯಬೇಕಾಗಿದೆ ಅಂತ ಹೇಳಿದರು.

ಔಷಧಿ ಕೊರತೆಯಿಲ್ಲ: ಸರ್ಕಾರಿ ಆಸ್ಪತ್ರೆಗಳಲ್ಲಿ ಯಾವುದೇ ಔಷಧ ಕೊರತೆ ಇರಲ್ಲ. ಸೋಮವಾರದಿಂದ ಕೊರತೆ ಆಗದಂತೆ ನೋಡಿಕೊಳ್ಳುತ್ತೇವೆ. ಎಲ್ಲ ಔಷಧ ಪೂರೈಕೆ ಮಾಡುವುದಕ್ಕೆ ಕ್ರಮಕೈಗೊಳ್ಳುತ್ತೇವೆ. ಹೊರಗೆ ಔಷಧ ತರುವಂತೆ ಚೀಟಿ ಬರೆದುಕೊಡುವುದಿಲ್ಲ. ಈ ನಿಟ್ಟಿನಲ್ಲಿ ನಾವು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.

No Comments

Leave A Comment