Log In
BREAKING NEWS >
```````ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆಮತ್ತು ಅಭಿಮಾನಿಗಳಿಗೆ ಶ್ರೀಗೌರಿ-ಗಣೇಶ ಹಬ್ಬದ ಶುಭಾಶಯಗಳು````````

ಪೈಪ್ ನಲ್ಲಿ ನೋಟು ಬಂದ ಕಥೆ! ಎಸಿಬಿ ಅಧಿಕಾರಿಗಳು ಯಾವ್ಯಾವ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿದರು, ಸಿಕ್ಕಿದ ಸಂಪತ್ತೆಷ್ಟು?

ಬೆಂಗಳೂರು/ ಕಲಬುರಗಿ: ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ನಿನ್ನೆ(ನ.24) ಬೆಳಗ್ಗೆಯಿಂದಲೇ ಸರ್ಕಾರದ ವಿವಿಧ ಇಲಾಖೆಗಳ 15 ಅಧಿಕಾರಿಗಳ ನಿವಾಸ, ಕಚೇರಿಗಳ ಮೇಲೆ ದಾಳಿ ನಡೆಸಿ ಅಪಾರ ಪ್ರಮಾಣದ ಅಕ್ರಮ ಸಂಪತ್ತು ಗಳಿಕೆ ಪತ್ತೆಯಾಗಿದೆ. ನಿನ್ನೆ ಕೇವಲ 15 ಅಧಿಕಾರಿಗಳ ನಿವಾಸ ಮೇಲೆ ದಾಳಿ ನಡೆಸಿ ಸಿಕ್ಕಿದ ಅಕ್ರಮ ಆಸ್ತಿ, ನಗ-ನಾಣ್ಯಗಳಲ್ಲಿ 1 ಕೋಟಿಯ 53 ಲಕ್ಷದ 89 ಸಾವಿರ ನಗದು ಮತ್ತು 16.495 ಕೆಜಿ ಚಿನ್ನವಾಗಿದೆ.

ನಿನ್ನೆ ಕಲಬುರಗಿಯ ಸಾರ್ವಜನಿಕ ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಶಾಂತಗೌಡ ಬಿರಾದರ್ ಅವರ ಮನೆ ಮೇಲೆ ಎಸಿಬಿ ದಾಳಿ ನಡೆಸಿದಾಗ ಅಕ್ಷರಶಃ ನಾಟಕೀಯ ಬೆಳವಣಿಗೆ ನಡೆದಿದ್ದು ಇಡೀ ರಾಜ್ಯದ ಜನತೆ ಕಣ್ಣುಬಾಯಿ ಬಿಟ್ಟು ನೋಡುವಂತೆ ಮಾಡಿದೆ. ಅಕ್ರಮ ಆಸ್ತಿ, ಸಂಪತ್ತು ಗಳಿಕೆಯ ವಾಸನೆಯ ಜಾಡು ಹಿಡಿದು ಹೊರಟ ಎಸಿಬಿ ಅಧಿಕಾರಿಗಳು ನಿನ್ನೆ ಬೆಳಗ್ಗೆ 9 ಗಂಟೆ ಹೊತ್ತಿಗೆ ಶಾಂತಗೌಡ ಅವರ ಮನೆ ಬಾಗಿಲು ಬಡಿದರು. ಆದರೆ 10 ನಿಮಿಷವಾದರೂ ಬಾಗಿಲು ತೆಗೆಯಲಿಲ್ಲ. ಆಗಲೇ ಎಸಿಬಿ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸಂಶಯ ಬಂದಿತ್ತು.

ಮನೆಯೊಳಗೆ ಹೋದವರೇ ಮೂಲೆಮೂಲೆಯಲ್ಲಿ ಹುಡುಕಾಡಿದರು. ಆದರೆ ಏನೂ ಸಂಶಯ ಬರಲಿಲ್ಲ. ನೆರೆಮನೆಯವರಿಂದ ಮಾಹಿತಿ ಪಡೆದು ಎಸಿಬಿ ಸಿಬ್ಬಂದಿ ಶಾಂತಗೌಡ ಅವರ ಮನೆಯಲ್ಲಿ ನೀರು ಹರಿಯದೆ ಇದ್ದ ಪೈಪನ್ನು ತಲಾಶ್ ಮಾಡಲು ಮುಂದಾದರು. ಪೊಲೀಸರು ಪ್ಲಂಬರ್ ನ್ನು ಬರಲು ಹೇಳಿ ನೀರು ಪೈಪ್ ನ್ನು ತುಂಡರಿಸಿದಾಗ ಅಲ್ಲಿ ಸಿಕ್ಕಿದ್ದು ಕಂಡು ನಿಜಕ್ಕೂ ದಂಗಾದರು. ನಲ್ಲಿಯಲ್ಲಿ ನೀರು ಬರುವುದು ಹಳೆ ಕಥೆ, ನಲ್ಲಿಯಲ್ಲಿ ನೋಟು ಬರುವುದು ಹೊಸ ಕಥೆಯೆಂಬಂತೆ 500 ರೂಪಾಯಿಗಳ ಬಂಡಲ್ ಗಳೇ ಉದುರತೊಡಗಿದವು. ಹೀಗೆ ಹುಡುಕಿದಾಗ ಪೈಪ್ ಒಳಗೆ ಸಿಕ್ಕಿದ್ದು ಬರೋಬ್ಬರಿ 13.50 ಲಕ್ಷ ರೂಪಾಯಿ.

ಸೀಲಿಂಗ್‌ನಲ್ಲಿರುವ ಕಂಪಾರ್ಟ್‌ಮೆಂಟ್‌ನಲ್ಲಿ ಬಚ್ಚಿಟ್ಟಿದ್ದ ಇನ್ನೂ 6 ಲಕ್ಷ ರೂಪಾಯಿ ಹೀಗೆ ಬಿರಾದಾರ್ ಅವರಿಂದ ಒಟ್ಟು 54.50 ಲಕ್ಷ ನಗದು, 36 ಎಕರೆ ಕೃಷಿ ಭೂಮಿಗೆ ಸಂಬಂಧಿಸಿದ ದಾಖಲೆಗಳು ಮತ್ತು ಇತರ ಮೂರು ಆಸ್ತಿಗಳನ್ನು ವಶಪಡಿಸಿಕೊಳ್ಳಲಾಗಿದೆ. ವಾಹನಗಳಲ್ಲಿ ಶಾಲಾ ಬಸ್ ಸಹ ವಶಪಡಿಸಿಕೊಳ್ಳಲಾಗಿದೆ. ನಿನ್ನೆ ರಾತ್ರಿಯವರೆಗೆ ಎಸಿಬಿ ದಾಳಿ ಮುಂದುವರಿದಿತ್ತು.

ರಾಜ್ಯದ ಯಾವ ಅಧಿಕಾರಿಗಳ ಮನೆ ಮೇಲೆ ದಾಳಿ, ಸಿಕ್ಕಿದ್ದೆಷ್ಟು? 
ಟಿ.ಎಸ್.ರುದ್ರೇಶಪ್ಪ, ಜಂಟಿ ನಿರ್ದೇಶಕರು, ಕೃಷಿ ಇಲಾಖೆ, ಗದಗ– ಶಿವಮೊಗ್ಗದಲ್ಲಿ 2 ಮನೆ, 4 ನಿವೇಶನ, 9 ಸಾವಿರದ 400 ಕೆಜಿ ಚಿನ್ನಾಭರಣಗಳು, 3 ಕೆಜಿ ಬೆಳ್ಳಿ ವಸ್ತುಗಳು, 2 ಕಾರುಗಳು, 3 ದ್ವಿಚಕ್ರ ವಾಹನಗಳು, 8 ಎಕರೆ ಜಮೀನು, 15.94 ಲಕ್ಷ ರೂ ನಗದು, 20 ಲಕ್ಷ ರೂಪಾಯಿ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು.

ಶ್ರೀನಿವಾಸ್ ಕೆ, ಕಾರ್ಯಕಾರಿ ಎಂಜಿನಿಯರ್, ಹೇಮಾವತಿ ಎಡದಂಡೆ ಕಾಲುವೆ-3, ಕೆಆರ್ ಪೇಟೆ ಉಪವಿಭಾಗ, ಮಂಡ್ಯದಲ್ಲಿ 1 ಮನೆ, 1 ಫ್ಲಾಟ್, ಮೈಸೂರಿನಲ್ಲಿ 2 ನಿವೇಶನ, 4.34 ಎಕರೆ ಕೃಷಿ ಭೂಮಿ, ನಂಜನಗೂಡಿನಲ್ಲಿ 1 ತೋಟದ ಮನೆ, 2 ಕಾರು, 2 ದ್ವಿಚಕ್ರ ವಾಹನ, 1 ಕೆಜಿ ಚಿನ್ನ, 8.840 ಕೆಜಿ ಬೆಳ್ಳಿ ವಸ್ತುಗಳು, 9.85 ಲಕ್ಷ ರೂಪಾಯಿ ನಗದು, 22 ಲಕ್ಷ ಠೇವಣಿ, 8 ಲಕ್ಷ ರೂಪಾಯಿ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು.

ಕೆ.ಎಸ್.ಲಿಂಗೇಗೌಡ, ಕಾರ್ಯಕಾರಿ ಎಂಜಿನಿಯರ್, ಸ್ಮಾರ್ಟ್ ಸಿಟಿ, ಮಂಗಳೂರು ಮಹಾನಗರ ಪಾಲಿಕೆ – ಮಂಗಳೂರಿನಲ್ಲಿ 1 ಮನೆ, ಚಾಮರಾಜನಗರ ಮತ್ತು ಮಂಗಳೂರಿನಲ್ಲಿ 3 ನಿವೇಶನಗಳು, 2 ಕಾರುಗಳು, 1 ದ್ವಿಚಕ್ರ ವಾಹನ, 1 ಕೆಜಿ ಬೆಳ್ಳಿ ವಸ್ತುಗಳು, 10 ಲಕ್ಷ ರೂಪಾಯಿ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು.

ಎಲ್.ಸಿ.ನಾಗರಾಜ್, ಆಡಳಿತಾಧಿಕಾರಿ, ಸಕಾಲ ಮಿಷನ್, ಎಂಎಸ್ ಬಿಲ್ಡಿಂಗ್, ಬೆಂಗಳೂರು – ಬೆಂಗಳೂರು ನಗರದಲ್ಲಿ 1 ಮನೆ ಮತ್ತು 1 ನಿವೇಶನ, ನೆಲಮಂಗಲದಲ್ಲಿ 1 ಮನೆ, 11.26 ಎಕರೆ ಜಮೀನು, 1 ಕೈಗಾರಿಕಾ ಉದ್ದೇಶದ ಕಟ್ಟಡ, 3 ಕಾರುಗಳು, 1.76 ಕೆಜಿ ಚಿನ್ನ, 7.284 ಕೆಜಿ ಬೆಳ್ಳಿ ಸಾಮಾನುಗಳು, 43 ಲಕ್ಷ ರೂಪಾಯಿ ನಗದು, ಗೃಹೋಪಯೋಗಿ ವಸ್ತುಗಳು, 14 ಲಕ್ಷ ರೂಪಾಯಿ ಬೆಲೆ ಬಾಳುವ ಗೃಹೋಪಯೋಗಿ ವಸ್ತುಗಳು.

ಜಿ.ವಿ.ಗಿರಿ, ಗ್ರೂಪ್-ಡಿ ನೌಕರ, ಬಿಬಿಎಂಪಿ ಬಾಲಕರ ಮತ್ತು ಬಾಲಕಿಯರ ಪ್ರೌಢಶಾಲೆ, ಮಾರಪ್ಪನಪಾಳ್ಯ, ಯಶವಂತಪುರ, ಬೆಂಗಳೂರಿನಲ್ಲಿ 6 ಮನೆಗಳು, 4 ಕಾರುಗಳು, 4 ದ್ವಿಚಕ್ರ ವಾಹನಗಳು, 8 ಕೆಜಿ ಬೆಳ್ಳಿ ವಸ್ತುಗಳು, ನಗದು ರೂ. 1.18 ಲಕ್ಷ, ಗೃಹೋಪಯೋಗಿ ವಸ್ತುಗಳು 15 ಲಕ್ಷ ರೂಪಾಯಿ ಮೌಲ್ಯದ್ದು.

ಎಸ್.ಎಸ್.ರಾಜಶೇಖರ್, ಫಿಸಿಯೋಥೆರಪಿಸ್ಟ್, ಸರ್ಕಾರಿ ಆಸ್ಪತ್ರೆ, ಯಲಹಂಕ, ಬೆಂಗಳೂರು – ಯಲಹಂಕದಲ್ಲಿ 2 ಫ್ಲಾಟ್‌ಗಳು, 1 ಸೈಟ್ ಮತ್ತು 1 ಕ್ಲಿನಿಕ್, 1 ಕಾರು, 1 ದ್ವಿಚಕ್ರ ವಾಹನ, ಗೃಹೋಪಯೋಗಿ ವಸ್ತುಗಳು 4 ಲಕ್ಷ ರೂ ಮೌಲ್ಯದ್ದು.

ಮಾಯಣ್ಣ, ಪ್ರಥಮ ವಿಭಾಗದ ಸಹಾಯಕ, ಬಿಬಿಎಂಪಿ ಕೇಂದ್ರ ಕಚೇರಿ, ಬೆಂಗಳೂರು – ಬೆಂಗಳೂರಿನಲ್ಲಿ 4 ಮನೆಗಳು, ವಿವಿಧೆಡೆ 6 ನಿವೇಶನಗಳು, 2 ಎಕರೆ ಕೃಷಿ ಭೂಮಿ, 1 ಕಾರು, 2 ದ್ವಿಚಕ್ರ ವಾಹನ, 59 ಸಾವಿರ ರೂಪಾಯಿ ನಗದು, 10 ಲಕ್ಷ ಎಫ್‌ಡಿ, 1.50 ಲಕ್ಷ ಬ್ಯಾಂಕ್ ಠೇವಣಿ, 600 ಗ್ರಾಂ ಚಿನ್ನ, 3 ಕಡೆ ಬೇನಾಮಿ ಆಸ್ತಿ, ಗೃಹೋಪಯೋಗಿ ವಸ್ತುಗಳು 12 ಲಕ್ಷ.

ಕೆ.ಎಸ್.ಶಿವಾನಂದ್, ನಿವೃತ್ತ ಉಪನೋಂದಣಾಧಿಕಾರಿ, ಬಳ್ಳಾರಿ- ಮಂಡ್ಯದಲ್ಲಿ 1 ಮನೆ, ಬೆಂಗಳೂರಿನಲ್ಲಿ 1 ನಿವೇಶನ, 1 ಕಾರು, 2 ದ್ವಿಚಕ್ರ ವಾಹನ, 1 ವಾಣಿಜ್ಯ ಸಂಕೀರ್ಣ, 1 ವಾಣಿಜ್ಯ ಸಂಕೀರ್ಣ, ಬಳ್ಳಾರಿಯಲ್ಲಿ 7 ಎಕರೆ ಕೃಷಿ ಭೂಮಿ, ಗೃಹೋಪಯೋಗಿ ವಸ್ತುಗಳು 8 ಲಕ್ಷ ರೂಪಾಯಿ ಮೌಲ್ಯದ್ದು.

ದಾಶಿವ ರಾಯಪ್ಪ ಮರಲಿಂಗಣ್ಣನವರ್, ಹಿರಿಯ ಮೋಟಾರು ನಿರೀಕ್ಷಕರು, ಗೋಕಾಕ, ಬೆಳಗಾವಿ – ಬೆಳಗಾವಿಯಲ್ಲಿ 1 ಮನೆ, 22 ಎಕರೆ ಕೃಷಿ ಭೂಮಿ, 1.135 ಕೆಜಿ ಚಿನ್ನಾಭರಣ, 8.22 ಲಕ್ಷ ರೂ ಮೌಲ್ಯದ್ದು, 14 ಲಕ್ಷ ರೂಪಾಯಿ ಮೌಲ್ಯದ್ದು ಗೃಹೋಪಯೋಗಿ ವಸ್ತುಗಳು.

ಅಡವಿ ಸಿದ್ದೇಶ್ವರ ಕರೆಪ್ಪ ಮಾಸ್ತಿ, ಅಭಿವೃದ್ಧಿ ಅಧಿಕಾರಿ, ಸಹಕಾರ ಇಲಾಖೆ, ರಾಯಬಾಗ ತಾಲೂಕು, ಬೆಳಗಾವಿ – 2 ಮನೆ, ಬೈಲಹೊಂಗಲದಲ್ಲಿ 4 ನಿವೇಶನ, 4 ಕಾರು, 6 ದ್ವಿಚಕ್ರ ವಾಹನ, 263 ಗ್ರಾಂ ಚಿನ್ನಾಭರಣ, 945 ಗ್ರಾಂ. ಬೆಳ್ಳಿ, ಬ್ಯಾಂಕ್ ಠೇವಣಿ ಮತ್ತು ಷೇರುಗಳು 1.50 ಲಕ್ಷ ರೂಪಾಯಿ ಮೌಲ್ಯದ್ದು, 1.10 ಲಕ್ಷ ರೂಪಾಯಿ ಮೌಲ್ಯದ್ದು, 5 ಲಕ್ಷ ರೂಪಾಯಿ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು.

ನಾತಾಜಿ ಪಿರಾಜಿ ಪಾಟೀಲ್, ಲೈನ್ ಮೆಕ್ಯಾನಿಕ್ ಗ್ರೇಡ್-2, ಹೆಸ್ಕಾಂ, ಬೆಳಗಾವಿ- 1 ಮನೆ, ಬೆಳಗಾವಿಯಲ್ಲಿ 2 ನಿವೇಶನ, 1 ಕಾರು, 1 ದ್ವಿಚಕ್ರ ವಾಹನ, 239 ಗ್ರಾಂ ಚಿನ್ನಾಭರಣ, 1.803 ಕೆಜಿ ಬೆಳ್ಳಿ, 38 ಸಾವಿರ ರೂಪಾಯಿ ನಗದು, 20 ಲಕ್ಷ ರೂಪಾಯಿ ಮೌಲ್ಯದ ಗೃಹೋಪಯೋಗಿ ವಸ್ತುಗಳು.

ಲಕ್ಷಿನರಸಿಂಹಯ್ಯ, ಖಜಾನೆ ನಿರೀಕ್ಷಕರು, ಕಸಬಾ-2, ದೊಡ್ಡಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆ- ದೊಡ್ಡಬಳ್ಳಾಪುರದಲ್ಲಿ 5 ಮನೆ, 6 ನಿವೇಶನ, 25 ಎಕರೆ ಜಮೀನು, 765 ಗ್ರಾಂ ಚಿನ್ನ, 15 ಕೆಜಿ ಬೆಳ್ಳಿ, 1 ಕಾರು, 2 ದ್ವಿಚಕ್ರ ವಾಹನ, 1.13 ಲಕ್ಷ ರೂಪಾಯಿ ನಗದು.

ವಾಸುದೇವ್ ಆರ್.ವಿ., ಮಾಜಿ ಯೋಜನಾ ನಿರ್ದೇಶಕರು, ನಿರ್ಮಿತಿ ಕೇಂದ್ರ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಬೆಂಗಳೂರು ಗ್ರಾಮಾಂತರ ಜಿಲ್ಲೆ – ಬೆಂಗಳೂರಿನಲ್ಲಿ 5 ಮನೆಗಳು ಮತ್ತು 8 ನಿವೇಶನಗಳು, ನೆಲಮಂಗಲದ ಸೋಂಪುರದಲ್ಲಿ 4 ಮನೆಗಳು, ನೆಲಮಂಗಲ ಮತ್ತು ಮಾಗಡಿ ತಾಲೂಕಿನಲ್ಲಿ 10.20 ಎಕರೆ ಕೃಷಿ ಭೂಮಿ, 850 ಗ್ರಾಂ ಚಿನ್ನ, 9.5 ಕೆಜಿ ಬೆಳ್ಳಿ, 15 ಲಕ್ಷ ರೂಪಾಯಿ ನಗದು, 98 ಲಕ್ಷ ರೂಪಾಯಿ ಮೌಲ್ಯದ ಗೃಹೋಪಯೋಗಿ ವಸ್ತುಗಳು.

ಬಿ ಕೃಷ್ಣಾರೆಡ್ಡಿ, ಜಿಎಂ, ನಂದಿನಿ ಮಿಲ್ಕ್ ಪ್ರಾಡಕ್ಟ್ಸ್, ಬೆಂಗಳೂರು- 3 ಮನೆಗಳು, 9 ನಿವೇಶನಗಳು, ಚಿಂತಾಮಣಿಯಲ್ಲಿ 5.30 ಎಕರೆ ಕೃಷಿ ಭೂಮಿ, ಹೊಸಕೋಟೆಯಲ್ಲಿ 1 ಪೆಟ್ರೋಲ್ ಪಂಪ್, 383 ಗ್ರಾಂ ಚಿನ್ನ, 3.395 ಕೆಜಿ ಬೆಳ್ಳಿ, ನಗದು 3 ಲಕ್ಷ ರೂಪಾಯಿ.

ಎಸಿಬಿ ಬಲೆಗೆ ಬಿದ್ದ ಅತಿದೊಡ್ಡ ಕುಳವೆಂದರೆ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನಲ್ಲಿ ಲೋಕೋಪಯೋಗಿ ಇಲಾಖೆಯ ಜ್ಯೂನಿಯರ್ ಎಂಜಿನಿಯರ್ ಎಸ್ ಎಂ ಬಿರಾದಾರ್. ಕಲಬುರಗಿಯಲ್ಲಿ ಇವರು 2 ಮನೆ, ಬೆಂಗಳೂರಿನಲ್ಲಿ 1 ನಿವೇಶನ, 3 ಕಾರು, 1 ದ್ವಿಚಕ್ರ ವಾಹನ, 1 ಶಾಲಾ ಬಸ್, 2 ಟ್ರ್ಯಾಕ್ಟರ್, 54.50 ಲಕ್ಷ ನಗದು, 100 ಗ್ರಾಂ ಚಿನ್ನ, 36 ಎಕರೆ ಕೃಷಿ ಭೂಮಿ, 12 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು ಇವರ ಬಳಿ ಪತ್ತೆಯಾಗಿವೆ.

No Comments

Leave A Comment