Log In
BREAKING NEWS >
ಡಿಸೆ೦ಬರ್ 08 ರಿ೦ದ ಡಿಸೆ೦ಬರ್ 15ರವರೆಗೆ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 93ನೇ ಭಜನಾ ಸಪ್ತಾಹಮಹೋತ್ಸವವು ಜರಗಲಿದೆ- ಪ್ರತಿ ನಿತ್ಯವೂ ಪೇಟೆ ಉತ್ಸವ,ತೊಟ್ಟಿಲ ಸೇವೆ,ಕಾಕಡಾರತಿ ಕಾರ್ಯಕ್ರಮವು ಜರಗಲಿದೆ....

ಪೇಜಾವರ ಹಿರಿಯ ಶ್ರೀಗಳ ಬಗ್ಗೆ ಹೇಳಿಕೆ: ಸಂಗೀತ ನಿರ್ದೇಶಕ ಹಂಸಲೇಖ ವಿಚಾರಣೆಗೆ ಹಾಜರು, ಪೊಲೀಸ್ ಠಾಣೆ ಬಳಿ ಹೈಡ್ರಾಮಾ

ಬೆಂಗಳೂರು: ದಲಿತರ ಮನೆಯಲ್ಲಿ ಬಲಿತರು ಬಂದು ಮಾಂಸಾಹಾರ ಸೇವಿಸುವುದು, ಪೇಜಾವರದ ಹಿರಿಯ ಯತಿಗಳು ದಲಿಕೇರಿಗೆ ಹೋಗುತ್ತಿದ್ದ ಬಗ್ಗೆ ಹೇಳಿಕೆ ನೀಡಿ ತೀವ್ರ ವಿವಾದ ಉಂಟಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದ ಹಿನ್ನೆಲೆಯಲ್ಲಿ ಹಿರಿಯ ಸಂಗೀತ ನಿರ್ದೇಶಕ ಡಾ ಹಂಸಲೇಖ ಗುರುವಾರ ಬಸವನಗುಡಿ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದಾರೆ.

ಹಂಸಲೇಖ ಸಮಾಜದಲ್ಲಿ ಸ್ವಾಸ್ಥ್ಯ ಕೆಡಿಸಲು ಪ್ರಯತ್ನಿಸಿದ್ದಾರೆ, ಪೇಜಾವರ ಶ್ರೀಗಳ ಬಗ್ಗೆ ಹೇಳಿಕೆ ನೀಡಿ ಅವಮಾನ ಮಾಡಿದ್ದಾರೆ ಎಂದು ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೊಟೀಸ್ ನೀಡಿದ್ದರು. ಇಷ್ಟು ದಿನ ವಿಚಾರಣೆಗೆ ಸಮಯಾವಕಾಶ ಕೇಳಿದ್ದ ಸಂಗೀತ ನಿರ್ದೇಶಕರು ಇಂದು ಮಧ್ಯಾಹ್ನ ತೀವ್ರ ಭದ್ರತೆ ನಡುವೆ ಪೊಲೀಸ್ ಠಾಣೆಗೆ ಆಗಮಿಸಿದರು.

ಈ ಸಂದರ್ಭದಲ್ಲಿ ಪೊಲೀಸ್ ಠಾಣೆ ಮುಂದೆ ಹೈಡ್ರಾಮವೇ ನಡೆಯಿತು. ಹಂಸಲೇಖ ಪರ ಮತ್ತು ವಿರೋಧಿಗಳು ಪ್ರತಿಭಟನೆ ನಡೆಸಿದರು. ಈ ಮಧ್ಯೆ ನಟ ಚೇತನ್ ಹಂಸಲೇಖ ಪರ ವಹಿಸಿ ಮಾತನಾಡಿ ನಾನು ಕೂಡ ಪೊಲೀಸ್ ಠಾಣೆಗೆ ಬಂದು ಅವರಿಗೆ ಸಾಥ್ ಕೊಡುತ್ತೇನೆ ಎಂದಿದ್ದರು.

ಅದಕ್ಕೆ ಭಜರಂಗದಳ ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತಪಡಿಸಿದ್ದು ಚೇತನ್ ಬಂದರೆ ಕಪ್ಪು ಬಾವುಟ ಪ್ರದರ್ಶಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಭಜರಂಗದಳ ಮುಖಂಡ ತೇಜಸ್ ಮಾತನಾಡಿ, ಸಂಗೀತ ನಿರ್ದೇಶಕ ಹಂಸಲೇಖ ಅವರು ಬೇಷರತ್ ಕ್ಷಮೆಯಾಚಿಸಬೇಕು. ಈ ವಿಷಯದಲ್ಲಿ ನಟ ಚೇತನ್ ಏಕೆ ಮಧ್ಯೆ ಪ್ರವೇಶಿಸಬೇಕು, ಚೇತನ್ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ, ಚೇತನ್ ಈ ದೇಶದ ನಾಗರಿಕನೇ ಅಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

ಈ ಮಧ್ಯೆ ಬಸವನಗುಡಿ ಪೊಲೀಸ್ ಠಾಣೆ ಬಳಿ ಬಂದ ನಟ ಚೇತನ್ ಮತ್ತು ಕಾರ್ಯಕರ್ತರನ್ನು ಪೊಲೀಸರು ತಡೆದ ಪ್ರಸಂಗ ನಡೆಯಿತು. ಹಂಸಲೇಖ ಅವರಿಗೆ ಚೇತನ್ ಜೊತೆಗೆ ವಿವಿಧ ಕನ್ನಡಪರ ಸಂಘಟನೆಗಳು ಬೆಂಬಲ ಸೂಚಿಸಿವೆ.

ಪೊಲೀಸ್ ಠಾಣೆಯ ಮುಂದೆ ಪರ ವಿರೋಧಿಗಳು ಸೇರಿ ಪ್ರತಿಭಟನೆ ಮಾಡುತ್ತಿರುವುದರಿಂದ ವಿಪರೀತ ಗೊಂದಲ, ಹಾಗೂ ಮತ್ತಷ್ಟು ಸಮಸ್ಯೆ ಏರ್ಪಟ್ಟಿದೆ.

No Comments

Leave A Comment