Log In
BREAKING NEWS >
ನವೆ೦ಬರ್ 22ರಿ೦ದ ನವೆ೦ಬರ್ 27ರವರೆಗೆ ಉಡುಪಿಯ ಮಹತೋಭಾರ ಶ್ರೀಚ೦ದ್ರಮೌಳೀಶ್ವರ ದೇವರ ಕಾಲಾವಧಿ ರಥೋತ್ಸವ ಜರಗಲಿದೆ....,,,ನವೆ೦ಬರ್ 28ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 94 ನೇ ಭಜನಾ ಸಪ್ತಾಹಮಹೋತ್ಸವ ಆರ೦ಭ....

ಭಾರಿ ಮಳೆ: ಬೆಂಗಳೂರಿನ ಹಲವು ಪ್ರದೇಶಗಳು ಜಲಾವೃತ, ಬಿಬಿಎಂಪಿ ಆಯುಕ್ತರಿಂದ ಪರಿಶೀಲನೆ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಳೆ (Bengaluru Rains) ಮುಂದುವರೆದಿರುವಂತೆಯೇ ನಗರದ ಹಲವು ಪ್ರದೇಶಗಳು ಜಲಾವೃತ್ತವಾಗಿದ್ದು, ಮಳೆ ಪೀಡಿತ ಪ್ರದೇಶಗಳಲ್ಲಿ ಇಂದು ಬಿಬಿಎಂಪಿ (BBMP) ಆಯುಕ್ತ ಗೌರವ್ ಗುಪ್ತ (Gaura Gupta) ಪರಿಶೀಲನೆ ನಡೆಸಿದರು.

ಬೆಂಗಳೂರಿನ ಯಲಹಂಕ (Yelahanka), ಚಿಕ್ಕಬಳ್ಳಾಪುರ ಮುಖ್ಯ ರಸ್ತೆ, ಅಲ್ಲಾಳಸಂದ್ರ, ಕೋಗಿಲು ಕ್ರಾಸ್ (Kogilu Corss), ಕೆಂಪೇಗೌಡ ವಿಮಾನ ನಿಲ್ದಾಣ ರಸ್ತೆ (KIA Main Road), ಕೇಂದ್ರೀಯ ವಿಹಾರ್ ಅಪಾರ್ಟ್‌ಮೆಂಟ್ (Kendriya Vihar apartment)​ ನಿಂದ ವೆಂಕಟಾಲ ಗ್ರಾಮದವರೆಗಿನ ಹಲವು ಪ್ರದೇಶಗಳು ಜಲಾವೃತವಾಗಿವೆ.

ಪ್ರಮುಖವಾಗಿ ಯಲಹಂಕದಲ್ಲಿ ಪೊಲೀಸ್ ಠಾಣೆ ಬಳಿಯ ಮುಖ್ಯ ರಸ್ತೆಗಳು ಜಲಾವೃತವಾಗಿದ್ದು, ಪರಿಣಾಮ ಜಲಾವೃತವಾದ ರಸ್ತೆಯಲ್ಲೇ ಹಲವು ವಾಹನಗಳು ಕೆಟ್ಟು ನಿಂತಿವೆ. ಮಳೆಯಿಂದಾಗಿ ಸುಮಾರು 25ಕ್ಕೂ ಹೆಚ್ಚು ವಾಹನಗಳಿಗೆ ಹಾನಿಯಾಗಿವೆ ಎಂದು ತಿಳಿದುಬಂದಿದೆ. ಅಂತೆಯೇ ವಿದ್ಯಾರಣ್ಯಪುರದ ವಿಎಸ್ ಲೇಔಟ್​ನಲ್ಲಿ ಮನೆಗೆ ಮಳೆ ನೀರು ನುಗ್ಗಿ ಸ್ಥಳೀಯ ನಿವಾಸಿಗಳು ಪರದಾಡುತ್ತಿದ್ದಾರೆ. ರಾತ್ರಿ ಸುರಿದ ಭಾರಿ ಮಳೆಗೆ ಬೆಂಗಳೂರು ಚಿಕ್ಕಬಳ್ಳಾಪುರ ಮುಖ್ಯ ರಸ್ತೆ ಸಂಪೂರ್ಣ ಜಲಾವೃತವಾಗಿದ್ದು, ಅರ್ಧ ಕಿಲೋಮೀಟರ್ ನಷ್ಟು ದೂರ ರಸ್ತೆ ಹೊಳೆಯಂತಾಗಿದೆ. ರಸ್ತೆಯ ಹಿಂಭಾಗದಲ್ಲಿರುವ ಕೆರೆ ನೀರು ರಸ್ತೆಗೆ ಬಂದಿದೆ. ಹೀಗಾಗಿ ರಸ್ತೆಯಲ್ಲಿ ಹಲವಾರು ವಾಹನಗಳು, ಪೆಟ್ರೋಲ್ ಬಂಕ್, ಅಂಗಡಿ, ಶೋ ರೂಮ್ ಜಲಾವೃತವಾಗಿವೆ.

ಇನ್ನು ಯಲಹಂಕದ ಅಮಾನಿ ಕೆರೆ ಕೋಡಿ ಬಿದ್ದ ಪರಿಣಾಮ ಕೆರೆಯ ನೀರು ಸಮೀಪದ ಕೇಂದ್ರೀಯ ವಿಹಾರ ಅಪಾರ್ಟ್​ಮೆಂಟ್ (Kendriya Vihar apartment)​ಗೆ ನುಗ್ಗಿದೆ. ನವೆಂಬರ್ 18ರಂದು ಅಪಾರ್ಟ್​ಮೆಂಟ್​ಗೆ ನುಗ್ಗಿದ್ದ ನೀರನ್ನು 2 ದಿನ ಹರಸಾಹಸಪಟ್ಟು ಹೊರಗೆ ಹಾಕಲಾಗಿತ್ತು. ಇದೀಗ ರಾತ್ರಿ ಸುರಿದ ಮಳೆಗೆ ಮತ್ತೆ ನೀರು ನುಗ್ಗಿದ್ದು, ಅಪಾರ್ಟ್​ಮೆಂಟ್​ನ 8 ಬ್ಲಾಕ್​ಗಳಿಗೆ ನೀರು ನುಗ್ಗಿದೆ. 8 ಬ್ಲಾಕ್​ಗಳ ಬೇಸ್ಮೆಂಟ್​ನಲ್ಲಿ 3 ಅಡಿ ನೀರು ಸಂಗ್ರಹವಾಗಿದ್ದು, ಅಪಾರ್ಟ್​ಮೆಂಟ್​ಗೆ ವಿದ್ಯುತ್ ಸರಬರಾಜು ಸ್ಥಗಿತವಾಗಿದೆ.

ನೀರಿನ ಜೊತೆಯಲ್ಲಿ ಹಾವು, ಚೇಳುಗಳು ಮನೆಗೆ ನುಗ್ಗಿದ್ದರಿಂದ ನಿವಾಸಿಗಳು ಆತಂಕದಲ್ಲಿದ್ದಾರೆ. ಬೆಂಗಳೂರಿನ ಅಲ್ಲಾಳಸಂದ್ರದ ಕೆಲವು ಪ್ರದೇಶಗಳು ಜಲಾವೃತವಾಗಿದ್ದು, ಮನೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ವಸ್ತು ನೀರುಪಾಲಾಗಿವೆ. ನಗರದ ಕೋಗಿಲು ಕ್ರಾಸ್ ಬಳಿ ರಸ್ತೆ ಜಲಾವೃತವಾಗಿದ್ದು, ಕೋಗಿಲು ಕ್ರಾಸ್​ನ 3 ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಆಗಿತ್ತು. ಏರ್​ಪೋರ್ಟ್​, ಕೋಗಿಲು, ಯಲಹಂಕ ರಸ್ತೆ ಜಾಮ್ ಆಗಿತ್ತು. ಕೆಲಸ ಕಾರ್ಯಗಳಿಗೆ ಹೋಗುವುದಕ್ಕೆ ಜನರು ಪರದಾಡುವಂತಾಗಿದೆ.

ಬಿಬಿಎಂಪಿ ಆಯುಕ್ತರ ಭೇಟಿ
ಇನ್ನು ಜಲಾವೃತ್ತ ಪ್ರದೇಶಗಳಿಗೆ ಬಿಬಿಎಂ ಆಯುಕ್ತ ಗೌರವ್ ಗುಪ್ತಾ ಅಧಿಕಾರಿಗಳ ಸಹಿತ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಯಲಹಂಕ ಸಮೀಪದ ಕೇಂದ್ರೀಯ ವಿಹಾರ ಅಪಾರ್ಟ್​ಮೆಂಟ್​ಗೆ ಭೇಟಿ ನೀಡಿದ ಗೌರವ್ ಗುಪ್ತಾ ಅವರು ಪರಿಶೀಲನೆ ನಡೆಸಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಕಾರ್ಯಾಚರಣೆ ಕುರಿತು ಮಾತುಕತೆ ನಡೆಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಲಿ ಪರಿಸ್ಥಿತಿಯಲ್ಲಿ ಇಲ್ಲಿರುವ 8 ಅಡಿ ಮಳೆನೀರಿನ ಚರಂಡಿಯು ಸಾಲುತ್ತಿಲ್ಲ. ಇಲ್ಲಿ 30-40 ಅಡಿ ಅಗಲದ ಡ್ರೈನ್‌ ಸಿಸ್ಟಮ್ ನ ಅಗತ್ಯವಿದೆ. ಈ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ವಿಶೇಷವಾಗಿ ಆರ್‌ಸಿಸಿ ಸಿಮೆಂಟ್ ಮತ್ತು ಕಾಂಕ್ರೀಟ್ ಗೋಡೆಗಳ ಚರಂಡಿ ಕಾಮಗಾರಿ ನಡೆಸುತ್ತೇವೆ ಎಂದು ಹೇಳಿದರು.

ಅಂತೆಯೇ ಎಂಜಿನಿಯರಿಂಗ್ ದೃಷ್ಟಿಕೋನದಿಂದ ಪ್ರಸ್ತುತ ಇಲ್ಲಿ ಅಂತಹ ಗಂಭೀರ ಪರಿಸ್ಥಿತಿ ನಿರ್ಮಾಣವಾಗಿಲ್ಲ. ಶೀಘ್ರದಲ್ಲೇ ನೀರಿನ ಪ್ರಮಾಣ ತಗ್ಗಲಿದೆ. ನಿವಾಸಿಗಳಿಗೆ ತುರ್ತು ಸಾಮಗ್ರಿಗಳನ್ನು ನೀಡಲು ನಾವು ಅನೇಕ ದೋಣಿಗಳು, SDRF ಮತ್ತು ಇತರ ತಂಡಗಳನ್ನು ನಿಯೋಜಿಸಿದ್ದೇವೆ. ಅಪಾರ್ಟ್ ಮೆಂಟ್ ನಲ್ಲಿ ಸಿಲುಕಿರುವ ನಿವಾಸಿಗಳಿಗೆ, ಹಾಲು, ಬ್ರೆಡ್, ಬಿಸ್ಕತ್ ಗಳನ್ನು ವಿತರಿಸಲಾಗುತ್ತಿದೆ ಎಂದು ಗೌರವ್ ಗುಪ್ತಾ ಮಾಹಿತಿ ನೀಡಿದರು.

No Comments

Leave A Comment