ಮಂಗಳೂರು: 1.92 ಕೋಟಿ ಮೌಲ್ಯದ ಅಮಾನ್ಯಗೊಂಡ ನೋಟು ಸಾಗಾಟ – ಮೂವರು ಅಂದರ್
ಮ೦ಗಳೂರು, ನ.19: ಅಮಾನ್ಯಗೊಂಡ ನೋಟುಗಳನ್ನು ಸಾಗಿಸುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿ ಅವರಿಂದ 1,92,50,000 ಕೋಟಿ ರೂಪಾಯಿಯನ್ನು ನಗರ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕಣ್ಣೂರಿನ ಜುಬೇರ್ ಹಮ್ಮಬ್ಬ (52), ಪಡೀಲ್‌ನ ದೀಪಕ್ ಕುಮಾರ್ (32) ಮತ್ತು ಬಜ್ಪೆ ನಿವಾಸಿ ಅಬ್ದುಲ್ ನಾಸೀರ್ (40) ಬಂಧಿತರು. ಜುಬೇರ್ ಮತ್ತು ನಾಸೀರ್ ವೃತ್ತಿಯಲ್ಲಿ ಚಾಲಕರಾಗಿದ್ದು, ದೀಪಕ್ ವಿದ್ಯುತ್ ಗುತ್ತಿಗೆದಾರರಾಗಿದ್ದಾರೆ.
ಈ ಮೂವರು ಅಡ್ಯಾರ್‌ನಿಂದ ಲಾಲ್‌ಬಾಗ್‌ಗೆ ತೆರಳುತ್ತಿದ್ದ ಕಾರಿನಲ್ಲಿ ಅಮಾನ್ಯಗೊಂಡ ನೋಟುಗಳನ್ನು ಸಾಗಿಸುತ್ತಿದ್ದು, ಪೊಲೀಸರು ಕಾರು ನಿಲ್ಲಿಸಿ ತಪಾಸಣೆ ಮಾಡಿದಾಗ ಎರಡು ಬ್ಯಾಗ್‌ಗಳಲ್ಲಿ ಅಮಾನ್ಯಗೊಂಡ ನೋಟುಗಳು ಪತ್ತೆಯಾಗಿವೆ. 1000 ರೂಪಾಯಿ ನೋಟುಗಳ 10 ಬಂಡಲ್‌ಗಳು ಮತ್ತು 500 ರೂಪಾಯಿಯ 57 ಬಂಡಲ್‌ಗಳಿದ್ದು, ಪೊಲೀಸರು ಕಾರನ್ನು ಕೂಡ ವಶಪಡಿಸಿಕೊಂಡಿದ್ದಾರೆ.
ಆರೋಪಿಗಳು ಶಿವಮೊಗ್ಗ ಮತ್ತು ಚಿತ್ರದುರ್ಗದಿಂದ ಅಮಾನ್ಯಗೊಂಡ ನೋಟುಗಳನ್ನು ತಂದಿದ್ದರು ಎಂದು ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿದೆ.
ಆರೋಪಿಗಳು ಕೆಲವರನ್ನು ಸಂಪರ್ಕಿಸಿ ಹಣವನ್ನು ತೆಗೆದುಕೊಂಡು ಬ್ಯಾಂಕ್‌ಗಳಲ್ಲಿ ಅಮಾನ್ಯಗೊಂಡ ನೋಟುಗಳನ್ನು ಶೇ.50 ಹಾಗೂ ಶೇ.20 ಕಮಿಷನ್‌ನಂತೆ ವಿಲೇವಾರಿ ಮಾಡುವಂತೆ ಹೇಳಿದ್ದರು. ಆರೋಪಿಗಳು ಹಳೆಯ ನೋಟುಗಳನ್ನು ಶೇ.50ಕ್ಕೆ ಬ್ಯಾಂಕ್ ತೆಗೆದುಕೊಳ್ಳುತ್ತಾರೆ ಎಂಬ ವದಂತಿ ಹಬ್ಬಿಸಿ ಜನರನ್ನು ವಂಚಿಸಲು ಯತ್ನಿಸಿದ್ದಾರೆ.
ಇನ್ನು ಚಿತ್ರದುರ್ಗ ಮತ್ತು ಶಿವಮೊಗ್ಗದಲ್ಲಿ ಕರೆನ್ಸಿ ನೋಟುಗಳನ್ನು ಯಾರಿಂದ ತೆಗೆದುಕೊಂಡಿದ್ದಾರೆ ಮತ್ತು ಅದರಲ್ಲಿ ಭಾಗಿಯಾಗಿರುವ ಇತರರನ್ನು ಕಂಡುಹಿಡಿಯಲು ನಾವು ಪ್ರಕರಣವನ್ನು ತನಿಖೆ ಮಾಡುತ್ತಿದ್ದೇವೆ ಎಂದು ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಹೇಳಿದ್ದಾರೆ.
ಐಪಿಸಿ ಸೆಕ್ಷನ್ 420 ಮತ್ತು ಸೆಕ್ಷನ್ 5 ಮತ್ತು 7 ರ ಅಡಿಯಲ್ಲಿ ನಿರ್ದಿಷ್ಟ ಬ್ಯಾಂಕ್ ನೋಟುಗಳ (ಬಾಧ್ಯತೆಗಳ ನಿಲುಗಡೆ) ಕಾಯಿದೆ 2017 ರ ಅಡಿಯಲ್ಲಿ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.