ಉಡುಪಿ: ‘ಬಿಜೆಪಿಯವರಿಗೆ ತಾಕತ್, ಧೈರ್ಯ ಇದ್ದರೆ ಅಖಂಡ ಭಾರತ ಮಾಡಿ’ – ಯು.ಟಿ ಖಾದರ್ ಸವಾಲು
ಉಡುಪಿ : ಬಿಜೆಪಿಯವರು ಆಗಸ್ಟ್ 14 ಬಂದರೆ ಅಖಂಡ ಭಾರತದ ಮಾತಾಡುತ್ತೀರಿ. ಅಧಿಕಾರ ಇದ್ದಾಗ ಒಂದು ಇಲ್ಲದಿದ್ದಾಗ ಒಂದು ಮಾತನಾಡಬೇಡಿ. ಅಖಂಡ ಭಾರತಕ್ಕೆ ನಾವು ಕಾಂಗ್ರೆಸ್ ನವರು ಬೆಂಬಲಿಸುತ್ತೇವೆ. ತಾಕತ್, ಧೈರ್ಯ ಇದ್ದರೆ ಅಖಂಡ ಭಾರತ ಮಾಡಿ ಎಂದು ಕಾಂಗ್ರೆಸ್ ನಾಯಕ ಯು.ಟಿ ಖಾದರ್ ಸವಾಲು ಹಾಕಿದ್ದಾರೆ.
ಕಾಪುವಿನಲ್ಲಿ ನಡೆದ ಕಾಂಗ್ರೆಸ್ ನ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರ ಅಲ್ಲ ಎಂದು ನಾವು ಹೇಳಿಲ್ಲ. ಸಾವರ್ಕರ್ ಅವರಂತೆ ಸಾವಿರ ಜನ ಅಂಡಮಾನ್ ಜೈಲಿಗೆ ಹೋಗಿದ್ದಾರೆ. ಸಾವರ್ಕರ್ ಜೈಲಿನಲ್ಲಿ 10 ಕ್ಷಮಾಪಣಾ ಪತ್ರ ಬ್ರಿಟಿಷರಿಗೆ ಬರೆದು ನನ್ನದು ತಪ್ಪಾಗಿದೆ, ನೀವು ಹೇಳಿದಂತೆ ಕೇಳ್ತೇನೆ ಎಂದು ಹೇಳಿಕೊಂಡಿದ್ದಾರೆ. ಹಾಗಾದರೆ ಕ್ಷಮಾಪಣ ಪತ್ರ ಬರೆದು ಹೊರಗೆ ಬಂದವರು ದೇಶಭಕ್ತರಾ?” ಎಂದು ಪ್ರಶ್ನಿಸಿದ್ದಾರೆ.
ಇನ್ನು “ಬ್ರಿಟಿಷರ ಜೊತೆ ಸೇರಿಕೊಂಡವರನ್ನು ವೈಭವಿಕರಿಸಬೇಕಾ? ಬ್ರಿಟಿಷರ ವಿರುದ್ಧ ಹೋರಾಡಿ ಮರಣ ಅಪ್ಪಿದವರನ್ನು ಗೌರವಿಸಬೇಕಾ? ಕಾಂಗ್ರೆಸ್ ಈ ಪ್ರಶ್ನೆಯನ್ನಿಟ್ಟುಕೊಂಡು ಚರ್ಚೆ ಮಾಡಬೇಕು” ಎಂದಿದ್ದಾರೆ.
ಎಸ್‌ಡಿಪಿಐ ಮತ್ತು ಎಂಐಎಂ ವಿರುದ್ಧ ವಾಗ್ದಾಳಿ ನಡೆಸಿದ ಖಾದರ್ “ಭಾವನಾತ್ಮಕವಾಗಿ ನೀವು ಯಾರೂ ಬಲಿಯಾಗಬೇಡಿ. ಎಸ್‌ಡಿಪಿಐ ಮತ್ತು ಎಂಐಎಂ ಅನ್ನು ಆರ್‌ಎಸ್‌ಎಸ್- ಬಿಜೆಪಿ ಬಳಸಿಕೊಳ್ಳುತ್ತಿದೆ. ಭಾವನಾತ್ಮಕವಾಗಿ ಸಮುದಾಯವನ್ನು ಬಲಿಕೊಡುವವರು ಕಾಂಗ್ರೆಸಿಗೆ ಮಾರಕ. ಕಾಂಗ್ರೆಸ್ ಪಕ್ಷ ಅಂಬೇಡ್ಕರ್ ಸಂವಿಧಾದಡಿಯಲ್ಲಿ ಕೆಲಸ ಮಾಡುತ್ತದೆ” ಎಂದು ಹೇಳಿದ್ದಾರೆ.