ಮಾನವ ಹಕ್ಕು, ಭ್ರಷ್ಟಾಚಾರ ಮುಕ್ತ ಸಂಘಟನೆಯ ಉಪಾಧ್ಯಕ್ಷರ ಬರ್ಬರ ಹತ್ಯೆ
ಬೆಂಗಳೂರು: ನಗರದಲ್ಲಿ ಹಾಡಹಗಲೇ ವ್ಯಕ್ತಿಯ ಬರ್ಬರ ಹತ್ಯೆ ಪ್ರಕರಣ ನಡೆದಿದೆ. ಬೆಂಗಳೂರಿನ ನಾಗವಾರ ರಸ್ತೆಯ ಬಳಿ ಶ್ರೀಧರ್ ಎಂಬವರ ಹತ್ಯೆಯಾಗಿದೆ. ಬಾಣಸವಾಡಿಯ ರಾಮಸ್ವಾಮಿಪಾಳ್ಯ ನಿವಾಸಿ ಶ್ರೀಧರ್ ಮಾನವ ಹಕ್ಕು ಮತ್ತು ಭ್ರಷ್ಟಾಚಾರ ಮುಕ್ತ ಸಂಘಟನೆ ಉಪಾಧ್ಯಕ್ಷ ಆಗಿದ್ದರು. ನಾಗವಾರ ಬಳಿ ಬಂದಿದ್ದ ವೇಳೆ ಗ್ಯಾಂಗ್ ಒಂದು ದಾಳಿ ಮಾಡಿದೆ. ರಿಂಗ್ ರೋಡ್ನ ಸರ್ವಿಸ್ ರಸ್ತೆಯಲ್ಲಿ ಅಟ್ಟಾಡಿಸಿ ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಕಾರು ಬಿಟ್ಟು ಸರ್ವಿಸ್ ರಸ್ತೆಯಲ್ಲಿ ಓಡುವಾಗ ಶ್ರೀಧರ್ ಹತ್ಯೆಯಾಗಿದೆ. ಆರೋಪಿಗಳಿಗೆ ಹೆಣ್ಣೂರು ಪೊಲೀಸರು ಬಲೆ ಬೀಸಿದ್ದಾರೆ.
ಪೂರ್ವ ವಿಭಾಗ ಡಿಸಿಪಿ ಡಾ. ಶರಣಪ್ಪ ಪ್ರಕರಣದ ಬಗ್ಗೆ ಹೇಳಿಕೆ ನೀಡಿದ್ದಾರೆ. ಆರೋಪಿಗಳು ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಗಾರ್ಮೆಂಟ್ಸ್ ವ್ಯವಹಾರ ಮಾಡಿಕೊಂಡಿದ್ದ ಮೃತ ಶ್ರೀಧರ್ ಮೇಲೆ ಹಲ್ಲೆ ನಡೆಸಲಾಗಿದೆ. ಭ್ರಷ್ಟಾಚಾರ ಮತ್ತು ಹ್ಯೂಮನ್ ರೈಟ್ಸ್ ಎಂಬ ಸಂಘ ಸಂಸ್ಥೆಯ ಉಪಾಧ್ಯಕ್ಷ ಆಗಿದ್ದ ಶ್ರೀಧರ್ ಮೇಲೆ ಹಲ್ಲೆ ನಡೆದಿದೆ. ಇಂದು ಹೆಣ್ಣೂರಿನಿಂದ ನಾಗವಾರ ಕಡೆಗೆ ತನ್ನ ಇನ್ನೋವಾ ಕ್ರಿಷ್ಟಾ ಕಾರಿನಲ್ಲಿ ಹೋಗ್ತಿದ್ದ ಶ್ರೀಧರ್ ಮೇಲೆ ಕಾರು ಅಡ್ಡಗಟ್ಟಿದ್ದ ಐವರು ಹಲ್ಲೆ ನಡೆಸಿದ್ದಾರೆ. ಕಾರನ್ನು ಅಲ್ಲಿಯೇ ಬಿಟ್ಟು ವಿರುದ್ಧ ರಸ್ತೆಗೆ ಓಡಿ ಬಂದಿದ್ದ ಶ್ರೀಧರ್ ಅವರನ್ನು ಹಿಂಬಾಲಿಸಿ ಹತ್ಯೆ ಮಾಡಲಾಗಿದೆ. ಹಂತಕರಿಗಾಗಿ ಈಗಾಗಲೆ ಎರಡು ವಿಶೇಷ ತಂಡ ರಚನೆ ಮಾಡಲಾಗಿದೆ ಎಂದು ಹೇಳಿದ್ದಾರೆ.