ಬೆಳ್ತಂಗಡಿಯಲ್ಲಿ 5 ಗ್ರೆನೇಡ್ ಪತ್ತೆ, ಆತಂಕ ಸೃಷ್ಟಿ: ನಿವೃತ್ತ ಸೇನಾಧಿಕಾರಿಯಿಂದ ದೂರು
ಮಂಗಳೂರು: ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದ ಬೇಲಿಯ ಬಳಿ ಐದು ಗ್ರೆನೇಡ್‌ಗಳು ಪತ್ತೆಯಾಗಿದ್ದು ಆತಂಕ ಮನೆ ಮಾಡಿದೆ. ಈ ಸಂಬಂಧ 66 ವರ್ಷದ ನಿವೃತ್ತ ಸೇನಾಧಿಕಾರಿ ಜಯಕುಮಾರ್ ಪೂಜಾರಿ ದೂರು ನೀಡಿದ್ದಾರೆ.
ಜಯಕುಮಾರ್ ಪೂಜಾರಿ ಅವರು ಉಪ್ಪಿನಂಗಡಿಯಿಂದ ಸಂಜೆ 6 ಗಂಟೆ ಸುಮಾರಿಗೆ ತಮ್ಮ ಮನೆಯ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಗ್ರೆನೇಡ್‌ಗಳು ಕಂಡಿದ್ದವು. ಪ್ಲಾಸ್ಟಿಕ್ ಕವರ್‌ನಲ್ಲಿ ಒಂದು ಗ್ರೆನೇಡ್ ಹಾಗೂ ಉಳಿದ ನಾಲ್ಕು ಗ್ರೆನೇಡ್‌ಗಳು ನೆಲದ ಮೇಲೆ ಬಿದ್ದಿದ್ದವು.
ಅವುಗಳನ್ನು ಸುರಕ್ಷಿತವಾಗಿ ತಮ್ಮ ನಿವಾಸಕ್ಕೆ ತೆಗೆದುಕೊಂಡು ಹೋದ ಜಯಕುಮಾರ್ ಪೂಜಾರಿ ಅವರು ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ದಕ್ಷಿಣ ಕನ್ನಡ ಪೊಲೀಸರು ಗ್ರೆನೇಡ್ ವಶಪಡಿಸಿಕೊಂಡಿದ್ದಾರೆ.
ಗ್ರೆನೇಡ್‌ಗಳು ಸುಮಾರು 40 ವರ್ಷಗಳಷ್ಟು ಹಳೆಯದಾಗಿವೆ. ಈ ಗ್ರೆನೇಡ್‌ಗಳು ಎಲ್ಲಿಂದ ಬಂದವು ಎಂಬುದರ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ(ಎಸ್‌ಪಿ) ರಿಷಿಕೇಶ್ ಸೋನಾವಾನೆ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಮಾಜಿ ಸೇನಾಧಿಕಾರಿ ನೀಡಿದ ದೂರಿನ ಆಧಾರದ ಮೇಲೆ ಉಪ್ಪಿನಂಗಡಿ ಪೊಲೀಸರು ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 25 (1 ಬಿ), 7 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.