Log In
BREAKING NEWS >
```````ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆಮತ್ತು ಅಭಿಮಾನಿಗಳಿಗೆ ಶ್ರೀಗೌರಿ-ಗಣೇಶ ಹಬ್ಬದ ಶುಭಾಶಯಗಳು````````

ಮಂಗಳೂರು: ‘ಕರಾವಳಿ ಅಭಿವೃದ್ದಿ ಪ್ರಾಧಿಕಾರದಿಂದ ಜಿಲ್ಲೆಯ ಅಭಿವೃದ್ದಿಗೆ ಹಲವು ಕಾಮಗಾರಿಗಳು’ – ಮಟ್ಟಾರು ರತ್ನಾಕರ ಹೆಗ್ಡೆ

ಮಂಗಳೂರು, ಅ.31: “ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಬೆಟ್ಟಂಪಾಡಿಯಲ್ಲಿ 30 ಲಕ್ಷ ರೂ.ಗಳ ವೆಚ್ಚದಲ್ಲಿ ತೂಗು ಸೇತುವೆ ನಿರ್ಮಾಣದ ಕಾಮಗಾರಿ ಪ್ರಗತಿಯಲ್ಲಿದ್ದು, ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ” ಎಂದು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಅವರು ತಿಳಿಸಿದರು.
ಅವರು ಅ.30ರ ಶನಿವಾರ ನಗರದ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

“ಕರಾವಳಿಯ ಮೂರು ಜಿಲ್ಲೆಗಳ ಅಭಿವೃದ್ಧಿಗಾಗಿ ಪ್ರಾಧಿಕಾರವು ಮಂಗಳೂರು-ಕಾರವಾರ ಮೀನುಗಾರಿಕಾ ರಸ್ತೆ ಅಭಿವೃದ್ಧಿಗೆ ಅಂದಾಜು ವೆಚ್ಚ 780 ಕೋಟಿ ರೂ.ಗಳನ್ನು ನೀಡಿದೆ. ಈ ಬಗ್ಗೆ ಡಿಪಿಆರ್ ತಯಾರಿಸಿ ಸರ್ಕಾರಕ್ಕೆ ಈಗಾಗಲೇ ಸಲ್ಲಿಸಲಾಗಿದೆ” ಎಂದರು.

“ಕರ್ನಾಟಕ ಕರಾವಳಿ ಜಿಲ್ಲೆಗಳಲ್ಲಿ ಸುಸಜ್ಜಿತ ಮೀನು ಮಾರುಕಟ್ಟೆಗಳ ನಿರ್ಮಾಣ ಯೋಜನೆಯಡಿ ಕರಾವಳಿಯ ಮೂರು ಜಿಲ್ಲೆಗಳಲ್ಲಿ 11 ಸುಸಜ್ಜಿತ ಮೀನು ಮಾರುಕಟ್ಟೆಗಳ ಸಹಿತ ಒಟ್ಟು 27 ಮೀನು ಮಾರುಕಟೆಗಳನ್ನು ನಿರ್ಮಿಸಿ ಲೋಕಾರ್ಪಣೆ ಮಾಡಲಾಗಿದೆ ಹಾಗೂ 6 ಮೀನು ಮಾರುಕಟ್ಟೆಗಳು ನಿರ್ಮಾಣ ಹಂತದಲ್ಲಿರುತ್ತದೆ” ಎಂದು ಮಾಹಿತಿ ನೀಡಿದರು.

“ಪ್ರಸ್ತುತ ಸಾಲಿನಲ್ಲಿ ಒಟ್ಟು 194 ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, 24 ಕಾಮಗಾರಿಗಳು ಪೂರ್ಣಗೊಂಡಿದ್ದು, 170 ಕಾಮಗಾರಿಗಳು ಪ್ರಗತಿಯಲ್ಲಿವೆ, ಪ್ರಸಕ್ತ ಸಾಲಿನಲ್ಲಿ ಹೆಚ್ಚುವರಿ ಕಾಮಗಾರಿಗಳಿಗೆ 150 ಕೋಟಿ ರೂಗಳ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಒಣಮೀನು ಸಂಸ್ಕರಣಾ ಘಟಕ, ಕಾಪು ದೀಪಸ್ಥಂಭ ಅಭಿವೃದ್ಧಿ ಕಾಮಗಾರಿ, ಡಿಜಿಟಲ್ ಸೈನೇಜ್ ಬೋರ್ಡ್, ಬಹು ಹಂತಗಳ ಕಾರ್ ಪಾರ್ಕಿಂಗ್ ನಿರ್ಮಾಣ ಮೊದಲಾದ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಬಗ್ಗೆ ಸರಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ” ಎಂದವರು ಮಾಹಿತಿ ನೀಡಿದರು.

“ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಆಧುನಿಕ ಕರಾವಳಿ ಮೀನುಗಾರಿಕೆ ಗ್ರಾಮ ನಿರ್ಮಿಸಲು ಮಂಗಳೂರು ತಾಲೂಕಿನ ಸಸಿಹಿತ್ಲುವಿನಲ್ಲಿ ಮತ್ಸ್ಯ ಗ್ರಾಮ ನಿರ್ಮಾಣ ಯೋಜನೆಗೆ ಕ್ರಮ ಕೈಗೊಳ್ಳಲಾಗಿದೆ. ಈ ಯೋಜನೆಗೆ ಗರಿಷ್ಠ 7.50 ಕೋಟಿ ರೂ.ಗಳ ಮೊತ್ತವನ್ನು ನಿಗದಿ ಪಡಿಸಲಾಗಿದೆ” ಎಂದು ಹೇಳಿದರು.

“ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಓಷಿಯಾನೋಗ್ರಫಿ ಗೋವಾದ ಮೂಲಕ ಕರ್ನಾಟಕದ ಎಲ್ಲಾ ಮೂರು ಕರಾವಳಿ ಜಿಲ್ಲೆಗಳಲ್ಲಿನ ಸಮುದ್ರ ನೀರಿನ ಗುಣಮಟ್ಟದ ವಿಶ್ಲೇಷಣೆ ನಡೆಸಲು ಯೋಜಿಸಲಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ಮೂರು ಕರಾವಳಿ ಜಿಲ್ಲೆಗಳಿಗೆ ಸಂಬಂಧಪಟ್ಟ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆಗಳನ್ನು ನಡೆಸಲಾಗಿದೆ” ಎಂದು ತಿಳಿಸಿದರು.

“ಕರಾವಳಿ ಕರ್ನಾಟಕ ಕೃಷಿ ಉಪಕರಣಗಳು ಮತ್ತು ಯಂತ್ರೋಪಕರಣಗಳ ಪಾರ್ಕ್‍ ಅನ್ನು ಸ್ಥಾಪಿಸಲು ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಕೃಷಿಯ ಪ್ರಕ್ರಿಯೆಯನ್ನು ಸುಲಭಗೊಳಿಸಲು ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ತಂತ್ರಜ್ಞಾನಗಳನ್ನು ಅರ್ಥಮಾಡಿಕೊಳ್ಳಲು ಸ್ಥಳೀಯ ರೈತರಿಗೆ ಸಹಾಯವಾಗುವಂತೆ ಕೃಷಿ ಉಪಕರಣಗಳು ಮತ್ತು ಯಂತ್ರೋಪಕರಣಗಳ ಪ್ರದರ್ಶನವನ್ನು ಕೂಡ ಯೋಜಿಸಲು ಇಚ್ಛಿಸಲಾಗಿದೆ ಹಾಗೂ ಹಲವಾರು ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗಿದೆ” ಎಂದರು.

“ಇದೇ ನವೆಂಬರ್ 2ರ ಸಂಜೆ 4 ಗಂಟೆಗೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ 66ನೇ ಕನ್ನಡ ರಾಜ್ಯೋತ್ಸವ ಮತ್ತು ದೀಪಾವಳಿಯ ಸಂಭ್ರಮಾಚರಣೆ ಹಾಗೂ ಕೊರೊನಾ ಸಂದರ್ಭದಲ್ಲಿ ಸಮಾಜದ ಏಳಿಗೆಗಾಗಿ ಶ್ರಮಿಸಿರುವ ಗಣ್ಯವ್ಯಕ್ತಿಗಳನ್ನು ಗುರುತಿಸಿ ಸನ್ಮಾನಿಸಲಾಗುವುದು” ಎಂದು ತಿಳಿಸಿದರು.

ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಸದಸ್ಯೆ ಶ್ರೀಮತಿ ಕೇಸರಿ ಯುವರಾಜ್ ಗೋಷ್ಠಿಯಲ್ಲಿದ್ದರು.

No Comments

Leave A Comment