Log In
BREAKING NEWS >
ಉಡುಪಿಯ ಕಲ್ಸ೦ಕದ ರೋಯಲ್ ಗಾರ್ಡನ್ ನಲ್ಲಿ ಉಡುಪಿ ಉತ್ಸವ ಆರ೦ಭವಾಗಿದ್ದು ಪ್ರತಿ ನಿತ್ಯವೂ ಸಾಯ೦ಕಾಲ 4ರಿ೦ದ 9ಗ೦ಟೆಯವರೆಗೆ ವೀಕ್ಷಿಸಲು ಅವಕಾಶವಿದೆ....

ಇನ್ನು ನೆನಪು ಮಾತ್ರ: ನಟ ಪುನೀತ್ ರಾಜ್ ಕುಮಾರ್ ಪಂಚಭೂತಗಳಲ್ಲಿ ಲೀನ

ಬೆಂಗಳೂರು: ಬದುಕಿ ಬೆಳಗಬೇಕಿದ್ದ ವಯಸ್ಸಿನಲ್ಲಿ ಹಠಾತ್ ನಿರ್ಗಮನ ಘೋಷಿಸಿ ಕನ್ನಡ ಕುಲಕೋಟಿ ಜನರನ್ನು ದುಃಖದ ಕಡಲಿನಲ್ಲಿ ಮುಳುಗಿಸಿದ ನೆಚ್ಚಿನ ನಟ ಪುನೀತ್ ರಾಜ್ ಕುಮಾರ್ ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವದೊಂದಿಗೆ ಭಾನುವಾರ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿಸಲಾಯಿತು. ಚಿತ್ರರಂಗದ ಗಣ್ಯರು, ರಾಜಕೀಯ ನಾಯಕರು ಹಾಗೂ ಸಾವಿರಾರು ಅಭಿಮಾನಿಗಳು ಪುನೀತ್’ಗೆ ಕಣ್ಣೀರ ವಿದಾಯ ಹೇಳಿದರು.

ಮೂರು ವರ್ಷದ ಹಿಂದೆಯಷ್ಟೇ ಗೋವಿಂದ ನಾಮ ಸ್ಮರಣೆಯೊಂದಿಗೆ ದಾಸಯ್ಯನ ಪದ್ಧತಿಯಂತೆ ಪುನೀತ್ ರಾಜ್ ಕುಮಾರ್ ಅವರು ತಮ್ಮ ತಾಯಿಯ ಅಂತ್ಯ ಸಂಸ್ಕಾರ ನಡೆಸಿದ್ದರು. ಹಠಾತ್ ಹೃದಯ ಸ್ತಂಭನದಿಂದ ಅಕಾಲಿಕ ನಿಧನ ಹೊಂದಿರುವ ಪುನೀತ್ ಅವರು ತಂದೆ, ತಾಯಿ ಪಕ್ಕದಲ್ಲೇ ಇದೀಗ ಚಿರಸ್ಥಾಯಿಯಾಗಿದ್ದಾರೆ.

ಪುನೀತ್ ಅವರ ಅಂತ್ಯಸಂಸ್ಕಾರವು ಈಡಿಗ ಸಂಪ್ರದಾಯದಂತೆ ನೆರವೇರಿದ್ದು, ಕರುನಾಡಿನ ಯುವರತ್ನ ಭೂತಾಯಿ ಮಡಿಲು ಸೇರಿದ್ದಾರೆ.

ಅಂತ್ಯಕ್ರಿಯೆ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಪುನೀತ್​ ಪತ್ನಿ ಅಶ್ವಿನಿ, ಮಕ್ಕಳಾದ ಧೃತಿ ಹಾಗೂ ವಂದಿತಾ, ಸಹೋದರರಾದ ಶಿವರಾಜ್​ಕುಮಾರ್​, ರಾಘವೇಂದ್ರ ರಾಜ್​ಕುಮಾರ್​ ಕಣ್ಣೀರು ಹಾಕುತ್ತಿರುವ ದೃಶ್ಯ ಮನ ಕಲಕುವಂತಿತ್ತು. ಚಿತ್ರರಂಗ ಹಾಗೂ ರಾಜಕೀಯದ ಅನೇಕ ಗಣ್ಯರು ಭಾಗಿ ಆಗಿದ್ದರು. ಕಂಠೀರವ ಸ್ಟುಡಿಯೋ ಆವರಣದ ಒಳಗೆ ಕುಟುಂಬದವರಿಗೆ ಮತ್ತು ಗಣ್ಯರಿಗೆ ಮಾತ್ರ ಪ್ರವೇಶ ನೀಡಲಾಗಿತ್ತು.

ಸಿಎಂ ಬಸವರಾಜ ಬೊಮ್ಮಾಯಿ, ಸಿದ್ದರಾಮಯ್ಯ, ಡಿಕೆ ಶಿವ​ಕುಮಾರ್​, ಮುನಿರತ್ನ, ರಾಕ್​​ಲೈಕ್​ ವೆಂಕಟೇಶ್​, ಕಿಚ್ಚ ಸುದೀಪ್​, ರವಿಚಂದ್ರನ್​ ಮುಂತಾದವರು ಸ್ಥಳದಲ್ಲಿದ್ದು, ಪುನೀತ್​ಗೆ ಅಂತಿಮ ವಿಧಾಯ ಹೇಳಿದ್ದಾರೆ. ಡಾ. ರಾಜ್​ಕುಮಾರ್​ ಸಮಾಧಿಯಿಂದ 125 ಅಡಿ ಅಂತರ ಹಾಗೂ ಪಾರ್ವತಮ್ಮ ರಾಜ್​ಕುಮಾರ್​ ಸಮಾಧಿಯಿಂದ 45 ಅಡಿ ಅಂತರದಲ್ಲಿ ಪುನೀತ್​ ರಾಜ್​ಕುಮಾರ್​​ ಅವರ ಅಂತ್ಯಕ್ರಿಯೆ ಮಾಡಲಾಗಿದೆ. ಅಪಾರ ಸಂಖ್ಯೆಯ ಅಭಿಮಾನಿಗಳು ಕಂಠೀರವ ಸ್ಟುಡಿಯೋ ಮುಂಭಾಗ ಜಮಾಯಿಸಿದ್ದರು.

ಇದಕ್ಕೂ ಮುನ್ನ ಬೆಳಗ್ಗೆ ನಾಲ್ಕು ಗಂಟೆಯಿಂದಲೇ ಕಂಠೀರವ ಸ್ಟೇಡಿಯಂನಿಂದ ಪುನೀತ್​ ರಾಜ್​ಕಮಾರ್​ ಪಾರ್ಥಿವ ಶರೀರದ ಮೆರವಣಿಗೆ ಮಾಡಲಾಯಿತು. ಸಿಎಂ ಬಸವರಾಜ ಬೊಮ್ಮಾಯಿ ಅವರು ಪುನೀತ್​ ಹಣೆಗೆ ಮುತ್ತಿಟ್ಟು ಕಂಬನಿ ಮಿಡಿದರು.

No Comments

Leave A Comment