Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿನ 94ನೇ ಭಜನಾ ಸಪ್ತಾಹ ಮಹೋತ್ಸವಕ್ಕೆ ದೀಪ ಪ್ರಜ್ವಲನೆಯೊ೦ದಿಗೆ ವಿದ್ಯುಕ್ತ ಚಾಲನೆ.......ಡಿ.2ರ ಶುಕ್ರವಾರದ೦ದು ಪುತ್ತಿಗೆ ಮಠದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ಪರ್ಯಾಯ ಮಹೋತ್ಸವಕ್ಕೆ ಬಾಳೆಮುಹೂರ್ತ ಕಾರ್ಯಕ್ರಮವು 8ಗ೦ಟೆಗೆ ಪುತ್ತಿಗೆ ಮಠದ ಆವರಣದಲ್ಲಿ ಜರಗಲಿದೆ...

ಕನ್ನಡಿಗರ ಕಣ್ಮಣಿ ‘ಅಪ್ಪು’, ‘ರಾಜಕುಮಾರ’ ಪುನೀತ್ ಇನ್ನಿಲ್ಲ; ತೀವ್ರ ಹೃದಯಾಘಾತದಿಂದ ವಿಧಿವಶ

ಬೆಂಗಳೂರು: ಕನ್ನಡದ ಖ್ಯಾತ ಪ್ರತಿಭಾವಂತ ನಟ ಡಾ. ರಾಜ್ ಕುಮಾರ್ ಅವರ ಪುತ್ರ ಪುನೀತ್ ರಾಜ್ ಕುಮಾರ್ ಶುಕ್ರವಾರ ಬೆಳಗ್ಗೆ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 46 ವರ್ಷ ವಯಸ್ಸಾಗಿತ್ತು. ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪುನೀತ್ ರಾಜ್ ಕುಮಾರ್ ಚಿಕಿತ್ಸೆ ಫಲಕಾರಿಯಾಗದೆ ಮರಣ ಹೊಂದಿದ್ದು ಕುಟುಂಬಸ್ಥರು, ಅಸಂಖ್ಯಾತ ಅಭಿಮಾನಿಗಳು ಶೋಕಸಾಗರದಲ್ಲಿ ಮುಳುಗಿದ್ದಾರೆ.

ಇಂದು ನಸುಕಿನ ಜಾವ ಎಂದಿನಂತೆ ಜಿಮ್ ನಲ್ಲಿ ದೇಹ ಕಸರತ್ತು ನಡೆಸುತ್ತಿದ್ದ ಪುನೀತ್ ರಾಜ್ ಕುಮಾರ್ ಅವರಿಗೆ ಹೃದಯಾಘಾತವಾಗಿತ್ತು. ತಕ್ಷಣ ಅವರನ್ನು ರಮಣಶ್ರೀ ಆಸ್ಪತ್ರೆಗೆ ಚಿಕಿತ್ಸೆಗೆ ಕರೆತರಲಾಯಿತು. ಆಗ ಆಸ್ಪತ್ರೆಯಲ್ಲಿ ತೀವ್ರ ಅಸ್ವಸ್ಥಗೊಂಡು ಕುಸಿದುಬಿದ್ದಿದ್ದ ಅವರನ್ನು ವಿಕ್ರಂ ಆಸ್ಪತ್ರೆಗೆ ವರ್ಗಾಯಿಸಲಾಯಿತು.

ಪುನೀತ್ ಅವರನ್ನು ಐಸಿಯುನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಯಿತಾದರೂ ಫಲಕಾರಿಯಾಗದೆ ಅಸುನೀಗಿದ್ದು ಅವರ ಕುಟುಂಬದವರಿಗೆ, ಅಭಿಮಾನಿಗಳಿಗೆ ಆಘಾತವಾಗಿದೆ. ಪುನೀತ್ ಅವರ ನಿಧನ ಸುದ್ದಿ ಕೇಳುತ್ತಿದ್ದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ, ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಚಿತ್ರರಂಗದ ಗಣ್ಯರು, ಅಸಂಖ್ಯಾತ ಅಭಿಮಾನಿಗಳು ಆಸ್ಪತ್ರೆಯತ್ತ ದೌಡಾಯಿಸಿದರು.

ಪುನೀತ್ ನಿವಾಸಕ್ಕೆ ಬಿಗಿ ಭದ್ರತೆ: ಪುನೀತ್ ರಾಜ್ ಕುಮಾರ್ ಅವರ ನಿಧನ ಸುದ್ದಿ ತಿಳಿಯುತ್ತಿದ್ದಂತೆ ಅವರ ಅಭಿಮಾನಿಗಳು ತಂಡೋಪತಂಡವಾಗಿ ಮನೆಯತ್ತ ಲಗ್ಗೆಯಿಡುತ್ತಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪುನೀತ್ ಮನೆಗೆ ತೆರಳುವ ರಸ್ತೆಗಳನ್ನು ಬಂದ್ ಮಾಡಲಾಗಿದೆ. ಅವರ ನಿವಾಸಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಕೂಡ ಏರ್ಪಡಿಸಲಾಗಿದೆ.

ನಟ ಪುನೀತ್ ರಾಜ್ ಕುಮಾರ್ ಅವರು ತೀವ್ರ ಹೃದಯಾಘಾತವಾಗಿ ಆಸ್ಪತ್ರೆಗೆ ಬಂದಿದ್ದಾರೆ, ಇಂದು ಬೆಳಗ್ಗೆ 11.30ರ ಹೊತ್ತಿಗೆ ಅವರು ಆಸ್ಪತ್ರೆಗೆ ಬರುವಾಗಲೇ ಗಂಭೀರವಾಗಿದ್ದರು. ಅದಕ್ಕೆ ಮೊದಲು ಎದೆನೋವು ಕಾಣಿಸಿಕೊಂಡು ಬೇರೆ ಆಸ್ಪತ್ರೆಯಲ್ಲಿ ಇಸಿಜಿ ಮಾಡಿಸಿಕೊಂಡು ಇಲ್ಲಿಗೆ ಬಂದರು. ಐಸಿಯುನಲ್ಲಿ ಕೂಡಲೇ ಅವರಿಗೆ ತುರ್ತು ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗಿತ್ತು. ಆದರೆ ನಮ್ಮಿಂದ ಬದುಕಿಸಲು ಸಾಧ್ಯವಾಗಿಲ್ಲ ಎಂದು ಆಸ್ಪತ್ರೆಯ ತಜ್ಞ ಡಾ ರಂಗನಾಥ್ ನಾಯಕ್ ತಿಳಿಸಿದ್ದಾರೆ. ಇಂದು ನಸುಕಿನ ಜಾವ ಜಿಮ್ ಗೆ ವರ್ಕೌಟ್ ಗೆ ಹೋಗಿದ್ದಾಗಲೇ ಪುನೀತ್ ಅವರಿಗೆ ತೀವ್ರ ಹೃದಯಾಘಾತವಾಗಿದೆ.

ಕಂಠೀರವ ಸ್ಟೇಡಿಯಂನಲ್ಲಿ ಅಂತಿಮ ದರ್ಶನ: ಪುನೀತ್ ಅವರ ಮೃತದೇಹವನ್ನು ಕಂಠೀರವ ಕ್ರೀಡಾಂಗಣದಲ್ಲಿ ಇಡಲಾಗುತ್ತಿದ್ದು ಸಾರ್ವಜನಿಕರ ದರ್ಶನಕ್ಕೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಮಾ. ಲೋಹಿತ್​ ಕನ್ನಡಿಗರ ‘ಅಪ್ಪು’ ಆಗಿ ಬೆಳೆದುಬಂದ ಹಾದಿ…

ಬೆಂಗಳೂರು: ಡಾ. ರಾಜ್​ ಕುಮಾರ್​ ಹಾಕಿಕೊಟ್ಟ ಮಾರ್ಗವನ್ನು ಚಾಚೂ ತಪ್ಪದೇ ಪಾಲಿಸಿಕೊಂಡುಬಂದವರು ಪವರ್​ ಸ್ಟಾರ್​ ಪುನೀತ್ ರಾಜ್‍ಕುಮಾರ್ ಇಂದು ಯಾರೂ ನಿರೀಕ್ಷಿಸದ ಅಘಾತವನ್ನು ಉಂಟು ಮಾಡಿ ಇಹಲೋಕ ತ್ಯಜಿಸಿದ್ದಾರೆ. 17 ಮಾರ್ಚ್, 1975 ರಿಂದ ಇಂದಿನವರೆಗೂ ನಟ, ಹಿನ್ನೆಲೆ ಗಾಯಕ ಮತ್ತು ದೂರದರ್ಶನದ ನಿರೂಪಕರಾಗಿ ತಮ್ಮದೇ ಚಾಪು ಮೂಡಿಸಿದ್ದರು.

ಪುನೀತ್ ಈವರೆಗೆ 26 ಚಲನಚಿತ್ರಗಳಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದಾರೆ. ಬಾಲ್ಯದಲ್ಲಿ ತಂದೆ ರಾಜಕುಮಾರ್ ಅಭಿನಯದ ಚಿತ್ರಗಳಲ್ಲಿ ಬಾಲ ನಟನಾಗಿ ವಸಂತ ಗೀತ(1980), ಭಾಗ್ಯದಾತ (1981), ಚಲಿಸುವ ಮೋಡಗಳು (1982), ಎರಡು ನಕ್ಷತ್ರಗಳು(1983) ಮತ್ತು ಬೆಟ್ಟದ ಹೂವು(1985) ಚಿತ್ರಗಳಲ್ಲಿ ನಟಿಸಿ ತಮ್ಮ ನಟನೆಗೆ ನಾಡಿನ ಅಭಿಮಾನಿಗಳಿಂದ ಅಪಾರ ಮೆಚ್ಚುಗೆ ಪಡೆದಿದ್ದರು.

ಪುನೀತ್​ ಅವರ ಅವರ ಬೆಟ್ಟದ ಹೂವು ಚಿತ್ರದ ರಾಮು ಪಾತ್ರದ ಬಾಲನಟನೆಗೆ ರಾಷ್ಟ್ರ ಪ್ರಶಸ್ತಿ ಕೂಡ ಲಭಿಸಿತ್ತು. ಪುನೀತ್ ಅವರು ಮೊದಲ ಬಾರಿಗೆ 2002 ರಲ್ಲಿ ಅಪ್ಪು ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ನಾಯಕ ನಟನಾಗಿ ಪಾದಾರ್ಪಣೆ ಮಾಡಿದ್ದರು. ನಂತರ ಕರ್ನಾಟಕದ ತುಂಬೆಲ್ಲಾ ಅಪ್ಪು ಎಂದು ಪರಿಚಿತರಾದರು. ಅವರು ಅಭಿ (2003), ಆಕಾಶ್ (2005), ಅರಸು (2007), ಮಿಲನ (2007), ಜಾಕೀ (2010), ಹುಡುಗರು (2011), ಅಣ್ಣಾ ಬಾಂಡ್ (2012) ಮತ್ತು ಪವರ್ (2014) ಸೇರಿದಂತೆ ಹಲವಾರು ಯಶಸ್ವಿ ಚಲನಚಿತ್ರಗಳು ನೀಡಿದ್ದಾರೆ.

ಪ್ರಮುಖ ವಿಷಯ ಎಂದರೆ ಕೇವಲ ತಾನು ನಟನೆಗಷ್ಟೇ ಸೀಮಿತವಲ್ಲ ಎಂಬುದನ್ನು ತೋರಿಸಲು ಕನ್ನಡದ ಕೋಟ್ಯಧಿಪತಿ, ಹೂ ವಾಂಟ್ಸ್ ಟು ಬಿ ಮಿಲಿಯನೇರ್ ಎಂಬ ಕನ್ನಡ ಆವೃತ್ತಿಯ ಟೆಲಿವಿಷನ್ ಶೋ ನಿರೂಪಣೆ ಕೂಡ ಮಾಡಿದ್ದಾರೆ.

ಪುನೀತ್, ರಾಜಕುಮಾರ್ ಮತ್ತು ಪಾರ್ವತಮ್ಮ ರಾಜಕುಮಾರ್ ಅವರ ಕಿರಿಯ ಮಗನಾಗಿ ಜನಿಸಿದ ಇವರಿಗೆ ನಟರಾದ ಶಿವರಾಜಕುಮಾರ್ ಮತ್ತು ರಾಘವೇಂದ್ರ ರಾಜಕುಮಾರ್ ಸಹೋದರರು.
ಪುನೀತ್ ಆರು ವರ್ಷದವರಿದ್ದಾಗ, ಅವರ ಕುಟುಂಬ ಬೆಂಗಳೂರಿಗೆ ತೆರಳಿತ್ತು. ಅವರು ಹತ್ತು ವರ್ಷ ವಯಸ್ಸಿನ ತನಕ ಅವರ ತಂದೆ ಅವರನ್ನು ಮತ್ತು ಅವರ ಸಹೋದರಿ ಪೂರ್ಣಿಮಾರನ್ನು ಚಲನಚಿತ್ರದ ಸೆಟ್​ಗೆ ಕರೆದುಕೊಂಡು ಹೋಗುತ್ತಿದ್ದರು.

ಪುನೀತ್ ರಾಜ್ ಕುಮಾರ್ ಅವರು ಡಿಸೆಂಬರ್ 1 ,1999 ರಂದು ಅಶ್ವಿನಿ ರೇವಂತ್ ಅವರನ್ನು ವಿವಾಹವಾದರು. ಇವರಿಗೆ ಇಬ್ಬರು ಪುತ್ರಿಯರಿದ್ದಾರೆ ದ್ರಿತಿ ಮತ್ತು ವಂದಿತಾ. ಅಪ್ಪು ಅವರ ಮೊದಲ ಹೆಸರು ಮಾ.ಲೋಹಿತ್.

No Comments

Leave A Comment