Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿನ 94ನೇ ಭಜನಾ ಸಪ್ತಾಹ ಮಹೋತ್ಸವಕ್ಕೆ ದೀಪ ಪ್ರಜ್ವಲನೆಯೊ೦ದಿಗೆ ವಿದ್ಯುಕ್ತ ಚಾಲನೆ.......ಡಿ.2ರ ಶುಕ್ರವಾರದ೦ದು ಪುತ್ತಿಗೆ ಮಠದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ಪರ್ಯಾಯ ಮಹೋತ್ಸವಕ್ಕೆ ಬಾಳೆಮುಹೂರ್ತ ಕಾರ್ಯಕ್ರಮವು 8ಗ೦ಟೆಗೆ ಪುತ್ತಿಗೆ ಮಠದ ಆವರಣದಲ್ಲಿ ಜರಗಲಿದೆ...

‘ಕಲಿ’ಕಾಲ: ಕನ್ನಡ ಕಲಿಕೆಯಲ್ಲಿ ಗೌರ್ನರ್; ನೆನ್ನೆಯಲ್ಲಿ ನಾಳೆ ಕಲಿಯುತ್ತಿರುವ ನಾಯ್ಡು; ರಣ ನೀತಿ ಕಲಿಸುತ್ತಿರುವ ಶಾ!

ಕನ್ನಡ ಭಾಷೆ ಪರಂಪರೆ ಜಲ ನಾಡು ನುಡಿಯ ಬಗ್ಗೆ ಬಹಳ ಯೋಚಿಸದೆ ಇರುವ ನಾವು ಕನ್ನಡಿಗರು, ಆಗೊಮ್ಮೆ ಈಗೊಮ್ಮೆ ನವೆಂಬರ್ ತಿಂಗಳಲ್ಲಿ ಆದರೂ ಭಾಷೆಯ ಭೂತ-ಭವಿಷ್ಯಗಳ ಬಗ್ಗೆ ಮಾತಾಡಲು ನಿಲ್ಲುತ್ತೇವೆ.

ನವೆಂಬರ್ ಬಂದ ತಕ್ಷಣ ನಮ್ಮಲ್ಲಿ ಸತ್ತು ಸಮಾಧಿ ಆಗಿದ್ದ ಭಾಷಾ ಪ್ರಜ್ಞೆ, ಸರ್ಕಾರಿ ಶಾಲೆಗಳ ಒಲವು, ಕನ್ನಡ ಪುಸ್ತಕಗಳ ಹಂಚಿಕೆ, ಕನ್ನಡ ನಮ್ಮ ಭಾಷೆ ಅದನ್ನ ಬಳಸಿ ಎಂದು ಹೇಳುವ ಅಭಿಯಾನಗಳು ಕನ್ನಡಕ್ಕೆ ಹೊಸದೇನಲ್ಲ.

2500 ಸಾವಿರ ವರ್ಷಗಳ ಇತಿಹಾಸ ಇರುವ ನಮ್ಮ ಭಾಷೆ ಇಂತಹ ಹಲವು ಅಭಿಯಾನಗಳನ್ನ, ಪ್ರದರ್ಶನಗಳನ್ನ, ಹೋರಾಟಗಳನ್ನ ನೋಡುತ್ತಾ, ಮಾಗುತ್ತ, ತನ್ನ ಸವಿಯನ್ನ ಎಲ್ಲೂ ತಗ್ಗಿಸದೆ ನಮಗೆ ಉಣಿಸುತ್ತ ನಮ್ಮ ಗುರುತಿನ ಚಿಹ್ನೆಯಾಗಿ, ನಮ್ಮ ನಾಡಿಗೆ ತಿಲಕವಾಗಿ, 7 ಕೋಟಿ ಜನ ಸಂಖ್ಯೆಯ ಅಸ್ತಿತ್ವವಾಗಿ ಕನ್ನಡ ನಮ್ಮ ಉಸಿರಲ್ಲಿ ಬೆರೆತು ಹೋಗಿದೆ. ಇಂತಹ ಭಾಷೆಯನ್ನ ಯಾರು ಪ್ರೀತಿಸಲು ಸಾಧ್ಯವಿಲ್ಲ, ಯಾರು ಅಪ್ಪಿಕೊಳ್ಳಲು ಒಪ್ಪುವುದಿಲ್ಲ.

ಈ ಹಿಂದೆ ಧರ್ಮ ಪ್ರಚಾರಕ್ಕೆ ಎಂದು ಬಂದ ಕಿಟ್ಟಲ್, ಹರ್ಮನ್ ಮೂನ್ಗ್ಲಿಂಗ್ ಇತ್ಯಾದಿ ಮಂದಿ ಕನ್ನಡಕ್ಕೆ ಮನಸೋತರು. ಭಾಷೆಯನ್ನು ಮೊದಲು ಧರ್ಮ ಪ್ರಚಾರಕ್ಕೆ ಕಲಿತರಾದರೂ ನಂತರ ಕನ್ನಡಕ್ಕೆ ಮಾರು ಹೋಗಿ ಧರ್ಮಕ್ಕಿಂತ ಭಾಷೆಯನ್ನೇ ಸಾರಿದರು.

ಹಾಗೆಯೇ ಇವತ್ತು ಎಷ್ಟು ಜನ ಅಧಿಕಾರಿಗಳು, ನಾಯಕರು, ಕೆಲಸಕ್ಕೆ ಬಂದು ಬದುಕನ್ನು ಕಟ್ಟಿಕೊಳ್ಳುವ ವಲಸಿಗರು ಕನ್ನಡವನ್ನ ಕಲಿಯಲು ಇಚ್ಛಿಸುತ್ತಾರೆ? ಎಂಬ ಪ್ರಶ್ನೆಗಳ ಮಧ್ಯೆ, ಇಗೋ ಇಲ್ಲೊಂದು ಶ್ಲಾಘಿಸಬೇಕಾಗ ಸುದ್ದಿ.

ಸಾಮಾನ್ಯವಾಗಿ ರಾಜಕೀಯ ನಿವೃತ್ತಿ ಹೊಂದುವುದು ಎಂದರೆ, ಅದು ಕಾರ್ಯಂಗದ ಉನ್ನತ ಅಧಿಕಾರಕ್ಕೆ ತಲುಪುವುದು. ರಾಜ್ಯಪಾಲರಾಗಿ ರಾಜ್ಯಗಳಿಗೆ ಬರುವುದು ಎಂಬುದು 2-3 ದಶಕಗಳಿಂದ ನಡೆದು ಬರುತ್ತಿರುವ ಪಕ್ಷಗಳ ವಾಡಿಕೆ. ರಾಜ್ಯದ ಪ್ರಥಮ ಪ್ರಜೆಯಾಗಿ ಮುಖ್ಯಮಂತ್ರಿಗಿಂತಲೂ ಹಲವು ಬಾರಿ ಹೆಚ್ಚು ಅಧಿಕಾರ ಹೊಂದಿರುತ್ತಾರೆ ಎನ್ನುವ ಸಂಗತಿ ತಿಳಿಯುವ ಮುಂಚೆಯೇ ಎಷ್ಟೋ ರಾಜಭವನದಲ್ಲಿರುವವರ ಅವಧಿ ಮುಗಿದೇ ಹೋಗಿರುತ್ತದೆ.

ಆದರೆ ಸದ್ಯಕ್ಕೆ ನೂತನವಾಗಿ ಬಂದಿರುವ ನಮ್ಮ ರಾಜ್ಯಪಾಲರು ಮೊದಲು ಮಾಡುತ್ತೇನೆ ಎಂದು ಸಂಕಲ್ಪ ತೊಟ್ಟಿರುವುದು ಕನ್ನಡ ಕಲಿಯಲು, ಪ್ರತೀ ದಿನ ಅರ್ಧ ಗಂಟೆ ಇಂದ 45 ನಿಮಿಷ ಕನ್ನಡ ಕಲಿಕೆಗೆ ಸಮಯ ನೀಡುತ್ತಿದ್ದಾರೆ. ಕನ್ನಡ ಭಾಷೆಯನ್ನು ಹಿಂದಿ ಮತ್ತು ಆಂಗ್ಲ ಭಾಷೆಯ ಶಬ್ದಗಳ ಅನುವಾದಿಂದ ಹೇಗೆ ಕಲಿಯಬಹುದು ಎಂಬ ಪುಸ್ತಕಗಳನ್ನು ತರಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಕನ್ನಡ ಕಲಿಸಿಲು ಓರ್ವ ಕನ್ನಡ ಅಧ್ಯಾಪಕರನ್ನು ನಿಯೋಜಿಸಿರುವ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಯಾವುದೇ ಕನ್ನಡಿಗರು ಅವರನ್ನು ಭೇಟಿ ಮಾಡಿದರು ಅವರನ್ನು ಮೊದಲು ಕನ್ನಡದಲ್ಲೇ ಬರಮಾಡಿಕೊಳ್ಳುತ್ತಾರೆ. ಇನ್ನು 1 ವರ್ಷದಲ್ಲಿ ಕನ್ನಡದಲ್ಲಿ ಮಾತಾಡಬಲ್ಲೆ ಅನ್ನುವ ಅವರ ಕನ್ನಡ ಪ್ರೇಮ ಮತ್ತು ಕಾಳಜಿಯನ್ನ ಮೆಚ್ಚಲೇಬೇಕು.

ನಾವು ಕನ್ನಡಿಗರು ಎಲ್ಲರನ್ನು ಸಮಾನವಾಗಿ ನೋಡುತ್ತೇವೆ ಆ ಸಮಾನತೆಯನ್ನು ದೌರ್ಬಲ್ಯ ಎಂದು ತಿಳಿಯದೆ ಅದು ನಮ್ಮ ಔದಾರ್ಯತೆ ಮತ್ತು ಶಕ್ತಿ ಎಂದು ಸ್ವೀಕರಿಸಿದಾಗ ಅದಕ್ಕಿಂತ ಹೆಚ್ಚು ಸಂತಸ ಇನ್ನೇನಿದೆ ಹೇಳಿ.

ಇತಿಹಾಸ ಮರುಕಳಿಸುವುದು, ಅದು ಪಾತ್ರಧಾರಿಗಳ ಬದಲಾವಣೆ ಇಲ್ಲದೆ. ಇಲ್ಲಿ ಗಮನಿಸಬೇಕಾದ ಸಂಗತಿ ಯಾರು ನೀಡುವರು ಮಾತ್ಯರು ಸ್ವೀಕರಿಸುವರು ಎಂದು ಅಷ್ಟೇ.

ಸದ್ಯಕ್ಕೆ ಚಂದ್ರ ಬಾಬು ನಾಯ್ಡು ಬದುಕಿನಲ್ಲೂ ಇತಿಹಾಸ ಬದಲಾಗಿದೆ. But I am at the receiving end ಎಂದು ಮರುಗುತ್ತಿದ್ದಾರೆ. ಕಳೆದ 15 ದಿನದಿಂದ ಆಂಧ್ರ ದಲ್ಲಿ ಜಗನ್ ಮತ್ತು ನಾಯ್ಡು ಮಧ್ಯೆ, ಇದ್ದ ವಾಕ್ ಸಮರ ಈಗ ವಾರ್ ಗೆ ತಿರುಗಿದೆ.

ಟಿಡಿಪಿ ಪಕ್ಷದ ವಕ್ತಾರ ಪಟ್ಟಾಭಿ ಜಗನ್ ರನ್ನು ಅವಾಚ್ಯ ಶಬ್ದಗಳಿಂದ ಮಾಧ್ಯಮಗಳ ಎದುರು ನಿಂದಿಸಿದ್ದು ಇಡೀ ರಾಜ್ಯದಲ್ಲಿ ಕೋಲಾಹಲ ಎಬ್ಬಿಸಿದೆ.

ವೈಎಸ್ ಆರ್ ಸಿಪಿ ಕಾರ್ಯಕರ್ತರು ರಾಜ್ಯದ ಎಲ್ಲಾ ಟಿಡಿಪಿ ಕಚೇರಿಗಳ ಮೇಲೆ ಹಲ್ಲೆ ನಡೆಸಿದ ದೃಶ್ಯಗಳು ಟಿವಿ ಮೂಲಕ ನೀವೂ ಗಮನಿಸಿರುತ್ತೀರಿ. ಆದರೆ ಸದ್ಯಕ್ಕೆ ಇರುವ ಪ್ರಶ್ನೆ ಕೇಂದ್ರ ಹೇಗೆ ಇದನ್ನು ಸ್ವೀಕರಿಸಿದೆ? ಎಂಬುದಾಗಿದೆ

ರಾಜ್ಯದಲ್ಲಿ ಈ ಹಿಂಸೆ ಅನುಭವಿಸಿದ ತಕ್ಷಣ ದೆಹಲಿಗೆ ಲಗ್ಗೆ ಇಟ್ಟ ನಾಯ್ಡು ರಾಷ್ಟ್ರಪತಿಗಳನ್ನು ಭೇಟಿ ಮಾಡಿ ಇದರ ಬಗ್ಗೆ ಸೂಕ್ತ ಕ್ರಮ ಜರುಗಲು ನಿಮ್ಮ ಚಿತ್ತ ಬೇಕು ಎಂದು ಪತ್ರ ನೀಡಿದ್ದು ಒಂದಾದರೆ. ಹೇಗಾದರೂ ಪ್ರಧಾನಿಯನ್ನು ಭೇಟಿ ಮಾಡಿ ಅವರನ್ನು ವಿಶ್ವಾಸಕ್ಕೆ ಪಡೆಯಬೇಕು ಎಂಬುದು ಮತ್ತೊಂದು ಪ್ರಯತ್ನ. ಆದರೆ ಯಾಕೋ ಪ್ರಧಾನಿ ನಾಯ್ಡು ಮೊರೆಯನ್ನು ಸ್ವೀಕರಿಸಲೇ ಇಲ್ಲ. ಅಮಿತ್ ಶಾ ರನ್ನು ಭೇಟಿ ಮಾಡಲು ಸೂಚಿಸುತ್ತ ಪ್ರಧಾನಿ ಕಛೇರಿ ಈ ವಿಚಾರದದಿಂದ ಹೊರ ನಡೆಯಿತು.

ಇನ್ನು ಕಾಶ್ಮೀರದ ಪ್ರವಾಸದಲ್ಲಿ ಇದ್ದ ಅಮಿತ್ ಶಾ, ನಾಲ್ಕು ದಿನ ಭೇಟಿಗಾಗಿ ಕಾದು ಕೂತ ನಾಯ್ಡು ಜೊತೆ ದೂರವಾಣಿ ಸಂಪರ್ಕಕ್ಕೂ ಬರಲಿಲ್ಲ.

ಇದೆಲ್ಲದಕ್ಕೂ ಒಂದು ಇತಿಹಾಸವಿದೆ, ಈ ಹಿಂದೆ ಚಂದ್ರ ಬಾಬು ನಾಯ್ಡು ಮುಖ್ಯಮಂತ್ರಿ ಆಗಿದ್ದಾಗ ತಿರುಪತಿಗೆ ಆಗಮಿಸಿದ ಅಮಿತ್ ಶಾ ಅವರ ವಾಹನದ ಮೇಲೆ ಟಿಡಿಪಿ ಕಾರ್ಯಕರ್ತರಿಂದ ಕಲ್ಲೆಸೆದು ಗೂಂಡಾಗಿರಿ ಮಾಡಿಸಿದ ಕೀರ್ತಿ ನಾಯ್ಡು ಅವರಿಗೆ ಸಲ್ಲುತ್ತದೆ. ಅದು ಟಿಡಿಪಿ ಕಾರ್ಯಕರ್ತರು ಮಾಡಿದ್ದು ನನಗೂ ಅದಕ್ಕೂ ಸಂಬಂಧ ಇಲ್ಲ ಕೇಸ್ ಹಾಕಿದ್ದೇನೆ ಎಂದು ನಾಯ್ಡು ಅವರೇನೋ ಅಂದು ಜಾರಿಕೊಂಡರು. ಆದರೆ ಇಂದು ಜಗನ್ ಕೂಡ ಅದೇ ಹೇಳುತ್ತಿದ್ದಾರೆ. ಇದು ಕಾರ್ಯಕರ್ತರು ಮಾಡಿರಬಹುದು ನನಗೆ ತಿಳಿದಿಲ್ಲವೆಂದು. ಇನ್ನು ಅಮಿತ್ ಶಾ ಕೂಡ ತಿರುಪತಿ ವಿಚಾರವನ್ನ ಮರೆತಂತೆ ಕಾಣುತ್ತಿಲ್ಲ.

ಈ ಹಿಂದೆ 2004 ರಲ್ಲಿ ಚಂದ್ರ ಬಾಬು ನಾಯ್ಡು ಮುಖ್ಯಮಂತ್ರಿ ಆಗಿದ್ದಾಗ, 2002 ಗುಜರಾತ್ ಹಿಂಸೆ ಆಧಾರದ ಮೇಲೆ ನಾನು ಮೋದಿಯನ್ನು ಎಂದೂ ರಾಜ್ಯಕ್ಕೆ ಬರಲು ಬಿಡುವುದಿಲ್ಲ ಎಂದಿದ್ದರು.

ಆದರೂ ಅಧಿಕಾರಕ್ಕಾಗಿ 2013-14 ಇಬ್ಬರೂ ಒಂದೇ ವೇದಿಕೆಯಲ್ಲಿ ಜೊತೆ ಬಂದರು. ಆಗ ಮೋದಿಗೆ ದೇಶವ್ಯಾಪಿ ಇರುವ ತಮ್ಮ ಅಲೆಯ ಬಗ್ಗೆ ಇನ್ನೂ ಸ್ಪಷ್ಟ ಅರಿವಿರಲಿಲ್ಲ, ಅವತ್ತು ಪಾರ್ಟಿ ಪ್ರಮುಖರಾಗಿದ್ದ ವೆಂಕಯ್ಯ ನಾಯ್ಡು ಒತ್ತಾಯಕ್ಕೂ ಮಣಿಯದ ಬೇರೆ ದಾರಿ ಇರಲಿಲ್ಲ. ಆದರೆ ಈಗ ಯಾವ ನಿಬಂಧನೆಗಳು ಇಲ್ಲ. ಇನ್ನು ಜಗನ್ ಪರೋಕ್ಷವಾಗಿ ಬಿಜೆಪಿಯ ಆಪ್ತರೇ ಆಗಿದ್ದಾರೆ. ಅಂದು ಜರುಗಿದ ಇತಿಹಾಸ ಇಂದು ಮತ್ತೆ ಮರುಕಳಿಸುತ್ತಿದೆ.

ಯಾವ ಕಾಲಕ್ಕೂ ಹಿಂಸೆ ಶೋಭೆ ತರುವುದಿಲ್ಲ ಆದರೆ ಪ್ರತೀ ಹಿಂಸೆಯೂ ಕಾಲದ ಆಸರೆ ಮತ್ತು ಸೆರೆಯಲ್ಲಿ ನಿಲ್ಲುವುದು ಎಂಬುದೇ ವಿಪರ್ಯಾಸ.

“ಇಷ್ಟು ದಿನ ಮಾಡಿದ್ದೆಲ್ಲವೂ ದಾಲ್ ನದಿ ನೀರಿನಲ್ಲಿ ಹೋಮ ಮಾಡಿದಂತೆ ಆಯಿತಲ್ಲ”

ಹೀಗೆ ಹೇಳಿದ್ದು ಬಿಜೆಪಿಯ ನಾಯಕರು, ಕಳೆದ ಒಂದು ವಾರದಲ್ಲಿ ಕಾಶ್ಮೀರದಲ್ಲಿ ಕಾಶ್ಮೀರೇತರರನ್ನು ಹುಡುಕಿ ಕೊಲ್ಲುವ ಘಟನೆ ದೆಹಲಿಯನ್ನು ಅಲುಗಾಡಿಸಿದೆ. ಏಕಾ ಏಕಿ ಕೇಂದ್ರ ಗೃಹ ಸಚಿವರು ಕಾಶ್ಮೀರಕ್ಕೆ ಮರು ಯೋಚನೆ ಮಾಡದೆ ತೆರಳಿದ್ದು ಇದೆ ಕಾರಣಕ್ಕಾಗಿ.

ಎರಡು ವರ್ಷಗಳ ಹಿಂದೆ, ಆರ್ಟಿಕಲ್ 370 ತೆಗೆಯಬೇಕು ಅನ್ನುವ 45 ದಿನಗಳ ಹಿಂದೆ ದೆಹಲಿಯ ವಾತಾವರಣವೇ ಬೇರೆ ಆಗಿತ್ತು ಆರ್ಟಿಕಲ್ 370 ರದ್ದತಿಗೆ ಪ್ರಧಾನಿಯ ಪೂರ್ಣ ಸಮ್ಮತಿ ಇರಲಿಲ್ಲ!!

ಬಿಜೆಪಿಯ ದಶಕದ ಕನಸು ಅದು, ನಾನು ಸೋತರೆ ರಾಜೀನಾಮೆ ನೀಡಿ ಗುಜರಾತಿಗೆ ತೆರೆಳುತ್ತೇನೆ ಎಂದು ಸವಾಲು ಹಾಕಿದ್ದರು ಅಮಿತ್ ಶಾ, ಇಷ್ಟೆಲ್ಲ ಗೊಂದಲದ ನಡುವೆ 45 ದಿನಗಳ ಮಸುಕಿನ ರಾತ್ರಿಗಳಲ್ಲಿ ಒಂದು ಸುಳಿವು ಹೊರ ಬರದ ಹಾಗೆ ಆರ್ಟಿಕಲ್ 370 ಯನ್ನು ರದ್ದುಗೊಳಿಸುವ ದಿನ ಸಂಸತ್ತಿನಲ್ಲಿ ಬಂದೆ ಬಿಡ್ತು, ಇತಿಹಾಸ ಸೃಷ್ಟಿಯಾಯಿತು.

ಇದು ಒಂದು ಹಂತವಾದರೆ ನಂತರ ಕಾಶ್ಮೀರ ಘೋರವಾದ ತುರ್ತು ಪರಿಸ್ಥಿತಿ ಗೆ ಒಳ ಪಟ್ಟಿತು ಸುಮಾರು 18 ತಿಂಗಳ ಬಂಧನ ಸಡಿಲಗೊಂಡ ಕೆಲವೇ ದಿನಗಳಲ್ಲಿ ಈ ಕೃತ್ಯ ನಡೆದಿದೆ. ಇದೆಲ್ಲವೂ ದಾಲ್ ನದಿಯಲ್ಲಿ ಹೋಮ ಮಾಡಿದಂತೆ ಆಯಿತಲ್ಲ ಎಂದು ಬಿಜೆಪಿ ನಾಯಕರು ಮರುಗುತ್ತಿದ್ದಾರೆ.

ಆದರೆ 70 ಸಾವಿರ militants 3 ಲಕ್ಷಕ್ಕೂ ಅಧಿಕ ಇರುವ ಸೇನೆಯನ್ನು ಮೀರಿಸುತ್ತಾರೆ ಎಂದರೆ ಇದು ನಂಬಲು ಆಗಲ್ಲ, ಆದರೆ ಭಯೋತ್ಪಾದನೆ ತಡೆಯಿರಿ ಇಲ್ಲವಾದಲ್ಲಿ ರಾಜೀನಾಮೆ ನೀಡಿ ಎಂದು ಅಮಿತ್ ಶಾ ಅತೀ ಕಟುವಾಗಿ ಸೇನಾ ಅಧಿಕಾರಿಗಳಿಗೆ ಹೇಳಿದ್ದಾರೆ.

No Comments

Leave A Comment