Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ಯು.ವಿಶ್ವನಾಥ ಶೆಣೈಯವರಿಗೆ ಪಿ.ಆರ್. ಸಿ.ಐ. “ಸಾರ್ವಜನಿಕ ಸೇವೆ ಮತ್ತು ಕೊಡುಗೆ” ಪುರಸ್ಕಾರ

ವರುಷ ಎಂಬತ್ತು ದಾಟಿದರೂ ಇನ್ನೂ 16ರ ಯುವಕರೇ ನಾಚುವಂತ ಬಹು ಚಟುವಟಿಕೆಯ ಚಿರಯುವಕ. ಶ್ರೀಮತಿ ಲೀಲಾ – ವಿಠಲ ಶೆಣೈ ದಂಪತಿಗಳ ಮೂರನೆಯ ಸುಪುತ್ರ ಯು. ವಿಶ್ವನಾಥ ಶೆಣೈ ಹುಟ್ಟಿದ್ದು ಚಿಟ್ಪಾಡಿಯಲ್ಲಿ. ಬೆಳೆದದ್ದು ಉಡುಪಿಯ ಕೃಷ್ಣನ ಪರಿಸರದಲ್ಲಿ. ಓದಿದ್ದು 5 ನೇ ಕ್ಲಾಸು ಆದರೆ ಅವರ ವಿದ್ವತ್ತು ಮಾತ್ರ ಮಾಸ್ಟರ್ ಡಿಗ್ರಿಗೂ ಮೀರಿದ್ದು. ಸರಳ ಸಂಸಾರ, ಸರಳ ವ್ಯಕ್ತಿತ್ವ ಸರಳ ಶ್ವೇತ ಉಡುಗೆ. ಮೊಗದಲೊಂದು ಮಂದಹಾಸ. ಪರಿಚಯ ಇರಲಿ ಇಲ್ಲದಿರಲಿ ಕಂಡವರಿಗೊಂದು ಹರಿ ಓಂ ಎನ್ನುವ ನಮಸ್ಕಾರ. ಲೋಕ ಸುತ್ತಿದರೆ ಕಲಿತ ವಿದ್ಯೆಗಿಂತ ಹೆಚ್ಚಿನ ಸಿದ್ಧಿ ಪಡೆಯಬಹುದೆಂಬುದನ್ನು ಅರಿತವರು. ಕಷ್ಟಜೀವಿ. ಚಾಪೆಯಲ್ಲಿ ಮಲಗಿ ತೇಪೆ ಚಡ್ಡಿ ಹಾಕಿಕೊಂಡೇ ಬಾಲ್ಯ ಕಳೆದವರು. ಹಾಗಾಗಿ ಬಡವರ ನೋವನ್ನು ಹತ್ತಿರದಿಂದ ಕಂಡವರು. ಬೀಡಿಕಟ್ಟುವುದು ಐಸ್ ಕ್ಯಾಂಡಿ ಮಾರುವುದು ಹೋಟೆಲಿನಲ್ಲಿ ತಟ್ಟೆ ತೊಳೆಯುವುದರಿಂದ ಸಪ್ಲೈ ಅಡುಗೆ ಕೋಣೆಯವರೆಗೆ ಎಲ್ಲವನ್ನು ಮಾಡಿಕಲಿತು ಎಲ್ಲದಕ್ಕೂ ಸೈ ಎನಿಸಿಕೊಂಡು ಊರು ಊರು ಅಲೆದು ಕೊನೆಗೆ ತನ್ನೂರಿಗೇ ಬಂದು “ರಾಮ ಭವನ” ಎಂಬ ಹೋಟೆಲು ಪ್ರಾರಂಭಿಸಿದರು. ತಾನೂ ತನ್ನ ಸಂಸಾರವನ್ನೂ ಸಂಪೂರ್ಣ ಬಳಸಿಕೊಂಡು ಮುನ್ನಡೆದರು. ಕೊನೆಗೆ ಅದೇ ಬಾಳಿಗೆ ಉಸಿರಾಯಿತು. ಜೊತೆಗೆ ಒಂದಿಷ್ಟು ಲ್ಯಾಂಡ್ ಲಿಂಕ್ಸ್ ನ ಪ್ರಯತ್ನವೂ ಕೈಗೂಡಿತು. ಹಾಗಾಗಿ ಹಿಡಿದ ವೃತ್ತಿ ಕೈಹಿಡಿಯಿತು. ಇನ್ನೊಂದು ಕಡೆಯಿಂದ ಅದೃಷ್ಟ ದೇವತೆಯಾಗಿ ಭಗವದ್ಗೀತೆಯನ್ನು ಅರೆದು ಕುಡಿದ ಸೌಭಾಗ್ಯವತಿ ಪ್ರಭಾವತಿ ಬಾಳ ಸಂಗಾತಿಯಾಗಿ ಕೈಹಿಡಿದರು. ಆದರೆ ಅದರ ಹಿಂದಿನ ಕಾರಣ ಅವರ ಶಿಸ್ತಿನ ಜೀವನ ಹಾಗೂ ಎಲ್ಲರನ್ನೂ ಸೇರಿಸಿಕೊಂಡು ಮನ್ನಡೆಯುವ ನಾಯಕತ್ವ ಗುಣ ಹಾಗೂ ಯಾರನ್ನೂ ಮರುಳು ಮಾಡಬಲ್ಲ ಅವರ ವಾಕ್ ಚಾತುರ್ಯ. ಇವರಲ್ಲಿ ಒಬ್ಬ ಅದ್ಭುತ ನಟನಿದ್ದಾನೆ. ಬಂಧು ಪ್ರೇಮಿ ಇದ್ದಾನೆ. ಒಬ್ಬ ಕಲಾವಿದನಿದ್ದಾನೆ. ರಾಜತಾಂತ್ರಿಕ ನಿದ್ದಾನೆ. ಒಬ್ಬ ಕಲಾ ರಸಿಕನಿದ್ದಾನೆ. ಸಂಘಟಕನಿದ್ದಾನೆ. ಸಮಾಜ ಸೇವಕನಿದ್ದಾನೆ. ಒಬ್ಬ ಪರ್ಯಟನ ವೀರನೂ ಇದ್ದಾನೆ. ಕುಬೇರನೂ ಇವರ ಎದುರು ತಲೆಬಾಗಿ ನಿಂತಿದ್ದಾನೆ. ಆದರೆ ಇವೆಲ್ಲದರ ಜೊತೆಗೆ ನೊಂದವರ, ದೇಹೀ ಎನ್ನುವವರ, ಅಸಹಾಯಕರ, ಬಡವರ ಕಣ್ಣೀರನ್ನು ಒರೆಸುವ ಒಬ್ಬ ವಿಶಾಲ ಹೃದಯಿ ದಾನಶೂರ ಕರ್ಣನಂತಹ ಕೊಡುಗೈ ದಾನಿಯೊಬ್ಬನಿದ್ದಾನೆ. ಉಡುಪಿ ಎಸೋಸಿಯೇಷನನ್ನು ಹುಟ್ಟುಹಾಕಿದ ಹೆಮ್ಮೆ ಇವರದ್ದು. ಉಡುಪಿ ಛೇಂಬರ್ ಆಫ್ ಕಾಮರ್ಸ್ ನ ನಿರ್ದೇಶಕರಲ್ಲೊಬ್ಬರು ಇವರು. ಜೈಂಟ್ಸ್ ಸಂಸ್ಥೆ, GSB ಯುವಕ ಸಂಘ, ಉಡುಪಿ ರಂಗಭೂಮಿ, ಯಕ್ಷಗಾನ ಕೇಂದ್ರ, ಕಲಾರಂಗ ಸ್ಪಂದನ ಹೀಗೆ ಹತ್ತು ಹಲವು ಸಂಸ್ಥೆಗಳ ಪದಾಧಿಕಾರಿಯಾಗಿದ್ದುಕೊಂಡು ಅವೆಲ್ಲವುಗಳ ಸರ್ವತೋಮುಖ ಬೆಳವಣಿಗೆಯ ಹರಿಕಾರರೂ ಆಗಿದ್ದಾರೆ. ಗುರುಗಳು ಪ್ರತಿಭಾವಂತರನ್ನು ಕಂಡರೆ ಅತೀವ ಪ್ರೀತಿ . ಕೃತಿ, ಕಲೆ, ಕ್ರೀಡೆ ನಾಟಕ ಸಂಸ್ಥೆಗಳಿಗೆ ಒಂದಷ್ಟು ಸಹಕಾರ ಇವರ ಜೀವನದ ಶೃತಿ. ಸಂಬಂಧ ಬೆಸೆಯುವ, ಮುರಿದು ಬಿದ್ದ ಮದುವೆ ಸಂಬಂಧಗಳನ್ನು ಜೋಡಿಸುವ ವಿಚ್ಛೇದನ ನಿಲ್ಲಿಸುವ ಹೀಗೆ ರಾಜ ಪಂಚಾತಿಗೆಯಿಂದ ಒಂದಷ್ಟು ಹಿತೈಷಿಗಳ ಬಾಳಿಗೆ ಬೆಳಕು ನೀಡಿದವರು. ಪ್ರಾಣಿ ಪಕ್ಷಿಗಳೆಂದರೆ ಅಚ್ಚು ಮೆಚ್ಚು. ಊರು ಸುತ್ತಲು ತನ್ನ ಕಾಲನ್ನೇ ಹೆಚ್ಚು ನಂಬಿದವರು. ಹಾಗಾಗಿ ಇವರು ಗಟ್ಟಿಮುಟ್ಟು. ಪತ್ನಿ ಪ್ರಭಾವತಿ ಹಾಗೂ ಗೆಳೆಯರೊಂದಿಗೆ ದೇಶದ ಹೆಚ್ಚಿನ ಧಮ೯ ಕ್ಷೇತಗಳನ್ನು ಸಂದರ್ಶಿಸಿ ಪುಣ್ಯ ಸಂಪಾದಿಸಿ ದವರು. ಅಲ್ಲದೆ ದೇಶ ವಿದೇಶಗಳ ಹೆಚ್ಚಿನ ಪ್ರಸಿದ್ಧ ತಾಣಗಳಿಗೆ ಭೇಟಿ ನೀಡಿ ಅಲ್ಲಿಯ ಸಂಸ್ಕೃತಿ ಯನ್ನು ವೀಕ್ಷಿಸಿ ನಮ್ಮ ಸಂಸ್ಕೃತಿಯನ್ನು ಅಲ್ಲಿಯ ಜನಕ್ಕೆ ಪರಿಚಯಿಸಿ ಬಂದ ಉಡುಪಿಯ ಪರ್ಯಟನ ವೀರ ನಮ್ಮ ಉಡುಪಿ ವಿಶ್ವನಾಥ ಶೆಣೈ ಮಾಮು. ನಮ್ಮ ಸಂಸ್ಕೃತಿಯ ಉಳಿವಿಗಾಗಿ ಸಮಾಜದ ಸದ್ಭಾವನೆಯ ಬೆಳವಣಿಗೆಗಾಗಿ ಇವರಿಂದ ಜನ್ಮತಳೆದ ಸಂಸ್ಥೆ ಸಂಸ್ಕೃತಿ ವಿಶ್ವಪ್ರತಿಷ್ಠಾನವೇ ಇವರ ಜೀವನದ ಕೂಸು. ಹೀಗೆ ತನ್ನ ಜೀವನದುದ್ದಕ್ಕೂ ತನ್ನ ಶಕ್ತಿ ಮೀರಿ ಸಮಾಜಕ್ಕೆ ತಮ್ಮನ್ನು ಅರ್ಪಿಸಿಕೊಂಡ ಉಡುಪಿಯ ಜನರ ಕಣ್ಮಣಿ ಯು. ವಿಶ್ವನಾಥ ಶೆಣೈ ರವರಿಗೆ ಬಹಳಷ್ಟು ಕಾಲ ಸಮಾಜ ಸೇವೆ ಮಾಡುವ ಭಾಗ್ಯ ಕರುಣಿಸಲಿ ಎಂದು ಹಾರೈಸುತ್ತ PRC I ಉಡುಪಿ ಮಣಿಪಾಲ ಘಟಕ ಆತ್ಮೀಯತೆಯಿಂದ ವಿಶ್ವ ಸಂವಹನ ಕಾರರ ದಿನಾಚರಣೆಯ ಅಂಗವಾಗಿ ” ಸಾರ್ವಜನಿಕ ಸೇವೆ ಮತ್ತು ಕೊಡುಗೆ ” ಪುರಸ್ಕಾರವನ್ನು ನೀಡಿ ಗೌರವಿಸುತ್ತಿದೆ.

ಯು. ಸುರೇಂದ್ರ ಶೆಣೈ ಯವರಿಗೆ ಪಿ.ಆರ್.ಸಿ.ಐ. ಮಾಧ್ಯಮ ಜಾಣ ಪುರಸ್ಕಾರ

ಗಂಧವನ್ನು ತೀಡಿದಷ್ಟು ಪರಿಮಳ. ಲೋಹವನ್ನು ತಿಕ್ಕಿದಷ್ಟು ಹೊಳಪು . ಅಂತೆಯೇ ಯಾವುದೇ ಒಂದು ಸಂಕಲ್ಪಿತ ಕಾರ್ಯದಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡಷ್ಟು ಬೆಳೆಯಲು ಸಾಧ್ಯ ಹಾಗೂ ಒಂದಷ್ಟು ಸೌರಭ ಬೀರಲು ಸಾಧ್ಯ. ಆ ನಿಟ್ಟಿನಲ್ಲಿ ಪತ್ರಿಕಾ ಮಾಧ್ಯಮದಲ್ಲಿ ಕೆಲಸ ಮಾಡಿ ತನ್ನದೇ ಆದ ಛಾಪನ್ನು ಮೂಡಿಸಿದ ಪಬ್ಲಿಕ್ ಹೀರೋ ಯು. ಸುರೇಂದ್ರ ಶೆಣೈ. ಇವರ ಹುಟ್ಟೂರು ಗಂಗೊಳ್ಳಿಯಾದರೂ ನೆಲೆ ನಿಂತ ಊರು ಪುರಾಣ ಪ್ರಸಿದ್ಧ ಕುಂಭಾಶಿ. ಪ್ರಾಥಮಿಕ ವಿದ್ಯಾಭ್ಯಾಸವನ್ನು ತನ್ನೂರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯದಲ್ಲಿ ಪೂರೈಸಿ ಕುಂದಾಪುರದ ಬಂಡಾರ್ಕಾರ್ಸ್ ನಲ್ಲಿ BSc. ಪದವಿ ಪಡೆದರು. ಆನಂತರ ಮೈಸೂರು ವಿವಿಯಿಂದ ಅವರ ಅಚ್ಚುಮೆಚ್ಚಿನ ಕ್ಷೇತ್ರ ಪತ್ರಿಕೋದ್ಯಮದ ತರಬೇತಿ ಪಡೆದು ಅದನ್ನು ತನ್ನ ವೃತ್ತಿ ಜೀವನದ ಮಾರ್ಗಸೂಚಿಯನ್ನಾಗಿಸಿಕೊಂಡವರು ಇವರು. ತನ್ನ 23 ನೇ ವರ್ಷಕ್ಕೆ ಮಂಗಳೂರಿನ ಪ್ರಸಿದ್ಧ ” ನವ ಭಾರತ” ಪತ್ರಿಕೆಯ ವರದಿಗಾರನಾಗಿ ವೃತ್ತಿ ಜೀವನಕ್ಕೆ ಪಾದಾರ್ಪಣೆ ಮಾಡಿದ ಇವರು ತದ ನಂತರ ಇಂಡಿಯನ್ ಏಕ್ಸ್ ಪ್ರೆಸ್, ಮುಂಗಾರು, ಹೊಸ ದಿಗಂತ, ಮುಂತಾದ ಪತ್ರಿಕೆಗಳಿಗೆ ಸೇವೆ ಸಲ್ಲಿಸುವುದರ ಜೊತೆಗೆ ಟೈಮ್ಸ್ ಆಫ್ ಡೆಕ್ಕನ್ ಮುಂತಾದ ಪತ್ರಿಕೆಗಳಿಗೂ ವಿಶೇಷ ಲೇಖನ ಬರೆಯುತ್ತಿದ್ದರು. ಕೊನೆಗೆ ತನ್ನ ಅನುಭವಕ್ಕೊಂದು ರೂಪ ಕೊಡುವ ನಿಟ್ಟಿನಲ್ಲಿ 1991ರಲ್ಲಿ ಕುಂದೇಶ್ವರನ ಅನುಗ್ರಹದಿಂದ ತನ್ನದೇ ಆದ “ಕುಂದ ಪ್ರಭಾ” ಎಂಬ ಸ್ವಂತ ಪತ್ರಿಕಾ ಉದ್ಯಮವನ್ನು ಪ್ರಾರಂಭಿಸಿ ಅತ್ಯಂತ ಯಶಸ್ವಿಯಾದರು. ಶಿಕ್ಷಣ, ಸಾಹಿತ್ಯ, ಸಂಸ್ಕೃತಿ, ಆರೋಗ್ಯ, ಸಮಾಜ ಸುಧಾರಣೆ ಸಾರ್ವಜನಿಕ ಉಪಯೋಗಿ ಮಾಹಿತಿಯನ್ನು ಹೊತ್ತ ಈ ಪತ್ರಿಕೆ ದೇಶ ವಿದೇಶಗಳಲ್ಲಿ ತನ್ನ ಇರುವಿಕೆಯನ್ನು ಗುರುತಿಸಿಕೊಂಡು ಜೊತೆಗೆ ಕುಂದ ಪ್ರಭ ಟ್ರಸ್ಟೊಂದನ್ನು ಮಾಡಿ ಅದರ ವತಿಯಿಂದ ಪತ್ರಕರ್ತರಾಗ ಬಯಸಿದ ಹಲವು ಯುವಕರಿಗೆ ಅನುಭವಿಗಳಿಂದ ತರಬೇತಿ, ಪ್ರಸಿದ್ಧ ಪತ್ರಕರ್ತರ ಗುರುತಿಸುವಿಕೆ, ಹೀಗೆ ಸಮಾಜದ ಉನ್ನತಿಗೆ ಪ್ರೇರಕವಾಗುವಂತಹ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಈ ಟ್ರಸ್ಟ್ ಮತ್ತು ಪತ್ರಿಕೆ ಸುದ್ದಿ ಪ್ರಸಾರ ಮಾಧ್ಯಮಗಳಲ್ಲಿ ಮುಂಚೂಣಿಯಲ್ಲಿದೆ. ಮಾತೃ ಭಾಷೆಯ ಮೇಲೆ ಇವರಿಗೆ ಅತೀವ ಪ್ರೀತಿ . ಹಾಗಾಗಿ ಕೊಂಕಣಿ ವೈಭವ, ವಿದ್ಯಾರ್ಥಿ ಸಮ್ಮೇಳನ , ಕೊಂಕಣಿಯುವ ಸಮೇಳನ, ಅಖಿಲ ಭಾರತ ಕೊಂಕಣಿ ಪರಿಷತ್ ಸಮ್ಮೇಳನದಂತ ಸಮಾವೇಶಗಳ ಜವಾಬ್ದಾರಿಯನ್ನು ವಹಿಸಿಕೊಂಡು ಅಚ್ಚುಕಟ್ಟಾಗಿ ನಿರ್ವಹಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಈ ರೀತಿಯ ಇವರ ಉತ್ಸಾಹೀ ಚಟುವಟಿಕೆಗಳಿಗೆ ಸಮಾಜ ಸೇವೆ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಹೆಸರಾದ ಅಂತರ್ ರಾಷ್ಟ್ರೀಯ ಸಂಸ್ಥೆಗಳಾದ J CI ಹಾಗೂ ರೋಟರಿಯಂತಹ ಅಭಿಯಾನಗಳೂ ಕಾರಣೀಭೂತವಾಗಿವೆ ಎನ್ನಬಹುದು. JCI ಕುಂದಾಪುರದ ಹಾಗೂ ರೋಟರಿ ಕುಂದಾಪುರ ದಕ್ಷಿಣದ ಅಧ್ಯಕ್ಷರಾಗಿಯೂ ಹಲವಾರು ಉದಯೋನ್ಮುಖ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನ ಮನ್ನಣೆ ಪಡೆದವರು. ಕುಂದ ಕಲಾ ಉತ್ಸವ, ನುಡಿ ಬೆಳಕು ಸರಣಿ, ಪಂಚಗಂಗಾವಳಿ ಉತ್ಸವ, ಕುಂದ ಕರಾವಳಿ ಉತ್ಸವದಂತಹ ಕಾರ್ಯಕ್ರಮಗಳ ರುವಾರಿ ಇವರು. ಅಷ್ಟೇ ಅಲ್ಲದೆ ವೃತ್ತಿ ಮಾಗ೯ದಶ೯ನ, ಏಡ್ಸ್ ಮಹಾಮಾರಿ, ಕಂಪ್ಯೂಟರ್ ಕಲಿಯಿರಿ ಎಂಬ ಹಲವು ಶೈಕ್ಷಣಿಕ ಸಾಹಿತ್ಯಿಕ ಪುಸ್ತಕಗಳು ಇವರಿಂದ ಪ್ರಕಟಣೆಗೊಂಡಿವೆ. ಇನ್ನು ಉಡುಪಿ ಜಿಲ್ಲೆಯಾದಾಗ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿಯಾಗಿ ಅದೇ ರೀತಿ ಕುಂದಾಪುರದಲ್ಲಿ ತಾಲ್ಲೂಕು ಸಂಘ ಸ್ಥಾಪಿಸಲು ಶ್ರಮಿಸಿದ ಸಾಮಾಜಿಕ ಕಾಳಜಿ ಇರುವ ಪತ್ರಕರ್ತ ನೆನಿಸಿಕೊಂಡಿದ್ದಾರೆ ಇವರು. ಇಂತಹ ಅದ್ಭುತ, ಅನುಭವಿ ಪ್ರತಿಭೆ – ಮಾಧ್ಯಮಕ್ಕಾಗಿ ತನ್ನ ಬಹುಪಾಲು ಸಮಯವನ್ನು ಸವೆದ ಶ್ರೀ ಯು.ಎಸ್. ಶೆಣೈಯವರಿಗೆ PRCI ಉಡುಪಿ- ಮಣಿಪಾಲ ಘಟಕ ಇನ್ನು ಮುಂದೆಯೂ ಸಮಾಜಕ್ಕೆ ತಮ್ಮಿಂದ ನಿಷ್ಕಲ್ಮಶ ಸೇವೆ ಲಭಿಸಲಿ ಎ೦ದು ಹಾರೈಸುತ್ತ ಪ್ರೀತಿಯಿಂದ ವಿಶ್ವ ಸಂವಹನ ಕಾರರ ದಿನಾಚರಣೆಯ ಅಂಗವಾಗಿ ಮಾಧ್ಯಮ ಜಾಣ ಪುರಸ್ಕಾರ ವನ್ನು ನೀಡಿ ಗೌರವಿಸುತ್ತಿದೆ.

ಶ್ರೀ ರಾಧಾಕೃಷ್ಣ ತೊಡಿಕಾನ ರವರಿಗೆ ಪಿ.ಆರ್.ಸಿ.ಐ. ಮಾಧ್ಯಮ ಜಾಣ ಪುರಸ್ಕಾರ

ನಾವು ಜೀವನದಲ್ಲಿ ಎಷ್ಟು ವರ್ಷ ಬದುಕಿದೆವು ಎನ್ನುವುದಕ್ಕಿಂತ ಹೇಗೆ ಬದುಕಿದೆವು ಎನ್ನುವುದು ಮುಖ್ಯ. ಜೀವನದಲ್ಲಿ ಏನು ಸಾಧಿಸಿದೆವು ಮುಂದಿನ ಜನಾಂಗಕ್ಕೆ ಏನನ್ನು ಬಿಟ್ಟು ಹೋದೆವೆನ್ನುವುದು ಇಲ್ಲಿ ನಾವು ಗಮನಿಸಬೇಕಾಗಿದೆ. ಮಾಧ್ಯಮಕ್ಕಾಗಿ ದುಡಿದು ಮಾಧ್ಯಮವನ್ನೆ ಉಸಿರಾಗಿಸಿಕೊಂಡು ಮಾಧ್ಯಮವನ್ನು ಕೃಷಿಗಾಗಿ ಬಳಸಿಕೊಂಡು ಯುವ ಪೀಳಿಗೆಗೆ ಮಾದರಿಯಾಗಿ ಬದುಕಿದ ಕೃಷಿಕ – ಸುಳ್ಯ ತಾಲೂಕಿನ ಕೋಡಿಕಾನದಲ್ಲಿ ಹುಟ್ಟಿ ಕಾರ್ಕಳವನ್ನು ತನ್ನ ಕರ್ಮಭೂಮಿಯನ್ನಾಗಿಸಿ ಕೊಂಡ ರಾಮಯ್ಯ ಮೀನಾಕ್ಷಿ ದಂಪತಿಗಳ ಸುಪುತ್ರ ಶ್ರೀಯುತ ರಾಧಾಕೃಷ್ಣ ತೊಡಿಕಾನ.
ಕೃಷಿ ಕುಟುಂಬದಲ್ಲಿ ಹುಟ್ಟಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದು ಬದುಕಿನ ಜೀವನ ಮಾಧ್ಯಮಕ್ಕೆ ಪತ್ರಿಕಾ ಮಾಧ್ಯಮವನ್ನೇ ಆರಿಸಿಕೊಂಡು ಎಲ್ಲರಿಗಿಂತ ಭಿನ್ನವಾಗಿ ವಿಭಿನ್ನ ಚಿಂತನೆಗಳಿಂದ 32 ವರ್ಷಗಳ ಕಾಲ ಅದರಲ್ಲೇ ಕೃಷಿ ಮಾಡಿ ಜೀವನ ನಡೆಸುತ್ತಿರುವ ಕೃಷಿಕ- ಇವರು. ಕಳೆದ ಮೂವತ್ತು ವರ್ಷಗಳಿಂದ ಗ್ರಾಮೀಣ ಪತ್ರಿಕೋದ್ಯಮಕ್ಕಾಗಿ ಅವಿರತವಾಗಿ ದುಡಿದು ಕೃಷಿಗೆ ಕನ್ನಡಿಯಂತಿರುವ “ಕೃಷಿ ಬಿಂಬ” ಎಂಬ ಪತ್ರಿಕೆಯನ್ನು ಪ್ರಾರಂಭಿಸಿ ಅದರ ಸಂಪಾದಕನಾಗಿ ಕಳೆದ ೩೦ ವರ್ಷಗಳಿಂದ ಕೃಷಿ ಪತ್ರಿಕೋದ್ಯಮದಲ್ಲಿ ತನ್ನನ್ನು ತೊಡಗಿಸಿಕೊಂಡು ಒಂದಷ್ಟು ಸೇವೆಯನ್ನು ಮಾಡುತ್ತಿರುವ ಜಾಣಜ್ಞಾನಿ ಇವರು. ಬೇರೆ ಬೇರೆ ಪ್ರಸಿದ್ಧ ಪತ್ರಿಕೆಗಳ ವರದಿಗಾರನಾಗುವವರು ಬಹಳಷ್ಟು ಮಂದಿ ಇರಬಹುದು. ಆದರೆ ಕೃಷಿಗಾಗಿ ಪತ್ರಿಕೆಯೊಂದನ್ನು ಪ್ರಾರಂಭಿಸಿ ಅದರಲ್ಲಿ ಯಶಸ್ಸನ್ನು ಕಾಣುವುದು ಅಷ್ಟು ಸುಲಭದ ಮಾತಲ್ಲ. ಅದನ್ನು ಈ 60ರ ಯುವಕ ಮಾಡಿ ತೋರಿಸಿದ್ದಾರೆ. ಸಾಧಿಸಿದರೆ ಸಬಳವೂ ನುಂಗಬಹುದು ಎ೦ಬ ಗಾದೆಯ ಮಾತನ್ನು ಇವರಿಗೆ ಹೋಲಿಸಿದಾಗ ನಿಜ ಅನ್ನಿಸುತ್ತದೆ. ಈ ಮಾಧ್ಯಮದ ಮೂಲಕ ಗ್ರಾಮೀಣ ಭಾಗದ ಸಮಸ್ಯೆಗಳ ಬಗ್ಗೆ ಸ್ಪಂದನೆಗೆ ಅವಕಾಶ ಮಾಡಿಕೊಟ್ಟರು. ಒಂದಷ್ಟು ಜಾಗೃತಿ ಮಾಡಿಸುವ ಪ್ರಯತ್ನ ಮಾಡಿದರು. ಮತ್ತೊಂದಷ್ಟು ಯುವ ಬರಹಗಾರರನ್ನು ಪ್ರೋತ್ಸಾಹಿಸುತ್ತ ತನ್ನೆಡೆಗೆ ಸೆಳೆದರು. ಪ್ರಗತಿಪರ ಕೃಷಿಕ ಸಾಧಕರನ್ನು ಗುರುತಿಸಿ ಸಮಾಜಕ್ಕೆ ಪರಿಚಯಿಸುತ್ತ ಬಂದರು. ಕೃಷಿ ಹಾಗೂ ಇನ್ನಿತರ ವಿಷಯಗಳ ಬಗ್ಗೆ ಒಂದಷ್ಟು ಸಮಾಜಕ್ಕೆ ಮನದಟ್ಟು ಮಾಡುತ್ತ ಬಂದರು.

ಇನ್ನು “ಕ.ರಾ. ಕೃಷ್ಣ ತೊಡಿಕಾನ ” , “ನವಜಾತ ಕಾರ್ಕಳ ” ಎಂಬ ಕಾವ್ಯನಾಮದ ಮೂಲಕ ಸಾಹಿತ್ಯ ಕೃಷಿಯಲ್ಲೂ ತೊಡಗಿಕೊಂಡರು. “ಅಸ್ತಿರರು” ಎಂಬ ಕವನ ಸಂಕಲನ, ಅಚಲ ” ಎಂಬ ಕಥಾ ಸಂಕಲನ ಇನ್ನು ಸಧ್ಯದಲ್ಲೇ ಪ್ರಕಟಣೆಗೆ ಸಿದ್ಧವಾಗಿರುವ ಕೃತಿಗಳು ಒಂದಷ್ಟು ಇವರ ಸಾಹಿತ್ಯದ ಮೇಲಿನ ಆಸಕ್ತಿಗೆ ಹಿಡಿದ ಕೈಗನ್ನಡಿಯಾದವು. ಇವರ “ಆತ್ಮ ಕಸಿದವರು” ಎಂಬ ಕಿರುಕಥೆ ಕಿರುಚಿತ್ರವಾಗಿದ್ದು ಹೆಮ್ಮೆಯ ವಿಷಯ. ಕಥೆ ಕವನಗಳನ್ನು ಬರೆಯುವುದನ್ನು ನಿತ್ಯಪರಿಪಾಠ ಮಾಡಿಕೊಂಡ ಇವರು ಹಲವಾರು ಸಾಹಿತ್ಯ ಸಮ್ಮೇಳನದಲ್ಲಿ, ಕವಿಗೋಷ್ಠಿಗಳಲ್ಲಿ ಭಾಗವಹಿಸುವುದರ ಜೊತೆಗೆ ಹಲವು ಕಡೆಗಳಲ್ಲಿ ಇವರು ಸನ್ಮಾನಕ್ಕೆ ಭಾಜನರಾಗಿದ್ದರು. ಮತ್ತು ಕೆಲವೆಡೆ ಕವಿಗೋಷ್ಟಿಯ ಅಧ್ಯಕ್ಷರಾಗಿಯೂ ಕರ್ತವ್ಯ ನಿರ್ವಹಿಸಿದ್ದರು. JCI ಕಾರ್ಕಳ, ಕಾಂತಾವರ ದಸರಾ ನಾಡಹಬ್ಬ, ಸುಳ್ಯ ಪತ್ರಕರ್ತರ ಸಂಘ ಕಾರ್ಕಳ ತಾಲೂಕು ಕಲಾರಂಗ, ಬೆಳ್ಮಣ್ ತಾಲ್ಲೂಕು ಪತ್ರಕರ್ತರ ಬಳಗ , ಲಯನ್ಸ್ ಕ್ಲಬ್ ಕಾರ್ಕಳ ಹೀಗೆ ಹತ್ತು ಹಲವು ಸಂಘ ಸಂಸ್ಥೆ, ಸಮ್ಮೇಳನದಲ್ಲಿ ಇವರು ಪತ್ರಿಕೆ ಹಾಗೂ ಸಾಹಿತ್ಯ ಕೃಷಿಗಾಗಿ ಸನ್ಮಾನಿತರಾದರು. ಕಾರ್ಕಳ ಗ್ರಾಮೋತ್ಸವ ಪ್ರಶಸ್ತಿ ಹೂಗಾರ ಮಾಧ್ಯಮ ಪ್ರಶಸ್ತಿ ಇತ್ಯಾದಿಗಳಿಂದ ಪುರಸ್ಕೃತರಾದ ತೊಡಿಕಾನ ರವರ ಕಥೆ, ಸಂದರ್ಶನಗಳು ಆಕಾಶವಾಣಿಯಲ್ಲೂ ಪ್ರಸಾರಗೊಂಡಿದೆ. ಇಂತಹ ಅದ್ಭುತ ಪ್ರತಿಭೆಗೆ ಪಬ್ಲಿಕ್ ರಿಲೇಶನ್ಸ್ ಕೌನ್ಸಿಲ್ ಆಫ್ ಇಂಡಿಯಾ ಉಡುಪಿ – ಮಣಿಪಾಲ ಘಟಕವು ಇವರಿಗೆ ಬಹು ಗೌರವದೊಂದಿಗೆ ವಿಶ್ವ ಸಂವಹನ ದಿನಾಚರಣೆಯ ಅಂಗವಾಗಿ “ಮಾಧ್ಯಮ ಜಾಣ ಪುರಸ್ಕಾರ ” ವನ್ನು ನೀಡಿ ಗೌರವಿಸುತ್ತಿದೆ.

ಬರಹಃ ರಾಜೇಶ್ ಭಟ್ ಪಣಿಯಾಡಿ 

No Comments

Leave A Comment