ದೇಶ ಬಿಡಿ, ಇಲ್ಲವೇ ಇಸ್ಲಾಂಗೆ ಮತಾಂತರವಾಗಿ: ಅಫ್ಘನ್ ಸಿಖ್ಖರಿಗೆ ತಾಲಿಬಾನ್ ತಾಕೀತು
ಕಾಬೂಲ್: ಅಫ್ಘಾನಿಸ್ತಾನದಲ್ಲಿ ಹದಗೆಟ್ಟ ಭದ್ರತಾ ಪರಿಸ್ಥಿತಿ ಮುಂದುವರೆದಿದ್ದು, ಸರ್ಕಾರ ಪತನಕ್ಕೂ ಮುಂಚೆ ಶೋಚನೀಯ ಪರಿಸ್ಥಿತಿಯಲ್ಲಿದ್ದ ಸಿಖ್ ಸಮುದಾಯ, ಸುನ್ನಿ ಇಸ್ಲಾಂಗೆ ಮತಾಂತರವಾಗುವ ಅಥವಾ ದೇಶ ತೊರೆಯುವ ಆಯ್ಕೆಯನ್ನು ಮಾಡಿಕೊಳ್ಳಬೇಕಾಗಿದೆ ಎಂದು ವರದಿಯೊಂದು ತಿಳಿಸಿದೆ.
ಒಂದು ಕಾಲದಲ್ಲಿ ಸಹಸ್ರಾರು ಸಂಖ್ಯೆಯಲ್ಲಿದ್ದ ಸಿಖ್ ಸಮುದಾಯ ಅಫ್ಘಾನಿಸ್ತಾನದಲ್ಲಿ ವ್ಯವಸ್ಥಿತ ತಾರತಮ್ಯ ಮತ್ತು ಅತಿರೇಕದ ಧಾರ್ಮಿಕ ಹಿಂಸಾಚಾರಗಳ ಉಲ್ಬಣದಿಂದ ಹಾಳಾಗಿದೆ ಎಂದು ಹಕ್ಕುಗಳು ಮತ್ತು ಭದ್ರತೆಯ ಅಂತಾರಾಷ್ಟ್ರೀಯ ಒಕ್ಕೂಟ ಹೇಳಿದೆ.
ಕಾಬೂಲ್ ನಲ್ಲಿ ಹೆಚ್ಚಿನ ಸಂಖ್ಯೆಯ ಸಿಖ್ಖರು ವಾಸಿಸುತ್ತಿದ್ದರೆ, ಘಜ್ನಿ ಮತ್ತು ನಾಂಗರ್ ಹರ್ ನಲ್ಲಿ ಕೆಲವು ಜನರು ವಾಸಿಸುತ್ತಿದ್ದಾರೆ. ಅಕ್ಟೋಬರ್ 5 ರಂದು ಗುರುದ್ವಾರಕ್ಕೆ ಆಗಮಿಸಿದ 15 ರಿಂದ 20 ಉಗ್ರರು ಭದ್ರತಾ ಕಾವಲುಗಾರರನ್ನು ಕಟ್ಟಿಹಾಕಿದ್ದರು. ಕಾಬೂಲ್ ನ ಕರ್ತ್ -ಇ- ಪರ್ವಾನ್ ಜಿಲ್ಲೆಯಲ್ಲಿ ದಾಳಿ ನಡೆದಿತ್ತು. ಇಂತಹ ದಾಳಿ ಮತ್ತು ಹಿಂಸಾಚಾರಗಳು ಅಫ್ಘಾನಿಸ್ತಾನದ ಸಿಖ್ಖರಿಗೆ ಸರ್ವೆ ಸಾಮಾನ್ಯವಾಗಿದೆ. ಅನೇಕ ಸಿಖ್ ವಿರೋಧಿ ಹಿಂಸಾಚಾರ, ದಾಳಿಗಳು ಅಪ್ಘಾನಿಸ್ತಾನದಲ್ಲಿ ನಡೆದಿವೆ.
ಕಳೆದ ವರ್ಷ ಜೂನ್ ನಲ್ಲಿ ಆಫ್ಘನ್ ಸಿಖ್ ಮುಖಂಡರೊಬ್ಬರನ್ನು ಉಗ್ರರಿಂದ ಅಪಹರಿಸಲಾಗಿತ್ತು. ಆಮೇಲೆ ಏನಾಯಿತು ಎಂಬುದರ ವಿವರ ತಿಳಿಯದೆ ಕೇಸ್ ನ್ನು ಮುಚ್ಚಲಾಯಿತು. ಮಾರ್ಚ್ 2019ರಲ್ಲಿ ಇದೇ ರೀತಿಯಲ್ಲಿ ಸಿಖ್ ಸಮುದಾಯದ ವ್ಯಕ್ತಿಯೊಬ್ಬನನ್ನು ಅಪಹರಿಸಿ ಹತ್ಯೆ ಮಾಡಲಾಗಿತ್ತು.
ಸಿಖ್ಖರು ಅಫ್ಘಾನಿಸ್ತಾನದಲ್ಲಿ ಅನೇಕ ದಶಕಗಳಿಂದ ವಾಸಿಸುತ್ತಿದ್ದರೂ ಅವರಿಗೆ ಸೂಕ್ತ ಮನೆ, ನೀಡುವಲ್ಲಿ ಅಫ್ಘನ್ ಸರ್ಕಾರ ವಿಫಲವಾಗಿದೆ. ಇತ್ತೀಚಿಗೆ ಮಾರ್ಚ್ 26, 2020 ರಂದು ಕಾಬೂಲ್ ನಲ್ಲಿನ ಗುರುದ್ವಾರದಲ್ಲಿ ತಾಲಿಬಾನ್ ಉಗ್ರರಿಂದ ಸಿಖ್ಖರ ನರಮೇದ ನಡೆದ ನಂತರ ಅನೇಕ ಜನರು ಅಫ್ಘಾನಿಸ್ತಾನ ತೊರೆದು ಭಾರತಕ್ಕೆ ಬಂದಿದ್ದಾರೆ ಎಂದು ಐಎಫ್ ಎಫ್ ಆರ್ ಎಸ್ ಹೇಳಿದೆ.