ರಿವಾಲ್ವರ್ ತೋರಿಸಿ ದರೋಡೆ : ಪೊಲೀಸರಿಂದ ತಪ್ಪಿಸಿಕೊಳ್ಳಲು ಮಾಧ್ಯಮಗಳ ನಕಲಿ ಐಡಿ ಕಾರ್ಡ್ ಬಳಕೆ : ಇಬ್ಬರ ಬಂಧನ
ಬೆಂಗಳೂರು : ರಿವಾಲ್ವರ್ ತೋರಿಸಿ ದರೋಡೆ ಹಾಗೂ ಮನೆಗಳವು ಮಾಡುತ್ತಿದ್ದ ಇಬ್ಬರನ್ನು ಬಾಣಸವಾಡಿ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಬಾಂಬೆ ಸಲೀಂ, ತಮ್ಮ ಬಶೀರ್ ಅಲಿಯಾಸ್ ಸಮ್ಮು ಬಂಧಿತರು ಎಂದು ಗುರುತಿಸಲಾಗಿದೆ.
2018ರಲ್ಲಿ ಕಳುವಾಗಿದ್ದ ಕಾರನ್ನೇ ಈ ಆರೋಪಿಗಳು ಕಳ್ಳತನಕ್ಕೆ ಬಳಸುತ್ತಿದ್ದರು ಎನ್ನಲಾಗಿದೆ. ಬಶೀರ್ ಅಲಿಯಸ್ ಸಮ್ಮೂ ಎಂಬಾತ ಪೊಲೀಸರಿಂದ ತಪ್ಪಿಸಿಕೊಳ್ಳಲು ಮಾಧ್ಯಮ ಸಂಸ್ಥೆಯೊಂದರ ಗುರುತಿನ ಪತ್ರ ಬಳಸುತ್ತಿದ್ದ. ಅರೋಪಿಗಳ ಬಂಧನದಿಂದ ಒಟ್ಟು 18 ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳ ಬಳಿ ಒಂದು ನಾಡ ಬಂದೂಕು ಹಾಗೂ ಜೀವಂತ ಗುಂಡುಗಳು ಪತ್ತೆಯಾಗಿವೆ. ಕೊಲ್ಕತ್ತಾದಿಂದ ಪಿಸ್ತೂಲ್ ಖರೀದಿಸಿದ್ದೆವು ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ. ಈ ಹಿಂದೆ ಆರೋಪಿಗಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆ ರಾಜಾನುಕುಂಟೆ ಬಳಿ ಬಂಧಿಸಲು ಪೊಲೀಸರು ಯತ್ನಿಸಿದ್ದರು. ಈ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿ, ಪೊಲೀಸರನ್ನು ಹೆದರಿಸಿ ಆರೋಪಿಗಳು ತಪ್ಪಿಸಿಕೊಂಡಿದ್ದರು.
ನಗರದ ಹಲವು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇವರ ವಿರುದ್ಧ ಕಳ್ಳತನ ಮತ್ತು ದರೋಡೆ ಪ್ರಕರಣಗಳು ದಾಖಲಾಗಿದ್ದವು. ಹಣೆಗೆ ಪಿಸ್ತೂಲ್ ಇಟ್ಟು ದರೋಡೆ ಮಾಡುವುದು, ಯಾರು ಇಲ್ಲದ ಮನೆಗಳಿಗೆ ನುಗ್ಗಿ ಕಳ್ಳತನ ಮಾಡುವುದು ಇವರ ಅಪರಾಧ ವೈಖರಿಯಾಗಿತ್ತು. ಬಂಧಿತರಿಂದ ಕೆಜಿಗಟ್ಟಲೆ ಚಿನ್ನ ಮತ್ತು ಬೆಳ್ಳಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹಣೆಗೆ ಬಂದೂಕು ಇಟ್ಟು ದರೋಡೆ ಮಾಡುವುದನ್ನೂ ಇವರು ರೂಢಿಸಿಕೊಂಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.