Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿನ 94ನೇ ಭಜನಾ ಸಪ್ತಾಹ ಮಹೋತ್ಸವಕ್ಕೆ ದೀಪ ಪ್ರಜ್ವಲನೆಯೊ೦ದಿಗೆ ವಿದ್ಯುಕ್ತ ಚಾಲನೆ.......ಡಿ.2ರ ಶುಕ್ರವಾರದ೦ದು ಪುತ್ತಿಗೆ ಮಠದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ಪರ್ಯಾಯ ಮಹೋತ್ಸವಕ್ಕೆ ಬಾಳೆಮುಹೂರ್ತ ಕಾರ್ಯಕ್ರಮವು 8ಗ೦ಟೆಗೆ ಪುತ್ತಿಗೆ ಮಠದ ಆವರಣದಲ್ಲಿ ಜರಗಲಿದೆ...

ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣ: ಪಂಜಾಬ್-ಹರಿಯಾಣದಲ್ಲಿ ಹಳಿ ಮೇಲೆ ಕುಳಿತು ರೈತರ ಪ್ರತಿಭಟನೆ, ನ್ಯಾಯಕ್ಕಾಗಿ ಆಗ್ರಹ

ನವದೆಹಲಿ: ಈಗಾಗಲೇ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕಳೆದೊಂದು ವರ್ಷದಿಂದ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು ಸೋಮವಾರ ಲಖೀಂಪುರ್ ಖೇರಿ ಹಿಂಸಾಚಾರದ ವಿರುದ್ಧ ‘ರೈಲ್‌ ರೋಖೋ’ ಪ್ರತಿಭಟನೆ ನಡೆಸುತ್ತಿದ್ದಾರೆ.

ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ರೈತ ಸಂಘಟನೆಯು ದೇಶಾದ್ಯಂತ 6 ಗಂಟೆಗಳ ಕಾಲ ರೈಲ್‌ ರೋಖೋ ಪ್ರತಿಭಟನೆಗೆ ಕರೆ ನೀಡಿರುವ ಹಿನ್ನೆಲೆ ಪಂಜಾಬ್ ಮತ್ತು ಹರಿಯಾಣದ ಎಲ್ಲಾ ರೈಲ್ವೆ ಹಳಿಗಳ ಮೇಲೆ ರೈತರು ಕುಳಿತು ಧರಣಿ ನಡೆಸುತ್ತಿದ್ದಾರೆ. ಪರಿಣಾಮ ಎಲ್ಲಾ ಮಾರ್ಗಗಳಲ್ಲಿ ರೈಲು ಸಂಚಾರ ಸ್ಥಗಿತವಾಗಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ.

ಲಖೀಂಪುರ್ ಖೇರಿ ಹಿಂಸಾಚಾರ ಪ್ರಕರಣದ ಆರೋಪಿ ಆಶಿಶ್ ಮಿಶ್ರಾ, ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಪುತ್ರನಾಗಿರುವ ಕಾರಣ ಅಜಯ್ ಮಿಶ್ರಾರನ್ನು ಕೇಂದ್ರ ಸಚಿವ ಸಂಪುಟದಿಂದ ತೆಗೆದುಹಾಕಬೇಕೆಂಬ ಬೇಡಿಕೆಯನ್ನು ಬೆಂಬಲಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಇಂದು ಬೆಳಗ್ಗೆ 10 ಗಂಟೆಗೆ ಪ್ರತಿಭಟನೆ ಆರಂಭವಾಗಿದ್ದು, ಸಂಜೆ 4 ಗಂಟೆಯವರೆಗೆ ಮುಂದುವರೆಯಲಿದೆ.

ಕೇಂದ್ರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಸಂಯುಕ್ತ ಕಿಸಾನ್‌ ಮೋರ್ಚಾ ರೈತ ಸಂಘಟನೆ ಒಕ್ಕೂಟವು, ‘ಲಖಿಂಪುರ ಖೇರಿ ಪ್ರಕರಣದಲ್ಲಿ ನ್ಯಾಯ ಸಿಗುವವರೆಗೂ ಹೋರಾಟದ ತೀವ್ರತೆ ಹೆಚ್ಚಿಸಲಾಗುತ್ತದೆ’ ಎಂದು ಹೇಳಿದೆ.

ಅಕ್ಟೋಬರ್‌ 3ರಂದು ಲಖಿಂಪುರ ಖೇರಿ ಹಿಂಸಾಚಾರದಲ್ಲಿ ಮೃತಪಟ್ಟ 8 ಜನರ ಪೈಕಿ ನಾಲ್ವರು ರೈತರು. ಬಿಜೆಪಿ ಕಾರ್ಯಕರ್ತರಿದ್ದ ವಾಹನಗಳು ರೈತರ ಮೇಲೆ ಹರಿದು ನಾಲ್ವರು ರೈತರು ಸಾವಿಗೀಡಾದರು. ಅನಂತರ ಆಕ್ರೋಶಗೊಂಡ ಪ್ರತಿಭಟನಾಕಾರರು ವಾಹನದಲ್ಲಿದ್ದವರ ಮೇಲೆ ಹಲ್ಲೆ ಮಾಡಿದರು. ಆ ಹಿಂಸಾಚಾರದಲ್ಲಿ ಇಬ್ಬರು ಬಿಜೆಪಿ ಕಾರ್ಯಕರ್ತರು ಮತ್ತು ಅವರ ವಾಹನ ಚಾಲಕ ಮೃತಪಟ್ಟಿದ್ದರು.

ರೈತರ ಮೇಲೆ ನುಗ್ಗಿದ ವಾಹನಗಳ ಪೈಕಿ ಒಂದರಲ್ಲಿ ಸಚಿವ ಅಜಯ್‌ ಮಿಶ್ರಾ ಅವರ ಮಗ ಆಶಿಶ್‌ ಮಿಶ್ರಾ ಸಹ ಇದ್ದರು ಎಂದು ರೈತರು ಆರೋಪಿಸಿದ್ದಾರೆ. ರೈತರ ಸಾವಿನ ಪ್ರಕರಣದ ಸಂಬಂಧ ಅಕ್ಟೋಬರ್‌ 9ರಂದು ಆಶಿಶ್‌ ಮಿಶ್ರಾ ಅವರನ್ನು ಬಂಧಿಸಲಾಗಿದೆ.

No Comments

Leave A Comment