ಕಾಂಗ್ರೆಸ್ ನಲ್ಲಿ ಡಿಕೆಶಿ ಜೊತೆಗಿದ್ದರೆ ಸಿದ್ದರಾಮಯ್ಯರಿಗೆ ಅಚ್ಚೇದಿನ್ ಬರುವುದಿಲ್ಲ: ಸಿಎಂ ಬೊಮ್ಮಾಯಿ
ಹಾನಗಲ್: ಉಪಚುನಾವಣೆ ಪ್ರಚಾರ ಅಖಾಡಕ್ಕೆ ಮೊದಲ ಬಾರಿ ಧುಮುಕಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಹಾನಗಲ್ಲ ತಾಲೂಕಿನ ಕ್ರೀಡಾಂಗಣದಲ್ಲಿ ಭಾನುವಾರ ಪಕ್ಷದ ಅಭ್ಯರ್ಥಿ ಶಿವರಾಜ ಸಜ್ಜನರ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಎಲ್ಲಿದೆ ಮೋದಿ ಅಚ್ಚೇದಿನ್ ಎಂದು ಜರಿದಿದ್ದ ಸಿದ್ದರಾಮಯ್ಯ ಅವರ ಕುರಿತು ವ್ಯಂಗ್ಯವಾಡಿದರು.
ಕಾಂಗ್ರೆಸ್ಸನ್ನು ಮುಗಿಸುವ ಅಗತ್ಯವಿಲ್ಲ. ಒಳಜಗಳದಿಂದಾಗಿ ಅವರೇ ಮುಗಿಸಿಬಿಡುತ್ತಿದ್ದಾರೆ. ಯಡಿಯೂರಪ್ಪ ಬೊಮ್ಮಾಯಿ ಅವಧಿಯಲ್ಲಿ ಹಾನಗಲ್ಲ ಕ್ಷೇತ್ರದಲ್ಲಿ ಏನೂ ಅಭಿವೃದ್ಧಿಯಾಗಿಲ್ಲ ಎಂದು ಸಿದ್ದರಾಮಯ್ಯ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದಾಗ ರೂ.533 ಕೋಟಿ ವೆಚ್ಚದಲ್ಲಿ ಹಿರೇಕಾಂಶಿ, ಬಾಳಂಬೀಡ ಏತ ನೀರಾವರಿ ಯೋಜನೆ ಆರಂಭವಾಗಿದೆ. ನೂರಾರು ಕೆರೆ ತುಂಬಿಸುವ ಯೋಜನೆ ಆರಂಭವಾಗಿದ್ದು, ಬಿಜೆಪಿ ಸರ್ಕಾರದ ಅವಧಿಯಲ್ಲಿ. ನೀವು 5 ವರ್ಷ ಸಿಎಂ ಆಗಿದ್ದಾಗ ಏನು ಮಾಡಿದ್ದೀರಿ? ಆಗ ನಿಮಗೆ ನೀರಾವರಿ ಯೋಜನೆ ಮಂಜೂರು ಮಾಡಬೇಕು ಅನಿಸಲಿಲ್ಲ. ಈಗ ಚುನಾವಣೆ ಬಂದಾಗ ಸುಳ್ಳು ಹೇಳಿ ಮತ ಕೇಳಲು ಬಂದಿದ್ದೀರಿ. ಇಲ್ಲಿ ಆಗಿರುವ ಯೋಜನೆಗಳ ಪಟ್ಟಿಯನ್ನೇ ನೀಡುತ್ತೇನೆ. ಹಳ್ಳಿಹಳ್ಳಿಗೆ ಹೋಗಿ ನೋಡಿ ಸಿದ್ದರಾಮಯ್ಯ, ಬಾರಪ್ಪ ನೋಡು… ಎಂದು ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದರು.
ಮೈಸೂರು ಜನರೇ ನಿಮ್ಮ ಮೇಲೆ ವಿಶ್ವಾಸ ಇಟ್ಟಿಲ್ಲ. ಇನ್ನು ಹಾನಗಲ್ಲಿಗೆ ಬಂದು ಏನು ಮಾಡುತ್ತೀರಿ? ಕೋವಿಡ್ ಸಂದರ್ಭದಲ್ಲಿ ಏನೋ ಸಾಧನೆ ಮಾಡಿದ್ದೇವೆಂದು ಹೇಳುತ್ತೀದ್ದೀರಿ. ಕೋವಿಡ್ ಆಸ್ಪತ್ರೆ ಮಾಡಿದ್ದ ನೋಡಿ, ನೀರಾವರಿ ಯೋಜನೆ ನೋಡಿ. ನಾವು ಯಾರಿಗೂ ಅನ್ಯಾಯ ಆಗಲು ಬಿಡುವುದಿಲ್ಲ. ಇಲ್ಲಿ ಶಿವರಾಜ ಸಜ್ಜನರ ಅವರನ್ನು ಗೆಲ್ಲಿಸಿದರೆ ನನ್ನನ್ನು ಗೆಲ್ಲಿಸಿದಂತೆ. ಇಲ್ಲಿಯ ಮಗನಾಗಿ ನಾನು ಸುಳ್ಳು ಹೇಳಲು ಸಾಧ್ಯವಿಲ್ಲ. ಇಲ್ಲೇ ಇರುತ್ತೇವೆ. ನಿಮ್ಮೊಂದಿಗೆ ಬದುಕುತ್ತೇವೆ. ಇಲ್ಲೇ ಸಾಯುತ್ತೇವೆ. ಈ ಚುನಾವಣೆ ನನ್ನ ಪ್ರತಿಷ್ಠೆಯ ಪ್ರಶ್ನೆಯದ್ದಲ್ಲ. ಇದು ಹಾನಗಲ್ಲ ಕ್ಷೇತ್ರದ ಜನರ ಭವಿಷ್ಯದ ಪ್ರತಿಷ್ಠೆ. ಆದ್ದರಿಂದ ಶಿವರಾಜ ಸಜ್ಜನರನ್ನು ಗೆಲ್ಲಿಸಿ ಎಂದು ಹೇಳಿದರು.
ಇದೇ ವೇಳೆ ಸಿ.ಎಂ.ಉದಾಸಿಯವರನ್ನು ನೆನೆದ ಮುಖ್ಯಮಂತ್ರಿಗಳು, ಹಾನಗಲ್ ತಾಲ್ಲೂಕು ರಾಜಕಾರಣ ಬಹಳ ವಿಭಿನ್ನವಾದುದು. ಸಿ.ಎಂ.ಉದಾಸಿ ಮತ್ತು ಮನೋಹರ ತಹಶೀಲ್ದಾರ್ ಈ ಇಬ್ಬರೂ ಅಭ್ಯರ್ಥಿಗಳ ಕೇಂದ್ರೀಕೃತ ಚುನಾವಣೆಯಾಗಿತ್ತು. ಎರಡು ದಶಕಗಳ ನಂತರ ಮೊದಲ ಬಾರಿ ಆ ಇಬ್ಬರು ಕಣದಲ್ಲಿ ಇಲ್ಲದೇ ಚುನಾವಣೆ ನಡೆಯುತ್ತಿದೆ ಎಂದರು.
ಬಾಳಂಬೀಡ ಏತ ನೀರಾವರಿ ಯೋಜನೆ ಸೇರಿದಂತೆ ಹಲವು ಯೋಜನೆಗಳು ಬಿಜೆಪಿ ಕಾಲದಲ್ಲೇ ಜಾರಿಯಾಗಿವೆ. ಎಲ್ಲವೂ ಕಡತದಲ್ಲಿ ದಾಖಲಾಗಿದೆ. ಸುಳ್ಳು ಪ್ರಚಾರ ಮಾಡಿದರೆ ಸತ್ಯವಾಗುವುದಿಲ್ಲ. ದಾಖಲೆಯನ್ನು ನೋಡಿದರೆ, ಯಾರ ಕಾಲದಲ್ಲಿ ಟೆಂಡರ್ ಆಯಿತು, ಯಾರ ಕಾಲದಲ್ಲಿ ಅನುದಾನ ಬಿಡುಗಡೆ ಆಯಿತು ಎಂಬುದು ತಿಳಿಯುತ್ತದೆ.
ಸಿ.ಎಂ. ಉದಾಸಿ ಅವರು ತಾವು ಗೆಲ್ಲುವ ಮೂಲಕ ಪಕ್ಷವನ್ನೂ ಕಟ್ಟಿ ಬೆಳೆಸಿದರು. ಜನರ ಜತೆ ನಿಕಟ ಸಂಪರ್ಕ ಹೊಂದಿದ್ದರು. ವೈಯಕ್ತಿಕ ಸ್ಪಂದನೆ ಉತ್ತಮವಾಗಿತ್ತು. ಹಾನಗಲ್ ಅಭಿವೃದ್ಧಿಗೆ ಉದಾಸಿ ಕೊಡುಗೆ ಬಹಳ ದೊಡ್ಡದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರೈತರಿಗೆ ಬೆಳೆ ವಿಮೆಯನ್ನು ಪರಿಚಯ ಮಾಡಿಕೊಟ್ಟಿದ್ದೇ ಉದಾಸಿಯವರು. ಎರಡು ದಶಕಗಳ ಕಾಲ ರೈತರ ಸಮಸ್ಯೆಗಳಿಗೆ ಸ್ಪಂದಿಸಿ ನ್ಯಾಯ ಒದಗಿಸಿದ್ದಾರೆ. ಹಾವೇರಿ ಜಿಲ್ಲೆ ಮಾಡುವಲ್ಲೂ ಉದಾಸಿ ಕೊಡುಗೆ ಅಪಾರ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಅಡಿಗಲ್ಲು ಹಾಕಿದರು. ತುಂಗಾ ಮೇಲ್ದಂಡೆ ಯೋಜನೆ ಕೂಡ ಉದಾಸಿ ಅವರ ಕೊಡುಗೆ ದೊಡ್ಡದು ಎಂದು ಗುಣಗಾನ ಮಾಡಿದರು.
ಬಳಿಕ ಮಾತನಾಡಿದ ಶಿವರಾಜ ಸಜ್ಜನರ ಅವರು, ಹಾವೇರಿ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಉದಾಸಿ ಹಾಗೂ ಸಜ್ಜನರ್ ಮುಚ್ಚಿಸಿದ್ದರು ಎಂದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಆರೋಪವನ್ನು ತಿರಸ್ಕರಿಸಿದರು.