Log In
BREAKING NEWS >
ಮಾರ್ಚ್ 22ರ೦ದು ಚ೦ದ್ರಾಮಾನ ಯುಗಾದಿ ,ಏಪ್ರಿಲ್ 15ರ೦ದು ಸೌರಮಾನ ಯುಗಾದಿ ಹಬ್ಬವು ನಡೆಯಲಿದೆ.ಹಲವಾರು ಗಣ್ಯರು ಯುಗಾದಿ ಹಬ್ಬದ ಶುಭಾಶಯವನ್ನು ಕೋರಿರುತ್ತಾರೆ.....

ಮಳೆಯ ನಡುವೆ ಮಲ್ಪೆ ಬೀಚ್‌ನಲ್ಲಿ ಬೃಹತ್ ಸ್ವಚ್ಛತಾ ಅಭಿಯಾನ

ಮಲ್ಪೆ: ಅಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಕೇಂದ್ರ ಸರಕಾರದ ಯುವಜನ ಕಾರ್ಯ ಹಾಗೂ ಕ್ರೀಡಾ ಸಚಿವಾಲಯವು ನೆಹರು ಯುವ ಕೇಂದ್ರ ಸಂಘಟನೆ, ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಷ್ಟ್ರ‍ೀಯ ಸೇವಾ ಯೋಜನೆ, ಎನ್.ಸಿ.ಸಿ., ಭಾರತ್ ಸ್ಕೌಟ್ಸ್ & ಗೈಡ್ಸ್, ಯುವಕ ಮಂಡಲಗಳು, ಸ್ವಚ್ಛ ಭಾರತ್ ಫ್ರೆಂಡ್ಸ್ ಹಾಗೂ ಜೇಸಿಐ ಸಂಯುಕ್ತ ಆಶ್ರಯದಲ್ಲಿ ಕ್ಲೀನ್ ಇಂಡಿಯಾ ಕಾರ್ಯಕ್ರಮ ಇಂದು ಮಲ್ಪೆ ಬೀಚ್‌ನಲ್ಲಿ ನಡೆಯಿತು.

ಉಡುಪಿ ಶಾಸಕ ಕೆ. ರಘುಪತಿ ಭಟ್ ಹಾಗೂ ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ ಜಂಟಿಯಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಶಾಸಕ ಕೆ. ರಘುಪತಿ ಭಟ್, ನೆಹರೂ ಯುವ ಕೇಂದ್ರ ಉಡುಪಿ ಹಾಗೂ ಜಿಲ್ಲಾ ಪಂಚಾಯತ್ ನೇತೃತ್ವದಲ್ಲಿ ಕಳೆದ ಒಂದು ತಿಂಗಳಿನಿಂದ ಜಿಲ್ಲೆಯಲ್ಲಿ ವ್ಯಾಪಕವಾಗಿ ಕ್ಲೀನ್ ಇಂಡಿಯಾ ಅಭಿಯಾನ ಅರ್ಥಪೂರ್ಣವಾಗಿ ನಡೆಯುತ್ತಿರುವುದು ಶ್ಲಾಘನೀಯ.

ಸ್ವಚ್ಛತೆ ಒಂದು ದಿನದ ಮಾತಾಗದೇ ನಿರಂತರ ಪ್ರತಿಯೊಬ್ಬರ ದೈನಂದಿನ ಜೀವನದಲ್ಲಿ ಅವಿಭಾಜ್ಯ ಅಂಗವಾಗಬೇಕು. ಸರಕಾರ ಮತ್ತು ಸರಕಾರೇತರ ಸಂಸ್ಥೆಗಳ ಸಕ್ರಿಯ ಸಹಭಾಗಿತ್ವದಿಂದ ಸ್ವಚ್ಛ ಭಾರತ ಅಭಿಯಾನ ಯಶಸ್ವಿಯಾಗುತ್ತಿದೆ. ಸ್ವಚ್ಛತೆ ನಮ್ಮಲ್ಲೆರ ಪ್ರಜ್ಞೆಯ ಭಾಗವಾದರೆ ಮಾತ್ರ ಕ್ಲೀನ್ ಇಂಡಿಯಾ ಅಭಿಯಾನಕ್ಕೆ ಇಂಧನ ಸಿಕ್ಕಿದಂತಾಗುತ್ತದೆ ಎಂದರು.

ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ ಮಾತನಾಡಿ, ಪ್ರವಾಸಿ ಸ್ಥಳಗಳ ಸ್ವಚ್ಛತೆ ಕಾಪಾಡುವಲ್ಲಿ ಪ್ರತಿಯೊಬ್ಬರೂ ಕ್ರಿಯಾಶೀಲ ಪ್ರಯತ್ನ ಮಾಡಬೇಕು. ಮರುಬಳಕೆಯ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಿದರೆ ಸ್ವಚ್ಛತೆಯನ್ನು ಕಾಪಾಡುವಲ್ಲಿ ದೊಡ್ಡ ಹೆಜ್ಜೆ ಇಟ್ಟ ಹಾಗೆ ಆಗುತ್ತದೆ.

ಯುವಜನರು ಸ್ವಚ್ಛತೆಯ ಪರಿಕಲ್ಪನೆಯನ್ನು ಸಾಕಾರಗೊಳಿಸುವಲ್ಲಿ ಸ್ಥಳೀಯಾಡಳಿತದ ಜೊತೆಗೆ ಸಮನ್ವಯವನ್ನು ಸಾಧಿಸಿ ಇತರರಿಗೂ ಪ್ರೇರಣೆ ನೀಡಿದರೆ ಕ್ಲೀನ್ ಇಂಡಿಯಾ ಪರಿಕಲ್ಪನೆ ಸಾಕಾರಗೊಳ್ಳುತ್ತದೆ. ಮೂಲದಲ್ಲಿ ಕಸದ ವಿಂಗಡನೆ ಮತ್ತು ಪರ್ಯಾಯ ಮಾರ್ಗಗಳನ್ನು ಬಳಸುವ ಮೂಲಕ ತ್ಯಾಜ್ಯದ ಉತ್ಪತ್ತಿಯನ್ನು ಕಡಿಮೆಗೊಳಿಸಬಹುದು. ಸ್ವಚ್ಛ ಭಾರತಕ್ಕೆ ಇದೊಂದು ದೊಡ್ಡ ಕೊಡುಗೆಯಾಗುತ್ತದೆ ಎಂದರು.

ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್, ಲೀಡ್ ಬ್ಯಾಂಕ್ ಕೆನರಾ ಬ್ಯಾಂಕ್ ಡಿವಿಷನಲ್ ಮ್ಯಾನೇಜರ್ ಪಿಂಜರ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಎಸ್.ಬಿ.ಐ., ಬ್ಯಾಂಕ್ ಆಫ್ ಬರೋಡ, ಕರ್ನಾಟಕ ಬ್ಯಾಂಕ್ ಅಧಿಕಾರಿಗಳು, ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಪ್ರಾಂಶುಪಾಲೆ ಮಾರ್ಟಿಸ್, ಆಯೋಜಕ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು. ಸ್ವಚ್ಛ ಭಾರತದ ರಾಜ್ಯ ಸಂಪನ್ಮೂಲ ವ್ಯಕ್ತಿ ಜೋಸೆಫ್ ರೆಬೆಲ್ಲೋ ಸಹಕರಿಸಿದರು.

ಜಿಲ್ಲಾಧಿಕಾರಿ, ಶಾಸಕರು, ಅಪರ ಜಿಲ್ಲಾಧಿಕಾರಿ ಮಳೆಯ ನಡುವೆ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿದರು.

ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ವಿಲ್ಫ್ರೆಡ್ ಡಿಸೋಜ ಸ್ವಾಗತಿಸಿ, ಯುವಜನ ಕ್ರೀಡಾ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ ನಿರೂಪಿಸಿ ವಂದಿಸಿದರು. ಸುಮಾರು 80ಕ್ಕಿಂತ ಹೆಚ್ಚಿನ ಚೀಲಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಲಾಯಿತು.

No Comments

Leave A Comment