Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ನೀವು ಅನುಮತಿ ನೀಡಿದರೆ, ಕಾಂಗ್ರೆಸ್‌ಗೆ ನಾನೇ ಪೂರ್ಣಾವಧಿಯ, ಸಕ್ರಿಯ ಅಧ್ಯಕ್ಷೆ: ಸೋನಿಯಾ ಗಾಂಧಿ ಮಹತ್ವದ ನಿರ್ಧಾರ

ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ ಅವರೇ ಕಾಂಗ್ರೆಸ್‌ ಪಕ್ಷಕ್ಕೆ  ಪೂರ್ಣಾವಧಿಯ, ಸಕ್ರಿಯ ಅಧ್ಯಕ್ಷರಾಗಿ ಮುಂದುವರೆಯಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

ತೀವ್ರ ಕುತೂಲಹ ಕೆರಳಿಸಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ಇಂದು ದೆಹಲಿಯಲ್ಲಿರುವ ಎಐಸಿಸಿ ಕಚೇರಿಯಲ್ಲಿ ಆರಂಭವಾಗಿದ್ದು, ಕೊರೊನಾ ಕಾರಣದಿಂದ ನಡೆಯದೇ ಉಳಿದಿದ್ದ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ (ಸಿಡಬ್ಲ್ಯೂಸಿ) ಸಭೆ ಒಂದೂವರೆ ವರ್ಷದ ಬಳಿಕ ಶನಿವಾರ ಆರಂಭವಾಯಿತು.

ಕಾಂಗ್ರೆಸ್ ಅಧಿನಾಯಕಿ ಹಾಗೂ ಹಾಂಗಾಮಿ ಅಧ್ಯಕ್ಷರಾದ ಸೋನಿಯಾಗಾಂಧಿ ಅವರ ನೇತೃತ್ವದಲ್ಲಿ ಈ ಸಭೆ ಆರಂಭಗೊಂಡಿದೆ. ಕಾಂಗ್ರೆಸ್ ಪಕ್ಷದ ಸುಮಾರು 52 ಪ್ರಮುಖ ನಾಯಕರು ಈ ಸಭೆಯಲ್ಲಿ ಪಾಲ್ಗೊಂಡಿದ್ದು, ಈ ಪೈಕಿ ದಿಗ್ವಿಜಯ್ ಸಿಂಗ್ ಮತ್ತು ಮನಮೋಹನ್ ಸಿಂಗ್ ಸೇರಿದಂತೆ ಐದು ಹಿರಿಯ ನಾಯಕರು ಕಾರಣಾಂತರಗಳಿಂದ ಗೈರಾಗಿದ್ದಾರೆ.

ಭೌತಿಕವಾಗಿ ನಡೆಯುತ್ತಿರುವ ಈ ಸಭೆಯಲ್ಲಿ ಪಕ್ಷದ ಸಾಂಸ್ಥಿಕ ಚುನಾವಣೆ, ಮುಂಬರುವ ವಿಧಾನಸಭಾ ಚುನಾವಣೆಗಳು ಮತ್ತು ಪ್ರಸ್ತುತ ರಾಜಕೀಯ ಪರಿಸ್ಥಿತಿಯಂತಹ ಪ್ರಮುಖ ವಿಷಯಗಳ ಕುರಿತು ಕಾಂಗ್ರೆಸ್‌ನ ಉನ್ನತ ಮಟ್ಟದ ನಾಯಕರು ಚರ್ಚೆ ನಡೆಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಮುಂದಿನ ಭವಿಷ್ಯ ಮತ್ತು ಮುಂದಿನ ರಾಜಕೀಯ ತಂತ್ರಗಾರಿಕೆ ಹಿನ್ನಲೆಯಲ್ಲಿ ಈ ಸಭೆ ಅತ್ಯಂತ ನಿರ್ಣಾಯಕವಾಗಿದೆ ಎನ್ನಲಾಗಿದೆ.

ಕಾಂಗ್ರೆಸ್‌ಗೆ ನಾನೇ ಪೂರ್ಣಾವಧಿಯ, ಸಕ್ರಿಯ ಅಧ್ಯಕ್ಷೆ
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸೋನಿಯಾಗಾಂಧಿ, ಕಾಂಗ್ರೆಸ್‌ ಪಕ್ಷಕ್ಕೆ ನಾನೇ ಪೂರ್ಣಾವಧಿಯ, ಸಕ್ರಿಯ ಅಧ್ಯಕ್ಷೆ.. ಅದು ಕೂಡ ನೀವು ಒಪ್ಪಿದರೆ ಮಾತ್ರ. ಇಡೀ ಸಂಘಟನೆ ಕಾಂಗ್ರೆಸ್‌ನ ಪುನರುಜ್ಜೀವನವನ್ನು ಬಯಸುತ್ತದೆ. ಇದಕ್ಕೆ,  ಒಗ್ಗಟ್ಟು, ಪಕ್ಷದ ಹಿತವೇ ಅಂತಿಮ ಎಂಬ ಮನೋಭವಾ ಅಗತ್ಯ. ಎಲ್ಲಕ್ಕಿಂತ ಸ್ವಯಂ ನಿಯಂತ್ರಣ ಮತ್ತು ಶಿಸ್ತಿನ ಅಗತ್ಯವಿದೆ ಎಂದು ಹೇಳಿದರು.

ನಾನು ಯಾವಾಗಲೂ ಪ್ರಾಮಾಣಿಕತೆಯನ್ನು ಮೆಚ್ಚಿದ್ದೇನೆ. ಮಾಧ್ಯಮದ ಮೂಲಕ ನನ್ನೊಂದಿಗೆ ಮಾತನಾಡುವ ಅಗತ್ಯವಿಲ್ಲ. ಆದ್ದರಿಂದ ನಾವೆಲ್ಲರೂ ಮುಕ್ತ ಮತ್ತು ಪ್ರಾಮಾಣಿಕ ಚರ್ಚೆ ನಡೆಸೋಣ. ಇಲ್ಲಿ ಕೈಗೊಂಡ ನಿರ್ಣಯ ಮತ್ತು ಸಿಡಬ್ಲ್ಯೂಸಿಯ ಸಾಮೂಹಿಕ ನಿರ್ಧಾರವನ್ನೇ ಈ ಕೊಠಡಿಯ ನಾಲ್ಕು ಗೋಡೆಗಳ ಹೊರಗೆ ಸಂವಹನ ಮಾಡಬೇಕು ಎಂದು ನೇರವಾಗಿ ಸದಸ್ಯರಿಗೆ ಸೋನಿಯಾ ಹೇಳಿದರು.

‘ದೇಶದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಸೋನಿಯಾ ಅವರು ಸಭೆಯಲ್ಲಿ ಕಳವಳ ವ್ಯಕ್ತಪಡಿಸಿದರು. ಆರ್ಥಿಕ ಪರಿಸ್ಥಿತಿ ಉತ್ತಮವಾಗಿದೆ ಎಂಬ ಸರ್ಕಾರದ ಪ್ರಚಾರದ ಹೊರತಾಗಿಯೂ ದೇಶದ ಆರ್ಥ ವ್ಯವಸ್ಥೆಯು ಕಳವಳಕಾರಿಯಾಗಿದೆ. ರಾಷ್ಟ್ರದ ಆಸ್ತಿ ಮಾರಾಟವೇ, ದೇಶದ ಆರ್ಥ ವ್ಯವಸ್ಥೆಯನ್ನು ಸರಿ ದಾರಿಗೆ ತರಲು ಇರುವ ಮಾರ್ಗವೆಂದು ಸರ್ಕಾರ ಭಾವಿಸಿಕೊಂಡಂತೆ ಕಾಣುತ್ತಿದೆ ಎಂದು ಸೋನಿಯಾ ಬೇಸರ ವ್ಯಕ್ತಪಡಿಸಿದ್ದಾರೆ.

ಲಖಿಂಪುರ್-ಖೇರಿ ಬಿಜೆಪಿಯ ಮನಸ್ಥಿತಿಗಿ ಹಿಡಿದ ಕನ್ನಡಿಯಾಗಿದೆ
ಇದೇ ವೇಳೆ ಲಖಿಂಪುರ ಖೇರಿ ಹಿಂಸಾಚಾರದ ವಿಚಾರದಲ್ಲಿ ಸೋನಿಯಾ ಅವರು ಆಡಳಿತಾರೂಢ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು. ಲಖಿಂಪುರ್-ಖೇರಿ ಬಿಜೆಪಿಯ ಮನಸ್ಥಿತಿಗಿ ಹಿಡಿದ ಕನ್ನಡಿಯಾಗಿದ್ದು, ಈ ಆಘಾತಕಾರಿ ಘಟನೆಗಳು ಬಿಜೆಪಿಯ ಮನಸ್ಥಿತಿಯನ್ನು ಬಹಿರಂಗಪಡಿಸಿದೆ. ರೈತರ ಚಳವಳಿಯನ್ನು ಅದು ಹೇಗೆ ಗ್ರಹಿಸುತ್ತದೆ ಎಂಬುದನ್ನು ಸಾಬೀತುಪಡಿಸಿದೆ ಎಂದು ಹೇಳಿದರು.

No Comments

Leave A Comment