Log In
BREAKING NEWS >
ಮಾರ್ಚ್ 22ರ೦ದು ಚ೦ದ್ರಾಮಾನ ಯುಗಾದಿ ,ಏಪ್ರಿಲ್ 15ರ೦ದು ಸೌರಮಾನ ಯುಗಾದಿ ಹಬ್ಬವು ನಡೆಯಲಿದೆ.ಹಲವಾರು ಗಣ್ಯರು ಯುಗಾದಿ ಹಬ್ಬದ ಶುಭಾಶಯವನ್ನು ಕೋರಿರುತ್ತಾರೆ.....

ಹೆಂಡತಿಗೆ ಹಾವಿನಿಂದ ಕಚ್ಚಿಸಿ ಕೊಲೆ ಪ್ರಕರಣ; ಅಪರಾಧಿ​ಗೆ ಜೀವಾವಧಿ ಶಿಕ್ಷೆ ಪ್ರಕಟ

ತಿರುವನಂತಪುರಂ: ಹಾವಿನಿಂದ ಕಚ್ಚಿಸಿ ಹೆಂಡತಿಯನ್ನು ಕೊಲೆ ಮಾಡಿದ್ದ ಕೇರಳದ ಪ್ರಕರಣ ಭಾರೀ ಕುತೂಹಲ ಕೆರಳಿಸಿತ್ತು. ಕೊಲ್ಲಂನ ಉತ್ರಾ ಹತ್ಯೆ ಪ್ರಕರಣದ ತೀರ್ಪನ್ನು ಇಂದಿಗೆ ಕಾಯ್ದಿರಿಸಲಾಗಿತ್ತು. ಆ ತೀರ್ಪು ಇದೀಗ ಹೊರಬಿದ್ದಿದ್ದು, ಹಾವಿನಿಂದ ಕಚ್ಚಿಸಿ ಹೆಂಡತಿಯನ್ನು ಕೊಂದು, ಅದೊಂದು ಆಕಸ್ಮಿಕ ಸಾವೆಂದು ಎಲ್ಲರನ್ನೂ ನಂಬಿಸಿದ್ದ ಆರೋಪಿ ಸೂರಜ್ ಕುಮಾರ್​ಗೆ ಎರಡು ಜೀವಾವಧಿ ಶಿಕ್ಷೆಯನ್ನು ಘೋಷಿಸಲಾಗಿದೆ. ಹಾಗೇ 5 ಲಕ್ಷ ರೂ. ದಂಡವನ್ನೂ ವಿಧಿಸಲಾಗಿದೆ. ಕೇರಳದ ಕೊಲ್ಲಂನ ಅಡಿಷನಲ್ ಸೆಷನ್ಸ್ ಕೋರ್ಟ್ ಇಂದು ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. 

ವಿಷದ ಹಾವಿನಿಂದ ಕಚ್ಚಿಸಿ ಪತ್ನಿ ಉತ್ರಾಳನ್ನು ಕೊಂದಿದ್ದ ಗಂಡ ಸೂರಜ್ ಅಪರಾಧಿ ಎಂದು ಸಾಬೀತಾಗಿದ್ದು ಕೊಲ್ಲಂ ಅಡಿಷನಲ್ ಸೆಷನ್ಸ್ ಕೋರ್ಟ್ IPC ಸೆಕ್ಷನ್ 302, 307, 328 ಮತ್ತು 201 ಅಡಿಯಲ್ಲಿ ದೋಷಿ ಎಂದು ಹೇಳಿತ್ತು. ಆ ತೀರ್ಪಿನ ಶಿಕ್ಷೆಯ ಪ್ರಮಾಣವನ್ನು ಇಂದು ಪ್ರಕಟಿಸಲಾಗಿದ್ದು, ಎರಡು ಜೀವಾವಧಿ ಶಿಕ್ಷೆ ಹಾಗೂ 5 ಲಕ್ಷ ರೂ. ದಂಡ ವಿಧಿಸಲಾಗಿದೆ.

ಏನಿದು ಘಟನೆ?:
2020ರ ಮೇ 7ರಂದು 25 ವರ್ಷದ ಉತ್ರಾ ಎಂಬ ಗೃಹಿಣಿ ವಿಷ ಸರ್ಪ ಕಚ್ಚಿ ಸಾವನ್ನಪ್ಪಿದ್ದರು. ಆರಂಭದಲ್ಲಿ ಅದೊಂದು ಆಕಸ್ಮಿಕ ಸಾವು ಎಂದು ಎಲ್ಲರೂ ನಂಬಿದ್ದರು. ಆದರೆ, ಆಕೆಯ ಕುಟುಂಬಸ್ಥರು ಇದರ ಹಿಂದೆ ಆಕೆಯ ಗಂಡನ ಕೈವಾಡವಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದರು. ಈ ಕುರಿತು ಪೊಲೀಸ್ ಠಾಣೆಯಲ್ಲಿ ಉತ್ರಾಳ ಗಂಡ ಸೂರಜ್ ವಿರುದ್ಧ ಕೇಸ್ ಕೂಡ ದಾಖಲಾಗಿತ್ತು.

ಸರ್ಕಾರಿ ಕೆಲಸದಲ್ಲಿದ್ದ ಸೂರಜ್ ಕುಮಾರ್ ಸಾಕಷ್ಟು ಜಾಣತನದಿಂದ ತನ್ನ ಹೆಂಡತಿ ಉತ್ರಾಳನ್ನು ಕೊಲೆ ಮಾಡಿದ್ದ. ವಿಕಲಚೇತನಳಾಗಿದ್ದ ಉತ್ರಾಳನ್ನು ಹಣಕ್ಕಾಗಿ ಮದುವೆಯಾಗಿದ್ದ ಆತ ವಿಷ ಸರ್ಪದಿಂದ ಹೆಂಡತಿಯನ್ನು ಎರಡು ಬಾರಿ ಕಚ್ಚಿಸಿ ಕೊಲೆ ಮಾಡಿದ್ದ. ಆದರೆ, ಪೊಲೀಸರು ಆ ಸಾವಿನ ರಹಸ್ಯವನ್ನು ಭೇದಿಸಿದ್ದರು. ಪೊಲೀಸರ ಪ್ರಯತ್ನಕ್ಕೆ ಭಾರೀ ಮೆಚ್ಚುಗೆಯೂ ವ್ಯಕ್ತವಾಗಿತ್ತು. ಪೊಲೀಸರು ವಿಚಾರಣೆ ನಡೆಸಿದಾಗ ಹೆಂಡತಿಯನ್ನು ಕೊಲೆ ಮಾಡಿದ್ದಾಗಿ ಸೂರಜ್ ಒಪ್ಪಿಕೊಂಡಿದ್ದ. 10 ಸಾವಿರ ರೂ. ಕೊಟ್ಟು ಎರಡು ಹಾವು ತಂದಿದ್ದಾಗಿಯೂ ಹೇಳಿದ್ದ. ಮೇ 2ರಂದೇ ಕೊಲೆ ಮಾಡಲು ಯತ್ನ ಮಾಡಿದ್ದ ಆದರೆ ಹಾವು ಕೈ ಕೊಟ್ಟಿದ್ದರಿಂದ ಮೇ 7ರಂದು ಕೊಲ್ಲಲಾಗಿತ್ತು.

ಹಾವಿನಿಂದ ಕಚ್ಚಿಸಿ ಸಾಯಿಸಿದರೆ ಯಾರಿಗೂ ಅನುಮಾನ ಬರುವುದಿಲ್ಲ ಎಂದು ಸೂರಜ್ ಭಾವಿಸಿದ್ದ. ಆದರೆ, ಈ ಪ್ರಕರಣದ ಬೆನ್ನು ಹತ್ತಿದ್ದ ಪೊಲೀಸರು ಮಹಿಳೆಯನ್ನು ಹೋಲುವ ಡಮ್ಮಿ ಗೊಂಬೆಯೊಂದನ್ನು ಬಳಸಿ ಅದಕ್ಕೆ ಹಾವಿನಿಂದ ಕಚ್ಚಿಸಿದ್ದರು. ಹಾವು ಮಹಿಳೆಯ ಗೊಂಬೆಗೆ ಕಚ್ಚಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ? ಯಾವ ಕಾರಣಕ್ಕೆ ಕಚ್ಚುತ್ತದೆ? ಹಾವಿನ ವರ್ತನೆ ಹೇಗಿರುತ್ತದೆ? ಒಂದು ವೇಳೆ ಕಚ್ಚಿದರೆ ವಿಷ ಏರಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬ ಅಂಶಗಳನ್ನು ಪೊಲೀಸರು ಸಂಗ್ರಹಿಸಿದ್ದರು.

ಬಳಿಕ ಪೊಲೀಸರಿಗೆ ಸೂರಜ್ ಮೇಲೆ ಅನುಮಾನ ಬಲವಾಗಿತ್ತು. ವಿಚಾರಣೆ ವೇಳೆ ಸೂರಜ್ ತನ್ನ ತಪ್ಪು ಒಪ್ಪಿಕೊಂಡಿದ್ದ. ಹಣಕ್ಕಾಗಿ ಯುವತಿಯನ್ನು ಮದುವೆಯಾಗಿದ್ದೆ ಎಂದು ಹೇಳಿದ್ದ ಆತ ತಾನೇ ಹಾವನ್ನು ತಂದು ಆಕೆಯನ್ನು ಕೊಲೆ ಮಾಡಿದ್ದಾಗಿ ಹೇಳಿದ್ದ. ಇಡೀ ದೇಶಾದ್ಯಂತ ಈ ಕೊಲೆ ಪ್ರಕರಣ ಸುದ್ದಿಯಾಗಿತ್ತು.

No Comments

Leave A Comment