2-18 ವರ್ಷದ ಮಕ್ಕಳಿಗಾಗಿ ಕೊರೋನಾ ಲಸಿಕೆ: ಕೋವ್ಯಾಕ್ಸಿನ್ ನೀಡಲು ಡಿಸಿಜಿಐಗೆ ತಜ್ಞರ ಸಮಿತಿ ಶಿಫಾರಸ್ಸು
ನವದೆಹಲಿ: ಕೊರೋನಾ ಸಾಂಕ್ರಾಮಿಕ ಆರಂಭವಾದಾಗಿನಿಂದ ಕಾಡುತ್ತಿದ್ದ ಬಹುದೊಡ್ಡ ಪ್ರಶ್ನೆಗೆ ಕೊನೆಗೂ ಇಂದು ಉತ್ತರ ಲಭಿಸಿದ್ದು, ಮಕ್ಕಳಿಗೆ ನೀಡುವ ಕೋವಿಡ್ ಲಸಿಕೆ ಕುರಿತು ವಿಷಯ ತಜ್ಞರ ಸಮಿತಿ (ಎಸ್ಇಸಿ) ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾಗೆ ನೂತನ ಶಿಫಾರಸ್ಸು ಮಾಡಿದೆ.
ಹೌದು.. ಕೊರೋನಾ ಸಾಂಕ್ರಾಮಿಕ ಆರಂಭವಾದಾಗಿನಿಂದ ಇಲ್ಲಿಯವರೆಗೂ ಮಕ್ಕಳಿಗೆ ಕೊರೋನಾ ಲಸಿಕೆ ಬಂದಿರಲಿಲ್ಲ. ಇದು ಬಹುತೇಕ ಎಲ್ಲ ಪೋಷಕರ ತಲೆನೋವಿಗೆ ಕಾರಣವಾಗಿತ್ತು. ಈ ನಿಟ್ಟಿನಲ್ಲಿ ಬಹುತೇಕ ಎಲ್ಲ ಔಷಧ ತಯಾರಿಕಾ ಸಂಸ್ಥೆಗಳು ಹಾಗೂ ಸ್ವತಃ ಕೇಂದ್ರ ಸರ್ಕಾರ ಸಾಕಷ್ಟು ತಲೆಕೆಡಿಸಿಕೊಂಡಿತ್ತು. ಅಲ್ಲದೆ ಮಕ್ಕಳ ಲಸಿಕೆಗಾಗಿ ಸತತ ಅಧ್ಯಯನ ನಡೆಸಿತ್ತು. ಇದೀಗ ಕೊನೆಗೂ ಈ ಸತತ ಪ್ರಯತ್ನಕ್ಕೆ ಫಲ ಲಭಿಸುವ ಕಾಲ ಸನ್ನಿಹಿತವಾಗಿದ್ದು, 2-18 ವರ್ಷದೊಳಗಿನ ಮಕ್ಕಳಿಗೆ ತುರ್ತು ಬಳಕೆಗಾಗಿ ಕೋವ್ಯಾಕ್ಸಿನ್ ಕೋವಿಡ್ ಲಸಿಕೆ ನೀಡುವಂತೆ ಎಸ್ ಇಸಿ ಸಂಸ್ಥೆ ಡಿಸಿಜಿಐಗೆ ಶಿಫಾರಸ್ಸು ಮಾಡಿದೆ.
ಭಾರತ್ ಬಯೋಟೆಕ್ ಸಂಸ್ಥೆಯ ಕೋವ್ಯಾಕ್ಸಿನ್ ಲಸಿಕೆಯನ್ನು ಮಕ್ಕಳಿಗೆ ನೀಡುವ ಕುರಿತು ವಿಷಯ ತಜ್ಞರ ಸಮಿತಿ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾಗೆ ಶಿಫಾರಸ್ಸು ಮಾಡಿದೆ.
ಡಿಸಿಜಿಐ ಅಧಿಕೃತ ಮಾಹಿತಿಯ ನಿರೀಕ್ಷೆ
ಅತ್ತ ತಜ್ಞರ ಸಮಿತಿಯ ಶಿಫಾರಸ್ಸಿಗೆ ಮನ್ನಣೆ ನೀಡಿರುವ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ 2-18 ವರ್ಷದೊಳಗಿನ ಮಕ್ಕಳಿಗೆ ಭಾರತ್ ಬಯೋಟೆಕ್ ಸಂಸ್ಥೆಯ ಕೋವ್ಯಾಕ್ಸಿನ್ ಕೋವಿಡ್ ಲಸಿಕೆ ನೀಡಲು ಅನುಮೋದನೆ ನೀಡಿದೆ ಎನ್ನಲಾಗಿದೆಯಾದರೂ ಈ ಕುರಿತು ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.
ಈ ಕುರಿತಂತೆ ವಿಷಯ ತಜ್ಞರ ಸಮಿತಿಯ ಸಭೆಯಲ್ಲಿ ಇಂದು ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದು, ಮಕ್ಕಳಿಗೂ ಕೊರೋನಾ ಲಸಿಕೆ ನೀಡಲು ಗ್ರೀನ್ ಸಿಗ್ನಲ್ ನೀಡುವ ಸಾಧ್ಯತೆ ಇದೆ.