Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ತೆಂಕುತಿಟ್ಟು ಯಕ್ಷಗಾನ ರಂಗದ ‘ಗಾನಗಂಧರ್ವ’ ಪದ್ಯಾಣ ಗಣಪತಿ ಭಟ್ ಇನ್ನಿಲ್ಲ

ಮಂಗಳೂರು: ತೆಂಕುತಿಟ್ಟು ಯಕ್ಷಗಾನರಂಗದ ಅಗ್ರಮಾನ್ಯ ಭಾಗವತರಾಗಿದ್ದ ಪದ್ಯಾಣ ಗಣಪತಿ ಭಟ್ ಮಂಗಳವಾರ ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 66 ವರ್ಷ ವಯಸ್ಸಾಗಿತ್ತು.

ಕೆಲ ತಿಂಗಳ ಹಿಂದೆ ಕೋವಿಡ್ ಸೋಂಕಿಗೆ ತುತ್ತಾಗಿದ್ದ ಗಣಪತಿ ಭಟ್ಟರು ಅದರಿಂದ ಗುಣಮುಖರಾಗಿ ಮನೆಗೆ ವಾಪಸ್ಸಾಗಿದ್ದರು. ಹೃದಯ ಸಂಬಂಧಿ ಕಾಯಿಲೆಯಿಂದಲೂ ಬಳಲುತ್ತಿದ್ದ ಅವರು ಇಂದು ಬೆಳಗ್ಗೆ 7.30ರ ಸುಮಾರಿಗೆ ಹೃದಯಾಘಾತಕ್ಕೆ ತುತ್ತಾಗಿ ಅಸುನೀಗಿದ್ದಾರೆ.

5 ದಶಕಗಳ ಕಾಲ ತೆಂಕುತಿಟ್ಟು ಯಕ್ಷರಂಗದಲ್ಲಿ ಭಾಗವತಿಕೆ ಮಾಡಿ ಮೆರೆದಿದ್ದ ಗಣಪತಿ ಭಟ್ಟರು ಗುರುಮುಖೇನ ಕಲಿತ ಯಕ್ಷಗಾನ ವಿದ್ಯೆಯನ್ನು ಗಟ್ಟಿಯಾಗಿ ಆಧರಿಸಿ ಯಕ್ಷಗಾನದ ಪರಂಪರೆಯನ್ನು ಒಂದು ತಲೆಮಾರಿನುದ್ದಕ್ಕೂ ಸಾಕಿ ಬೆಳೆಸಿ ಮುಂದುವರಿಸಿದ ಕೀರ್ತಿ ಅವರದ್ದು. ಭಾಗವತಿಕೆಯಲ್ಲಿ ಪದ್ಯಾಣ ಶೈಲಿಯನ್ನೇ ಹುಟ್ಟುಹಾಕಿದ್ದರು.

ತೆಂಕುತಿಟ್ಟಿನ ಜನಪ್ರಿಯ ಮೇಳಗಳಾದ ಹೊಸನಗರ ಮೇಳ, ಎಡನೀರು ಮೇಳ, ಹನುಮಗಿರಿ ಮೇಳಗಳಲ್ಲಿ ಪ್ರಧಾನ ಭಾಗವತರಾಗಿ ಸೇವೆ ಸಲ್ಲಿಸುತ್ತಿದ್ದರು. ಇವರ ಸೋದರರು ಸೇರಿದಂತೆ ಪದ್ಯಾಣ ಕುಟುಂಬವೇ ತೆಂಕುತಿಟ್ಟಿನ ಯಕ್ಷಗಾನಕ್ಕೆ ಸಾಕಷ್ಟು ಸೇವೆ ನೀಡಿದೆ.

1955ರ ಜನವರಿ 21ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಕಲ್ಮಡ್ಕದ ಸಮೀಪ ಗೋಳ್ತಜೆ ಎಂಬಲ್ಲಿ ತಿರುಮಲೇಶ್ವರ ಭಟ್ ಮತ್ತು ಸಾವಿತ್ರಿ ಅಮ್ಮ ದಂಪತಿಯ ಮಗನಾಗಿ ಗಣಪತಿ ಭಟ್ಟರು ಜನಿಸಿದ್ದ ಗಣಪತಿ ಭಟ್ಟರು ಮೂಲತಃ ಬಂಟ್ವಾಳ ತಾಲೂಕು ಕರೋಪಾಡಿ ಗ್ರಾಮದ ಪದ್ಯಾಣ ಕುಟಂಬದವರು. 16ನೇ ವಯಸ್ಸಿನಲ್ಲಿ ಗಣಪತಿ ಭಟ್ಟರು ಚೌಡೇಶ್ವರಿ ಮೇಳಕ್ಕೆ ಸಂಗೀತಗಾರರಾಗಿ ಸೇರುವ ಮೂಲಕ ತಮ್ಮ ಪದಯಾನ ಆರಂಭಿಸಿ ಅಲ್ಲಿಂದ ನಂತರ ಹಿಂತಿರುಗಿ ನೋಡಲೇ ಇಲ್ಲ. ಭಾಗವತಿಯಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದರು.

ಮೃತರು ಪತ್ನಿ ಶೀಲಾಶಂಕರಿ, ಮಕ್ಕಳಾದ ಸ್ವಸ್ತಿಕ್, ಕಾರ್ತಿಕ್, ಬಂಧು-ಮಿತ್ರರು ಹಾಗೂ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನುಅಗಲಿದ್ದಾರೆ.

No Comments

Leave A Comment