ಭಾರತ ಮನಸ್ಸು ಮಾಡಿದರೆ ಪಾಕ್ ಕ್ರಿಕೆಟ್ ಮಂಡಳಿ ಬೀದಿಪಾಲು: ಪಿಸಿಬಿ ಮುಖ್ಯಸ್ಥ ರಮೀಜ್ ರಾಜಾ
ಕರಾಚಿ: ಭಾರತ ಮನಸ್ಸು ಮಾಡಿದರೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) “ಬೀದಿಪಾಲಾಗಬಹುದು”. ಏಕೆಂದರೆ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಗೆ ಶೇಕಡಾ 90 ರಷ್ಟು ಧನಸಹಾಯ ಭಾರತದಿಂದ ಬರುತ್ತದೆ. ಇದರ್ಥ ಇಲ್ಲಿ ಕ್ರೀಡೆಯನ್ನು “ಭಾರತದ ವ್ಯಾಪಾರ ಸಂಸ್ಥೆಗಳು” ನಡೆಸುತ್ತಿವೆ ಎಂದು ಪಿಸಿಬಿ ಮುಖ್ಯಸ್ಥ ರಮೀಜ್ ರಾಜಾ ಅವರು ಹೇಳಿದ್ದಾರೆ.
ಇಸ್ಲಾಮಾಬಾದ್‌ನಲ್ಲಿ ಗುರುವಾರ ಅಂತರ ಪ್ರಾಂತೀಯ ವ್ಯವಹಾರಗಳ ಸೆನೆಟ್ ಸ್ಥಾಯಿ ಸಮಿತಿಯ ಮುಂದೆ ಹಾಜರಾದ ರಮೀಜ್, ಐಸಿಸಿಯಿಂದ ಹಣಕಾಸಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಮತ್ತು ಸ್ಥಳೀಯ ಮಾರುಕಟ್ಟೆಯನ್ನು ಟ್ಯಾಪ್ ಮಾಡಲು ಪಿಸಿಬಿಗೆ ಇದು ಸರಿಯಾದ ಸಮಯ ಎಂದಿದ್ದಾರೆ.
ಭಾರತದಿಂದಲೇ ಐಸಿಸಿಗೆ ಶೇಕಡ 90 ರಷ್ಟು ಧನಸಹಾಯವಾಗುತ್ತಿದೆ. ಈ ಹಣದಿಂದಲೇ ಪಾಕಿಸ್ತಾನದಲ್ಲಿ ನಡೆಯುವ ಟೂರ್ನಿಗಳಿಗೆ ಐಸಿಸಿ ಹಣ ನೀಡುತ್ತಿದೆ ರಮೀಜ್ ರಾಜಾ ಅವರು ಹೇಳಿದ್ದಾರೆ.
ಐಸಿಸಿ ನೀಡುವ ಹಣದಿಂದಲೇ ಪಾಕಿಸ್ತಾನದಲ್ಲಿ ಕ್ರಿಕೆಟ್ ಟೂರ್ನಿಗಳು ನಡೆಯುತ್ತಿವೆ. ಪಾಕಿಸ್ತಾನದಲ್ಲಿ ನಡೆಯುವ ಕ್ರಿಕೆಟ್ ಟೂರ್ನಿಗಳಿಗೆ ಐಸಿಸಿ ಶೇ. 50 ರಷ್ಟು ಧನಸಹಾಯ ಮಾಡುತ್ತಿದೆ. ಒಂದು ವೇಳೆ ಭಾರತದ ಪ್ರಧಾನಿ, ನಾವು ಪಾಕಿಸ್ತಾನಕ್ಕೆ ಫಂಡಿಂಗ್ ಮಾಡುವುದಿಲ್ಲವೆಂದರೆ ಪಾಕ್ ಕ್ರಿಕೆಟ್ ಮಂಡಳಿ ಮುಚ್ಚಿ ಹೋಗಬಹುದು. ಹೀಗಾಗಿ ನಾವು ಆತ್ಮನಿರ್ಭರತೆಯನ್ನು ಸಾಧಿಸಬೇಕು ಎಂದು ರಮೀಜ್ ರಾಜಾ ಹೇಳಿದ್ದಾರೆ.