ಬೆಳ್ಳಂಬೆಳಗ್ಗೆ ನಗರದಲ್ಲಿ ಭ್ರಷ್ಟರ ಬೇಟೆ: ಬೆಂಗಳೂರು ಸೇರಿ 50ಕ್ಕೂ ಹೆಚ್ಚು ಕಡೆ ಐಟಿ ಅಧಿಕಾರಿಗಳ ತಪಾಸಣೆ
ಬೆಂಗಳೂರು: ಬೆಳ್ಳಂಬೆಳಗ್ಗೆಯೇ ಆದಾಯ ಮತ್ತು ತೆರಿಗೆ ಇಲಾಖೆ ಅಧಿಕಾರಿಗಳು ಭ್ರಷ್ಟರ ಬೇಟೆಗೆ ಇಳಿದಿದ್ದು, ಬೆಂಗಳೂರು ನಗರ ಸೇರಿ 50ಕ್ಕೂ ಹೆಚ್ಚು ಕಡೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆಂದು ತಿಳಿದುಬಂದಿದೆ.
ನಗರದ ಪ್ರಮುಖ ಉದ್ಯಮಿಗಳ ಮನೆ, ಉದ್ಯಮಿಗಳ ಕಂಪನಿ, ಚಾರ್ಟರ್ಡ್ ಅಕೌಂಟೆಂಟ್ ಕಚೇರಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ತಂಡೋಪಾದಿಯಲ್ಲಿ ದಾಳಿಗಳನ್ನು ನಡೆಸಿದ್ದಾರೆಂದು ವರದಿಗಳು ತಿಳಿಸಿವೆ.
ಬೆಂಗಳೂರು & ಗೋವಾ ವಲಯ 300ಕ್ಕೂ ಹೆಚ್ಚು ಐಟಿ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು, ದಾಖಲಾತಿಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಮೂಲಗಳ ಪ್ರಕಾರ ಕರ್ನಾಟಕ ನೀರಾವರಿ ಇಲಾಖೆ ಕಾಂಟ್ರ್ಯಾಕ್ಟರ್ಸ್ ಮನೆ ಮೇಲೂ ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.