Log In
BREAKING NEWS >
ಉಡುಪಿ: ಇಂದ್ರಾಳಿ ರೈಲ್ವೆ ಬ್ರಿಡ್ಜ್ ಬಳಿ ಕಾಂಕ್ರೀಟಿಕರಣ ಹಿನ್ನಲೆ : 45 ದಿನ ಘನ ವಾಹನ ಸಂಚಾರಕ್ಕೆ ನಿಷೇಧ- ಡಿಸಿ ಆದೇಶ...

ಮಧ್ಯರಾತ್ರಿ ಎಮ್ಮೆಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ದುಷ್ಕರ್ಮಿಗಳು

ದಾವಣಗೆರೆ : ಎರಡು ಎಮ್ಮೆಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ದಾವಣಗೆರೆ ತಾಲೂಕಿನ ಮಾಯಕೊಂಡ ಬಳಿಯ ಹುಚ್ಚವನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಪ್ರಾಥಮಿಕ ಶಾಲೆಯ ಶಿಕ್ಷಕ ಹನಮಂತಪ್ಪ ಎಂಬುವವರಿಗೆ ಸೇರಿದ ಎರಡು ಎಮ್ಮೆಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಬೆಂಕಿ ತಾಪಕ್ಕೆ ಎಮ್ಮೆಗಳ ಕಿರುಚಾಟ ಕೇಳಿ ಜನ ಓಡಿ ಬಂದಿದ್ದಾರೆ.

ಅಷ್ಟರಲ್ಲಿಯೇ ದುಷ್ಟರು ಪರಾರಿಯಾಗಿದ್ದಾರೆ. ದಿನಕ್ಕೆ ಒಂದು ಎಮ್ಮೆ 16 ಲೀಟರ್ ಹಾಲು ಕೊಡುತ್ತಿತ್ತು. ಬೆಂಕಿಗೆ ಸುಟ್ಟು ಒಂದು ಎಮ್ಮೆ ಸಾವನ್ನಪ್ಪಿದ್ದರೇ, ಇನ್ನೊಂದು ಎಮ್ಮೆ ತೀವ್ರ ಸುಟ್ಟ ಗಾಯದಿಂದ ನರಳುತ್ತಿದೆ.

ಹನಮಂತಪ್ಪ ತಲಾ 85 ಸಾವಿರ ಕೊಟ್ಟು ಈ ಎಮ್ಮೆಗಳನ್ನು ಖರೀದಿ ಮಾಡಿದ್ದರು. ಈಗ ಮಾರುಕಟ್ಟೆಯಲ್ಲಿ ಮುರ್ರಾ ಜಾತಿಯ ಈ ಎಮ್ಮೆಗಳ ಬೆಲೆ ತಲಾ ಒಂದು ಲಕ್ಷ ರೂಪಾಯಿ ಬೆಲೆ ಇದೆ. ಶಿಕ್ಷಕ ಹನಮಂತಪ್ಪ ಅಕ್ಕರೆಯಿಂದ ಈ ಎಮ್ಮೆಗಳನ್ನು ಸಾಕಿದ್ದರು. ದಿನಕ್ಕೆ ಬೆಳಿಗ್ಗೆ ಎಂಟು ಲೀಟರ್ ಸಂಜೆ ಎಂಟು ಲೀಟರ್ ಅಂದರೆ ಒಂದು ಎಮ್ಮೆ ದಿನಕ್ಕೆ 16 ಲೀಟರ್ ಹಾಲು ಕೊಡುತ್ತಿತ್ತು. ಹನಮಂತಪ್ಪನ ಮನೆಯಲ್ಲಿ ನಿತ್ಯ ಎರಡು ಎಮ್ಮೆಗಳಿಂದ 32 ಲೀಟರ್ ಹಾಲು ಸಂಗ್ರಹವಾಗುತ್ತಿತ್ತು. ಹೆಚ್ಚು ಕಡಿಮೆ ದಿನಕ್ಕೆ ಒಂದು ಸಾವಿರ ರೂಪಾಯಿ ಹಾಲು ಮಾರಾಟದಿಂದ ಹನುಮಂತಪ್ಪನ ಕುಟುಂಬ ಲಾಭ ಪಡೆಯುತ್ತಿತ್ತು.

ಇಂತಹ ಅಪರೂಪದ ಎಮ್ಮೆಗಳಿಂದ ಶಿಕ್ಷಕ ಕುಟುಂಬ ಆರ್ಥಿಕವಾಗಿ ಚೆನ್ನಾಗಿತ್ತು. ಆದರೆ ಹನಂತಪ್ಪನಿಗೆ ಆಗದ ಜನರು ಈ ರೀತಿ ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಮೊದಲು ಎಮ್ಮೆಗಳ ಮೇಲೆ ಪೆಟ್ರೋಲ್ ಹಾಕಿದ್ದಾರೆ. ದೂರದಿಂದ ಕಡ್ಡಿ ಗಿರಿ ಓಡಿದ್ದಾರೆ ಎನ್ನಲಾಗಿದೆ. ನಡುರಾತ್ರಿ ಒಂದು ಗಂಟೆ ಆಗಿದ್ದರಿಂದ ಜನರೆಲ್ಲಾ ನಿದ್ರೆಗೆ ಜಾರಿದ್ದರು. ಎಮ್ಮೆಗಳ ಸದ್ದು ಕೇಳಿದ ತಕ್ಷಣವೇ ಜನರು ಎದ್ದು ಹೊರ ಬಂದು ನೋಡಿದಾಗ ಒಂದು ಎಮ್ಮೆ ಸಂಪೂರ್ಣವಾಗಿ ಬೆಂಕಿಯಲ್ಲಿ ಸುಡುತ್ತಿತ್ತು. ಇನ್ನೊಂದು ಎಮ್ಮೆ ಅರಚುತ್ತಿತ್ತು. ಇದನ್ನ ನೋಡಿದ ಸ್ಥಳೀಯರು ನೀರು ಹಾಕಿ ಬೆಂಕಿಯ ತಾಪ ಕಡಿಮೆ ಮಾಡಲು ಓಡಾಡಿದರು. ಅಷ್ಟರಲ್ಲಿ ಒಂದು ಎಮ್ಮೆ ಸಾವನ್ನಪ್ಪಿದೆ. ಇನ್ನೊಂದು ಎಮ್ಮೆ ತೀವ್ರಗಾಯಗೊಂಡಿದೆ ಎನ್ನಲಾಗಿದೆ.

ಈ ಬಗ್ಗೆ ಮಾಯಕೊಂಡ ಪೊಲೀಸ್ ಠಾಣೆಗೆ ಶಿಕ್ಷಕ ಹನಮಂತಪ್ಪ ಅವರು ದೂರು ನೀಡಿದ್ದಾರೆ. ಯಾರೋ ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಿದ್ದಾರೆ. ಹೀಗಾಗಿ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಸೂಕ್ತ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ.

No Comments

Leave A Comment