
ಉಡುಪಿ: ಶಂಖದ ಹುಳುವಿನ ರಂಪಾಟಕ್ಕೆ ಬೇಸತ್ತ ಸ್ಥಳೀಯರು; ರಾತ್ರಿಯಲ್ಲೇ ಓಡಾಡುತ್ತವೆ ಈ ನಿಶಾಚರಿಗಳು
ಉಡುಪಿ: ಜಿಲ್ಲೆಯ ಪರ್ಕಳ ದೇವಿ ನಗರದ ನಿವಾಸಿಗಳು ಶಂಖದ ಹುಳುವಿನ ರಂಪಾಟಕ್ಕೆ ರೋಸಿಹೋಗಿದ್ದಾರೆ. ಇಡೀ ಊರು ತುಂಬಾ ಹುಳುಗಳು ಮುತ್ತಿಗೆ ಹಾಕಿದ್ದು, ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಅಂಗಳ, ಹಿತ್ತಲು, ಮರ, ಗಿಡ, ಬಳ್ಳಿ ಹೂವು ಎಲ್ಲಿ ಕಣ್ಣಾಡಿಸಿದರೂ ಶಂಖದ ಹುಳುಗಳ ರಾಶಿ ಕಂಡುಬರುತ್ತಿದೆ. ಕೆಜಿಗಟ್ಟಲೆ ಹುಳುಗಳನ್ನು ನಾಶಮಾಡಿದರೆ ಮರುದಿನ ಲೋಡುಗಟ್ಟಲೆ ಹುಳು ಮನೆಯಂಗಳದಲ್ಲಿ ಬಂದುಬೀಳುತ್ತಿದ್ದು, ಪರಿಹಾರಕ್ಕಾಗಿ ಗ್ರಾಮಸ್ಥರು ಹಾತೋರೆಯುತ್ತಿದ್ದಾರೆ.
ಹಾಲಿವುಡ್ ಸಿನಿಮಾಗಳಲ್ಲಿ ರಾಶಿ ರಾಶಿ ಹುಳುಗಳು ಊರಿಗೆ ದಾಳಿಯಿಡುವ ಭಯಾನಕ ದೃಶ್ಯಗಳನ್ನು ನೋಡಿದ್ದೇವೆ. ಉಡುಪಿ ಜಿಲ್ಲೆಯ ಪರ್ಕಳದ ದೇವಿ ನಗರದಲ್ಲಿ ಹೆಚ್ಚುಕಮ್ಮಿ ಅದೇ ಪರಿಸ್ಥಿತಿ ಉಂಟಾಗಿದೆ. ಈ ಊರಿನ ಬೀದಿ ಬೀದಿಯಲ್ಲೂ ಶಂಕದ ಹುಳುವಿನ ರಾಶಿ ಕಾಣಸಿಗುತ್ತಿದೆ. ಕಳೆದ ಮೂರು ವರ್ಷಗಳಿಂದ ಮಳೆಗಾಲದಲ್ಲಿ ಹುಳುವಿನ ಬಾಧೆ ವಿಪರೀತವಾಗಿದ್ದರೂ, ಈ ಬಾರಿಯಷ್ಟು ಹುಳುಗಳು ಯಾವತ್ತೂ ದಾಳಿ ಇಟ್ಟಿರಲಿಲ್ಲ ಎಂದು ಸ್ಥಳೀಯರಾದ ಗಣೇಶ್ ರಾಜ್ ಹೇಳಿದ್ದಾರೆ.
ನಿಶಾಚರಿಗಳಾದ ಈ ಹುಳುಗಳು ಹಗಲೆಲ್ಲಾ ಗೋಡೆಗಂಟಿ ಮಲಗಿಬಿಡುತ್ತವೆ. ರಾತ್ರಿಯಾದರೆ ಸಾಕು ಓಡಾಡಲು ಶುರು ಮಾಡುತ್ತವೆ. ಮುದುಡಿ ಮಲಗಿದರೆ ಒಂದಿಂಚು ಅಗಲದ ಈ ಹುಳು. ಎಳೆದಷ್ಟು ಉದ್ದಕ್ಕೆ ಬಿಚ್ಚಿಕೊಳ್ಳುತ್ತದೆ. ಮೈಯೆಲ್ಲಾ ಅಂಟು, ಕೆಟ್ಟವಾಸನೆ ಪ್ರತಿದಿನ ಮನೆ ಸುತ್ತಲೂ ಹುಳುಗಳ ರಾಶಿ ಕಂಡು ಜನ ರೋಸಿ ಹೋಗಿದ್ದಾರೆ. ಮಳೆಗಾಲದ ತೇವಾಂಶಕ್ಕೆ ಮೇಲಕ್ಕೆ ಬರುವ ಹುಳುಗಳು ಉಳಿದ ಕಾಲದಲ್ಲಿ ಭೂಮಿಯಡಿ ಹುದುಗಿರುತ್ತಂತೆ.
ಈ ಶಂಖದ ಹುಳು ಅಥವಾ ಬಸವನ ಹುಳುವನ್ನು ಆಫ್ರಿಕನ್ ಜಯಂಟ್ ಸ್ನೈಲ್ ಎಂದು ಕರೆಯಲಾಗುತ್ತದೆ. ಇದು ಅಡಿಕೆ, ತೆಂಗು ಸೇರಿದಂತೆ ವಿವಿಧ ಗಿಡಗಳಿಗೆ ಹಾನಿಯುಂಟು ಮಾಡುವ ಬಗ್ಗೆ ಸ್ಥಳೀಯರಲ್ಲಿ ಆತಂಕ ಉಂಟಾಗಿತ್ತು. ಮನೆಗಳ ಗೋಡೆ, ತೆಂಗಿನ ಮರ, ಗಿಡಗಳ ಮಧ್ಯೆ, ಮನೆಯ ಆವರಣದ ಗೋಡೆಗಳಲ್ಲಿ ಹುಳಗಳು ಹರಿದಾಡುತ್ತಿವೆ. ಅಲ್ಲದೆ ಮನೆಯ ಒಳಗೂ ಇವುಗಳು ಸಂಚರಿಸುತ್ತಿವೆ.
ಶಂಖದ ಹುಳು ಸಂತತಿ
ಇವು ದ್ವಿಲಿಂಗಗಳಾಗಿದ್ದು, ಸರಿಸುಮಾರು 50-200 ಹಳದಿ ಬಣ್ಣದ ಮೊಟ್ಟೆಗಳನ್ನು ಮಣ್ಣಿನ ಮೇಲ್ಪದರದಲ್ಲಿ ಇಡುತ್ತವೆ. ಈ ಮೊಟ್ಟೆಗಳಿಂದ ಒಂದು ವಾರದೊಳಗೆ ಮರಿ ಹುಳುಗಳು ಹೊರ ಬರುತ್ತವೆ. ಪ್ರೌಢಾವಸ್ಥೆಗೆ ಬರಲು ಒಂದು ವರ್ಷ ಬೇಕಾಗುತ್ತದೆ. ಇದರ ಜೀವಿತಾವಧಿ 3-5 ವರ್ಷಗಳಾಗಿವೆ. ಮಳೆಗಾಲದಲ್ಲಿ ಎಲೆಗಳು, ಕಾಂಡ, ಹಣ್ಣು ಹಾಗೂ ಹೂವುಗಳನ್ನು ತಿಂದು ಹೆಚ್ಚಿನ ಹಾನಿಯುಂಟು ಮಾಡುತ್ತದೆ ಎಂದು ಕೀಟ ತಜ್ಞರು ತಿಳಿಸಿದ್ದಾರೆ.
