Log In
BREAKING NEWS >
```````ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆಮತ್ತು ಅಭಿಮಾನಿಗಳಿಗೆ ಶ್ರೀಗೌರಿ-ಗಣೇಶ ಹಬ್ಬದ ಶುಭಾಶಯಗಳು````````

ಲಖೀಂಪುರ ಹಿಂಸಾಚಾರ ಪ್ರಕರಣ: ಶಾಂತಿಭಂಗ ಆರೋಪ, ಪ್ರಿಯಾಂಕಾ ವಾದ್ರಾ ಸೇರಿ 11 ಮಂದಿ ವಿರುದ್ಧ ಎಫ್ಐಆರ್

ಲಖನೌ: ಲಖೀಂಪುರ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಒಟ್ಟು 11 ಮಂದಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಸ್ವತಃ ಸೀತಾಪುರ ಜಿಲ್ಲೆಯ ಹರ್ಗಾಂವ್ ಪೊಲೀಸ್ ಠಾಣೆಯ ಎಸ್ ಹೆಚ್ ಒ ಮಾಹಿತಿ ನೀಡಿದ್ದು, ಪ್ರಿಯಾಂಕಾ ಗಾಂಧಿ ವಾದ್ರಾ, ದೀಪೇಂದ್ರ ಹೂಡ ಮತ್ತು ಅಜಯ್ ಕುಮಾರ್ ಲಾಲು ಸೇರಿದಂತೆ ಒಟ್ಟು 11 ಮಂದಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.

ಪ್ರಿಯಾಂಕಾ ವಾದ್ರಾ ಬಂಧನ ಸಾಧ್ಯತೆ
ಅಂತೆಯೇ ಕಳೆದ 36 ಗಂಟೆಗಳಿಂದ ಉತ್ತರ ಪ್ರದೇಶದಲ್ಲಿರುವ ಸೀತಾಪುರದಲ್ಲಿ ಗೃಹಬಂಧನದಲ್ಲಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರನ್ನು ಪೊಲೀಸರು ಬಂಧಿಸು ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಪ್ರಿಯಾಂಕಾ ವಾದ್ರಾ ವಿರುದ್ಧ ಸೆಕ್ಷನ್ 144 ಉಲ್ಲಂಘನೆ ಮತ್ತು ಶಾಂತಿ ಭಂಗದ ಆರೋಪ ಹೊರಿಸಲಾಗಿದೆ. ಅಲ್ಲದೆ ಅವರನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸುವ ಸಾಧ್ಯತೆ ಕೂಡ ಇದೆ.

ಇನ್ನು ಪ್ರಿಯಾಂಕಾ ಗಾಂಧಿ ಈ ಹಿಂದೆ ಲಖಿಂಪುರ್ ಹಿಂಸಾಚಾರ (Lakhimpur Kheri Violence) ಬಗ್ಗೆ ಟ್ವಿಟರ್ ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದರು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರಶ್ನೆಗಳನ್ನು ಕೇಳಿದ್ದರು. ಅವರು ಬಯಸಿದರೆ ಪೊಲೀಸರು ನನ್ನನ್ನು ಬಂಧಿಸಬಹುದು. ಆದರೆ ನಾನು ರೈತ ಕುಟುಂಬಗಳನ್ನು ಭೇಟಿಯಾಗದೆ ಹಿಂತಿರುಗುವುದಿಲ್ಲ ಎಂದು ಘೋಷಿಸಿದ್ದರು.

ವಿಡಿಯೋದಲ್ಲೇನಿದೆ?
ಪ್ರಿಯಾಂಕಾ ಗಾಂಧಿ ಟ್ವಿಟರ್ ಮೂಲಕ ಹಂಚಿಕೊಂಡಿದ್ದ ವೀಡಿಯೊದಲ್ಲಿ ನಿಮ್ಮ ಸರ್ಕಾರದಲ್ಲಿ ಸಚಿವರೊಬ್ಬರ ಮಗ ರೈತರನ್ನು ಕಾರಿನ ಮೂಲಕ ಗುದ್ದಿಕೊಂಡು ಹೋಗಿ ಅವರನ್ನು ಹತ್ಯೆ ಮಾಡಿದ್ದಾನೆ. ಈ ವೀಡಿಯೊವನ್ನು ನೋಡಿ.. ಮತ್ತು ಈ ಸಚಿವರನ್ನು ಏಕೆ ವಜಾ ಮಾಡಲಿಲ್ಲ ಮತ್ತು ಅಮಾಯಕ ರೈತರ ಮೇಲೆ ಕಾರು ಹರಿಸಿದ ಆತನನ್ನು ಇನ್ನೂ ಏಕೆ ಬಂಧಿಸಲಾಗಿಲ್ಲ ಎಂದು ಈ ದೇಶಕ್ಕೆ ತಿಳಿಸಿ. ನೀವು ನನ್ನಂತಹ ವಿರೋಧ ಪಕ್ಷದ ನಾಯಕರನ್ನು ಆದೇಶ ಮತ್ತು ಎಫ್ ಐಆರ್ ಇಲ್ಲದೇ ವಶಕ್ಕೆ ತೆಗೆದುಕೊಂಡಿದ್ದೀರಿ. ಆದರೆ ಈ ವ್ಯಕ್ತಿ ಇನ್ನೂ ಏಕೆ ಮುಕ್ತವಾಗಿ ತಿರುಗಾಡುತ್ತಿದ್ದಾನೆಂದು ಅವರು ಕೇಳಿದರು. ಅಲ್ಲದೆ ರೈತರ ಮೇಲೆ ಕಾರು ಹರಿದ ವಿಡಿಯೋವನ್ನು ಪ್ರದರ್ಶಿಸಿದರು.

ಸೀತಾಪುರ ಗೆಸ್ಟ್ ಹೌಸ್ ಬಳಿ ಕಾಂಗ್ರೆಸ್ ಪ್ರತಿಭಟನೆ
ಇನ್ನು ಪ್ರಿಯಾಂಕಾಗಾಂಧಿ ಅವರನ್ನು ಗೃಹ ಬಂಧನದಲ್ಲಿರಿಸಲಾಗಿರುವ ಸೀತಾಪುರ ಗೆಸ್ಟ್ ಹೌಸ್ ನಲ್ಲಿ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರ ಪ್ರತಿಭಟನೆ ಮುಂದುವರೆದಿದೆ. ಪ್ರಿಯಾಂಕಾ ಗಾಂಧಿ ಅವರನ್ನು ಕೂಡಲೇ ಬಿಡುಗಡೆ ಮಾಡಿ ಅಮಾಯಕ ರೈತರ ಪ್ರಾಣ ತೆಗೆದ ತಪ್ಪಿತಸ್ಥರನ್ನು ಬಂಧಿಸುವಂತೆ ಕಾರ್ಯಕರ್ತರು ರಾತ್ರಿಯಿಡೀ ಪ್ರತಿಭಟನೆ ನಡೆಸಿದ್ದಾರೆ.

No Comments

Leave A Comment