ಮೈಸೂರು ದಸರಾ ಉದ್ಘಾಟನೆಗೆ ಎಸ್.ಎಂ. ಕೃಷ್ಣರನ್ನು ಅಧಿಕೃತವಾಗಿ ಆಹ್ವಾನಿಸಿದ ಸಿಎಂ
ಬೆಂಗಳೂರು, ಅಕ್ಟೋಬರ್ 2: ಈ ಬಾರಿಯ ಮೈಸೂರು ದಸರಾ ಉದ್ಘಾಟಕರಾಗಿ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣರನ್ನು ರಾಜ್ಯ ಸರ್ಕಾರ ಆಯ್ಕೆ ಮಾಡಿದೆ. ಇಂದು (ಶನಿವಾರ) ಸಿಎಂ ಬಸವರಾಜ ಬೊಮ್ಮಾಯಿ, ಮೈಸೂರು ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಹಾಗೂ ಮೈಸೂರು ಜಿಲ್ಲಾಡಳಿತದ ವತಿಯಿಂದ ಎಸ್.ಎಂ. ಕೃಷ್ಣರನ್ನು ಅಧಿಕೃತವಾಗಿ ಆಹ್ವಾನಿಸಲಾಯಿತು.
ಮಾಜಿ ಸಿಎಂ ಎಸ್.ಎಂ. ಕೃಷ್ಣರವರ ಬೆಂಗಳೂರಿನ ಸದಾಶಿವ ನಗರದ ನಿವಾಸಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಸಚಿವ ಎಸ್.ಟಿ. ಸೋಮಶೇಖರ್ ತೆರಳಿ ಆಹ್ವಾನ ಪತ್ರಿಕೆ ನೀಡಿದರು.
ಭೇಟಿ ಬಳಿಕ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, “ಈ ಬಾರಿಯ ದಸರಾ ಉದ್ಘಾಟನೆಗೆ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣರಿಗೆ ಆಹ್ವಾನ ನೀಡಿದ್ದೇವೆ. ಎಸ್ಎಂಕೆ ಒಬ್ಬ ಮುತ್ಸದ್ದಿ ರಾಜಕಾರಣಿ, ಕನ್ನಡಿಗರಿಗೆ ಇವರು ಪ್ರೀತಿಯ ವ್ಯಕ್ತಿ,” ಎಂದು ಹೇಳಿದರು. “ನಮಗೆಲ್ಲ ಆದರಣೀಯವಾಗಿರುವ ಎಸ್ಎಂಕೆಗೆ ದಸರಾ ಉದ್ಘಾಟನೆಯ ಆಮಂತ್ರಣ ಕೊಟ್ಟಿದ್ದು, ಅವರು ನಮ್ಮ ಆಮಂತ್ರಣವನ್ನು ಒಪ್ಪಿಕೊಂಡಿದ್ದಾರೆ. ಅದಕ್ಕಾಗಿ ನಾವು ಅವರಿಗೆ ಆಭಾರಿಯಾಗಿದ್ದೇವೆ,” ಎಂದು ಸಿಎಂ ತಿಳಿಸಿದರು.ನನ್ನ ಯೋಗ್ಯತೆಗೂ ಮೀರಿ ದಸರಾ ಉದ್ಘಾಟನೆ ಹೊಣೆ ಸರ್ಕಾರದ ಅಧಿಕೃತ ಆಹ್ವಾನ ಸ್ವೀಕರಿಸಿ ಬಳಿಕ ಮಾತನಾಡಿದ ಮಾಜಿ ಸಿಎಂ ಎಸ್.ಎಂ. ಕೃಷ್ಣ, “ನನ್ನ ಯೋಗ್ಯತೆಗೂ ಮೀರಿ ದಸರಾ ಉದ್ಘಾಟನೆ ಹೊಣೆ ಹೊರೆಸಿದ್ದಾರೆ.
ನನ್ನ ವ್ಯಕ್ತಿತ್ವದ ಪೋಷಣೆಗೆ, ವ್ಯಕ್ತಿತ್ವ ರೂಪಿಸಲು ಮೈಸೂರು ಮತ್ತು ರಾಮಕೃಷ್ಣ ಆಶ್ರಮ ಬಹಳ ಸಹಕಾರಿಯಾಗಿವೆ,” ಎಂದು ಸ್ಮರಿಸಿದರು.
“ದಸರಾ ಉದ್ಘಾಟನೆಯ ಸುಯೋಗ ನನಗೆ ನೀಡಿದ ಸರ್ಕಾರಕ್ಕೆ ಅಭಿನಂದನೆ ತಿಳಿಸುತ್ತೇನೆ. ಇತ್ತೀಚೆಗೆ ತಾನೇ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ನನ್ನ ಸ್ನೇಹಿತ ಬಸವರಾಜ ಬೊಮ್ಮಾಯಿ ಉತ್ತಮ ಆಡಳಿತ ನೀಡುತ್ತಿದ್ದಾರೆ. ದಸರಾ ಉದ್ಘಾಟನೆಗೆ ಅವಕಾಶ ಕೊಟ್ಟ ಬೊಮ್ಮಾಯಿವರಿಗೆ ನಾನು ಚಿರಋಣಿ,” ಎಂದು ಎಸ್ಎಂಕೆ ಹೇಳಿದರು. ಇದೇ ವೇಳೆ ಮೈಸೂರಿನಲ್ಲಿ ಶಿಕ್ಷಣ ಪಡೆದ ನೆನಪುಗಳನ್ನು ಸ್ಮರಿಸಿಕೊಂಡ ಎಸ್.ಎಂ. ಕೃಷ್ಣ, ಮಹಾರಾಜ ಕಾಲೇಜು, ಒಂಟಿಕೊಪ್ಪಲಿನಲ್ಲಿ ಕಳೆದ ಕ್ಷಣಗಳನ್ನು ನೆನಪಿಸಿಕೊಂಡರು. ಮೈಸೂರು ಮತ್ತು ರಾಮಕೃಷ್ಣ ಆಶ್ರಮ ನನ್ನ ಏಳಿಗೆ ಮೇಲೆ ಪರಿಣಾಮ ಬೀರಿದೆ ಎಂದು ತಿಳಿಸಿದರು.