ಭಿಂದ್: ಮಧ್ಯಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಭಿಂದ್ ಜಿಲ್ಲೆಯ ವೀರ್ ಖಾದಿ ಗ್ರಾಮದ ಬಳಿ ಬಸ್ ಹಾಗೂ ಕಂಟೈನರ್ ನಡುವೆ ಮುಖಾಮುಖಿ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ಘಟನೆಯಲ್ಲಿ ಏಳು ಮಂದಿ ಮೃತಪಟ್ಟಿದ್ದು, 14 ಮಂದಿ ಗಾಯಗೊಂಡಿದ್ದಾರೆ. ಸ್ಥಳೀಯರು ಮಾಹಿತಿ ನೀಡಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಕೂಡಲೇ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಅಪಘಾತದಲ್ಲಿ ಗಾಯಗೊಂಡವರ ಪೈಕಿ ನಾಲ್ವರ ಸ್ಥಿತಿ ಚಿಂತಾಜನಕ ವಾಗಿದೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳದಿಂದ 79 ಕಿಲೋ ಮೀಟರ್ ದೂರದಲ್ಲಿರುವ ಗ್ವಾಲಿಯರ್ ನ ಆಸ್ಪತ್ರೆಗೆ ಗಾಯಾಳುಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಸ್ ನಲ್ಲಿದ್ದ ಪ್ರಯಾಣಿಕರು ಗ್ವಾಲಿಯರ್ ನಿಂದ ಮಧ್ಯಪ್ರದೇಶದ ಬರೇಲಿ ಪಟ್ಟಣಕ್ಕೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.
ಇದನ್ನೂ ಓದಿ: ಮಧ್ಯ ಪ್ರದೇಶ: 90 ವರ್ಷದ ಅಜ್ಜಿ ಡ್ರೈವಿಂಗ್ ಕಲಿಯುವ ಪ್ರಯತ್ನ ಶ್ಲಾಘಿಸಿದ ಸಿಎಂ
ಅಪಘಾತಕ್ಕೆ ಕಾರಣನಾದ ಚಾಲಕನನ್ನು ಬಂಧಿಸಿ ಘಟನೆ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ಮನೋಜ್ ಸಿಂಗ್ ಹೇಳಿದ್ದಾರೆ.