ಶಿಮ್ಲಾ: ಶಿಮ್ಲಾದಲ್ಲಿ ಗುರುವಾರ ಸಂಜೆ ಸುರಿದ ಭಾರೀ ಮಳೆಯಿಂದಾಗಿ ಭೂಕುಸಿತ ಸಂಭವಿಸಿದ್ದು, ಪರಿಣಾಮ ಬಹುಮಹಡಿ ಕಟ್ಟಡವೊಂದು ಕುಸಿದುಬಿದ್ದಿದೆ.
ನಿನ್ನೆ ಸಂಜೆ 5.45ರ ಸುಮಾರಿಗೆ ಶಿಮ್ಲಾದ ಹಾಲಿ ಪ್ಯಾಲೇಸ್ ಬಳಿಯ ಘೋಡಾ ಚೌಕಿಯಲ್ಲಿ ಈ ಘಟನೆ ನಡೆದಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ನಿರ್ದೇಶಕ ಸುದೇಶ್ ಕುಮಾರ್ ಮೊಖ್ತಾ ತಿಳಿಸಿದ್ದಾರೆ. ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಕಟ್ಟಡ ಕುಸಿತದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆದಾಗ್ಯೂ, ಘಟನೆಯ ಬಗ್ಗೆ ತನಿಖೆ ನಡೆಸಲು ಸರ್ಕಾರದಿಂದ ಆದೇಶಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಸುರೇಶ್ ಭಾರದ್ವಾಜ್ ಹೇಳಿರುವುದಾಗಿ ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
8 ಅಂತಸ್ತಿನ ಕಟ್ಟಡದ ಭಾಗಗಳು ಎರಡು ಎರಡು ಅಂತಸ್ತಿನ ಕಟ್ಟಡಗಳಿಗೆ ತಗುಲಿ ಹಾನಿಗೊಳಗಾದವು, ಹೋಟೆಲ್ ಸೇರಿದಂತೆ ಎರಡು ಪಕ್ಕದ ಕಟ್ಟಡಗಳು ಕೂಡ ಅಪಾಯದಲ್ಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜಿಲ್ಲಾಡಳಿತವು ಕಟ್ಟಡಗಳ ಪ್ರತಿ ನಿವಾಸಿಗಳಿಗೆ ತಕ್ಷಣದ ಹಣಕಾಸಿನ ಸಹಾಯವಾಗಿ 10,000 ರೂಗಳನ್ನು ಒದಗಿಸಿದೆ ಎಂದು ಮೊಖ್ತಾ ಮಾಹಿತಿ ನೀಡಿದ್ದಾರೆ.