Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿನ 94ನೇ ಭಜನಾ ಸಪ್ತಾಹ ಮಹೋತ್ಸವಕ್ಕೆ ದೀಪ ಪ್ರಜ್ವಲನೆಯೊ೦ದಿಗೆ ವಿದ್ಯುಕ್ತ ಚಾಲನೆ.......ಡಿ.2ರ ಶುಕ್ರವಾರದ೦ದು ಪುತ್ತಿಗೆ ಮಠದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ಪರ್ಯಾಯ ಮಹೋತ್ಸವಕ್ಕೆ ಬಾಳೆಮುಹೂರ್ತ ಕಾರ್ಯಕ್ರಮವು 8ಗ೦ಟೆಗೆ ಪುತ್ತಿಗೆ ಮಠದ ಆವರಣದಲ್ಲಿ ಜರಗಲಿದೆ...

ಉಡುಪಿ ಶಿರೂರು ಮಠದ ಪೀಠಾಧಿಪತಿಯಾಗಿ ಅಪ್ರಾಪ್ತ ವಯಸ್ಸಿನ ಬಾಲಕನ ನೇಮಕ ಪ್ರಶ್ನಿಸಿದ್ದ ಅರ್ಜಿ ವಜಾಗೊಳಿಸಿದ ಕರ್ನಾಟಕ ಹೈಕೋರ್ಟ್-ಉಡುಪಿ ಶಿರೂರು ಮಠದ ಮು೦ಭಾಗದಲ್ಲಿ ಪಟಾಕಿ ಸಿಡಿಸಿ ಸ೦ಭ್ರಮಾಚರಣೆ

ಉಡುಪಿ: ಶ್ರೀ ಶೀರೂರು ಮಠದ ಪೀಠಾಧಿಪತಿಯಾಗಿ ಅಪ್ರಾಪ್ತ ವಯಸ್ಸಿನ ಬಾಲಕನನ್ನು ನೇಮಕ ಮಾಡಿದ ಕ್ರಮ ಪ್ರಶ್ನಿಸಿ ಶಿರೂರು ಮಠ ಭಕ್ತ ಸಮಿತಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ಈ ಸುದ್ದಿ ಪ್ರಕಟಗೊ೦ಡ ಕೂಡಲೇ ಉಡುಪಿಯ ರಥಬೀದಿಯಲ್ಲಿರುವ ಶಿರೂರು ಮಠದ ಮು೦ಭಾಗದಿ೦ದ ಕನಕದಾಸ ರಸ್ತೆಯ ಕೂಡುವಲ್ಲಿಯವರೆಗೆ ಪಟಾಕಿಯನ್ನು ಸಿಡಿಸಿ ಸ೦ಭ್ರಮವನ್ನು ಆಚರಿಸಲಾಯಿತು.

ಉಡುಪಿ ಅಷ್ಠಮಠಗಳಲ್ಲಿ ಒಂದಾದ ಶಿರೂರು ಮಠದ ಹಿಂದಿನ ಶ್ರೀಗಳಾದ ಶ್ರೀ ಲಕ್ಷ್ಮೀವರ ತೀರ್ಥರು 2018ರ ಜುಲೈ 31ರಂದು ನಿಧನರಾಗಿದ್ದರು. ಅವರ ಉತ್ತರಾಧಿಕಾರಿಯನ್ನಾಗಿ 16 ವರ್ಷದ ಅನಿರುದ್ಧ ಸರಳತ್ತಾಯ ಅವರನ್ನು ಆಯ್ಕೆ ಮಾಡಲಾಗಿತ್ತು.

ಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ನೂತನ ಪೀಠಾಧಿಪತಿ ಈ ನೇಮಕ ಮಾಡಿದ್ದರು. ಆದರೆ, ಇದು ಅನೇಕರ ಆಕ್ಷೇಪಕ್ಕೆ ಕಾರಣವಾಗಿತ್ತು. ಬಹು ಪ್ರತಿಷ್ಠವಾದ ಮಠದ ಪೀಠಕ್ಕೆ ಹಿರಿಯರು ಮತ್ತು ಪ್ರಬುದ್ಧರನ್ನು ನೇಮಕ ಮಾಡಬೇಕು. ಅಪ್ರಾಪ್ತ ವಯಸ್ಸಿನ ವ್ಯಕ್ತಿಯನ್ನು ನೇಮಿಸುವುದು ಕಾನೂನಿಗೆ ವಿರುದ್ಧವಾಗಿದೆ ಎಂದು ಅನೇಕರು ಆರೋಪಿಸಿದ್ದರು.

ಆದರೆ, ಪ್ರಕರಣದಲ್ಲಿ ಅಪ್ರಾಪ್ತ ವಯಸ್ಕನ ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆಯಾಗಿದೆ ಎಂಬುದನ್ನು ಸಾಬೀತುಪಡಿಸಲು ಅರ್ಜಿದಾರರು ವಿಫಲರಾಗಿದ್ದಾರೆ. ಅಪ್ರಾಪ್ತ ವಯಸ್ಸಿನವರು ಸನ್ಯಾಸ ಸ್ವೀಕರಿಸಲು, ಮಠಾಧಿಪತಿಯಾಗಲು ಯಾವ ಕಾನೂನಿನಲ್ಲೂ ನಿರ್ಬಂಧವಿಲ್ಲ.

800 ವರ್ಷಗಳಿಗೂ ಹಿಂದಿನಿಂದ ನಡೆದುಕೊಂಡು ಬಂದಿರುವ ಪದ್ಧತಿಯಲ್ಲಿ ನ್ಯಾಯಾಲಯ ಮಧ್ಯ ಪ್ರವೇಶಿಸುವ ಅಗತ್ಯತೆ ಕಂಡುಬರುತ್ತಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಹೈಕೋರ್ಟ್, ಪಿಐಎಲ್ ಅನ್ನು ತಿರಸ್ಕರಿಸಿದೆ.

‘ಬೌದ್ಧ ಧರ್ಮದಲ್ಲಿ ಅತ್ಯಂತ ಚಿಕ್ಕ ವಯಸ್ಸಿಗೆ ಮಕ್ಕಳು ಭಿಕ್ಕುಗಳಾಗುತ್ತಾರೆ. ಯಾವ ವಯಸ್ಸಿನಲ್ಲಿ ಸನ್ಯಾಸತ್ವ ಸ್ವೀಕರಿಸಬೇಕು ಎಂದು ಯಾವುದೇ ನಿಯಮವಿಲ್ಲ. 18 ವರ್ಷಕ್ಕಿಂತ ಚಿಕ್ಕವರು ಸನ್ಯಾಸಿಗಳಾಗಬಾರದು ಎಂಬುದಕ್ಕೆ ಯಾವುದೇ ಶಾಸನಬದ್ಧ ನಿರ್ಬಂಧ ಇಲ್ಲ. 18 ವರ್ಷಕ್ಕೂ ಮುನ್ನ ಸನ್ಯಾಸಿ ಆಗಲು ಧರ್ಮದಲ್ಲಿ ಅವಕಾಶವಿದೆ ಎಂದು ಅಮಿಕಸ್ ಕ್ಯೂರಿ ಎಸ್ ಎಸ್ ನಾಗಾನಂದ ವಿವರಿಸಿದ್ದಾರೆ. ಹೀಗಾಗಿ ಅದಕ್ಕೆ ನಿರ್ಬಂಧವಿಲ್ಲ’ ಎಂದು ಕೋರ್ಟ್ ಹೇಳಿದೆ.

‘ಧಾರ್ಮಿಕ ಚಟುವಟಿಕೆಗಳ ದೃಷ್ಟಿಯಿಂದ ಶಿರೂರು ಮಠಕ್ಕೆ ಪೀಠಾಧಿಪತಿಯನ್ನು ನೇಮಕ ಮಾಡುವ ಅಧಿಕಾರ ಸೋದೆ ವಾದಿರಾಜ ಮಠಕ್ಕೆ ಇದೆ. ಈ ವಿಚಾರದಲ್ಲಿ ನ್ಯಾಯಾಲಯ ಮಧ್ಯಪ್ರವೇಶ ಮಾಡಲು ಸಾಧ್ಯವಿಲ್ಲ. ಆದರೂ ಧಾರ್ಮಿಕ ವಿಧಿ ವಿಧಾನ ಮತ್ತು ಧರ್ಮದಲ್ಲಿ ಅಸ್ತಿತ್ವದಲ್ಲಿರುವ ನಂಬಿಕೆಗಳು ಎಲ್ಲಿಯವರೆಗೆ ವ್ಯಕ್ತಿಯ ಸಾಂವಿಧಾನಿಕ ಹಕ್ಕುಗಳನ್ನು ಉಲ್ಲಂಘನೆ ಮಾಡುವುದಿಲ್ಲವೋ ಅಲ್ಲಿಯವರೆಗೆ ಪಾಲಿಸುವ ಹೊಣೆಗಾರಿಕೆಯೂ ಇದೆ’ ಎಂದು ಆದೇಶದಲ್ಲಿ ತಿಳಿಸಿದೆ.

‘ಅನಿರುದ್ಧ ಸರಳತ್ತಾಯ ಅವರನ್ನು ಪೀಠಾಧಿಪತಿಯನ್ನಾಗಿ ನೇಮಿಸಿರುವುದು ಮೂಲಭೂತ ಹಕ್ಕಿನ ಉಲ್ಲಂಘನೆ ಎಂದು ಹೇಳಲಾಗದು. ಶಾಸನಬದ್ಧ ನಿಬಂಧನೆಗಳನ್ನು ಉಲ್ಲಂಘಿಸಲು ಎಂಬುದನ್ನು ಸಾಬೀಪಡಿಸುವಲ್ಲಿ ಅರ್ಜಿದಾರರು ವಿಫಲರಾಗಿದ್ದಾರೆ. ಈ ಪದ್ಧತಿ 800 ವರ್ಷಗಳಿಂದ ನಡೆದುಬಂದಿದೆ’ ಎಂದು ಅರ್ಜಿ ವಜಾಗೊಳಿಸುವಾಗ ಹೇಳಿದೆ.

ಶಿರೂರು ಮಠದ ಭಕ್ತ ಸಮಿತಿ ಕಾರ್ಯದರ್ಶಿ ಪಿ. ಲಾತವ್ಯ ಆಚಾರ್ಯ ಸೇರಿದಂತೆ ನಾಲ್ವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಇದನ್ನು ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರನ್ನು ಒಳಗೊಂಡ ನ್ಯಾಯಪೀಠ ತೀರ್ಪು ಪ್ರಕಟಿಸಿದೆ.

No Comments

Leave A Comment