Log In
BREAKING NEWS >
ಉಡುಪಿ: ಇಂದ್ರಾಳಿ ರೈಲ್ವೆ ಬ್ರಿಡ್ಜ್ ಬಳಿ ಕಾಂಕ್ರೀಟಿಕರಣ ಹಿನ್ನಲೆ : 45 ದಿನ ಘನ ವಾಹನ ಸಂಚಾರಕ್ಕೆ ನಿಷೇಧ- ಡಿಸಿ ಆದೇಶ...

ಮಂಗಳೂರು ಮಹಿಳಾ ಸಿಬ್ಬಂದಿ ಮೇಲೆ ತಲವಾರು ದಾಳಿ : ಕುಂದಾಪುರದ ಆರೋಪಿ ನವೀನ್ ಪೊಲೀಸ್ ವಶಕ್ಕೆ

ಮಂಗಳೂರು : ನಗರದ ಸಬ್ ಜೈಲ್ ಸಮೀಪದಲ್ಲಿರುವ ಜಿಲ್ಲಾ ಶಿಕ್ಷಕ ಮತ್ತು ತರಬೇತಿ ಸಂಸ್ಥೆ ಡಯಟ್‌ನ ಮೂವರು ಮಹಿಳಾ ಸಿಬ್ಬಂದಿ ಮೇಲೆ ದುಷ್ಕರ್ಮಿಯೊಬ್ಬ ಏಕಾಏಕಿಯಾಗಿ ಕಚೇರಿಗೆ ನುಗ್ಗಿ ತಲವಾರು ದಾಳಿ ನಡೆಸಿದ ಘಟನೆ ಇಂದು ನಡೆದಿದೆ.

ಆರೋಪಿ ಕುಂದಾಪುರ ನಿವಾಸಿ, ಕುಂದಾಪುರ ನ್ಯಾಯಾಲಯದಲ್ಲಿ ಜವಾನನಾಗಿ ಕೆಲಸ ಮಾಡುತ್ತಿದ್ದ ನವೀನ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಡಯಟ್ ಸಂಸ್ಥೆಗೆ ಇಂದು ಮಧ್ಯಾಹ್ನ 12.45ರ ಸುಮಾರಿಗೆ ಪ್ರಾಧ್ಯಾಪಕಿಯೊಬ್ಬರನ್ನು ಕೇಳಿಕೊಂಡ ಬಂದ ನವೀನ್ ಶಿಕ್ಷಕೇತರ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದ ಕೊಠಡಿಯೊಳಗೆ ನುಗ್ಗಿ ಕರ್ತವ್ಯ ನಿರತರಾಗಿದ್ದ ಸಿಬ್ಬಂದಿ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾನೆ.

ಕೊಠಡಿಯೊಳಗೆ ಇಬ್ಬರು ಮಹಿಳಾ ಸಿಬ್ಬಂದಿ ಎದುರು ಬದುರಾಗಿ ಆಸನದಲ್ಲಿ ಕುಳಿತು ಕರ್ತವ್ಯದಲ್ಲಿದ್ದು, ಒಳಗೆ ಬಂದ ನವೀನ್ ಚೀಲದಲ್ಲಿದ್ದ ತಲವಾರು ಮಾದರಿ (ದೊಡ್ಡ ಕತ್ತಿ)ಯ ಆಯುಧ ತೆಗೆದು ಮಹಿಳೆಯರ ಮೇಲೆ ಹಲ್ಲೆ ನಡೆಸಿದ್ದಾನೆ. ಆ ಸಂದರ್ಭ ಅಲ್ಲಿದ್ದ ಡಿ ದರ್ಜೆಯ ಮಹಿಳಾ ಸಿಬ್ಬಂದಿ ತಡೆಯಲು ಆಗಮಿಸಿದ್ದು, ಆಕೆಯ ಮೇಲೂ ಹಲ್ಲೆ ನಡೆದಿದೆ. ಹಲ್ಲೆಗೊಳಗಾದ ಮೂವರಲ್ಲಿ ಓರ್ವ ಮಹಿಳೆಗೆ ಗಂಭೀರ ಗಾಯವಾಗಿದ್ದು, ಮೂವರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.

ವ್ಯಕ್ತಿ ಏಕಾಏಕಿಯಾಗಿ ತಲವಾರು ದಾಳಿ ನಡೆಸಲಾರಂಭಿಸಿದಾಗ ಅಲ್ಲೇ ಪಕ್ಕದ ಕೊಠಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿಕ್ಷಕೇತರ ಸಿಬ್ಬಂದಿ ಕಿರಣ ಎಂಬವರು ಗಾಬರಿಯಿಂದ ಹೊರಗೋಡಿ ಅಲ್ಲಿದ್ದ ಪೊಲೀಸ್ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಅಲ್ಲೇ ಇದ್ದ ಜೈಲು ಸಿಬ್ಬಂದಿ ಹಾಗೂ ಸ್ಥಳೀಯರು ಸೇರಿ ದುಷ್ಕರ್ಮಿಯನ್ನು ಹಿಡಿದಿದ್ದು, ಸದ್ಯ ನವೀನ್ ಪೊಲೀಸರ ವಶದಲ್ಲಿದ್ದಾನೆ ಎಂದು ತಿಳಿದುಬಂದಿದೆ.

ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ಇದೇ ವೇಳೆ ಆಸ್ಪತ್ರೆಗೆ ಭೇಟಿ ನೀಡಿ ಹಲ್ಲೆಗೊಳಗಾದವರ ಯೋಗಕ್ಷೇಮ ವಿಚಾರಿಸಿದ್ದಾರೆ. ಬರ್ಕೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಗಾಯಗೊಂಡವರನ್ನು ರೀನ, ಗುಣವತಿ ಹಾಗೂ ನಿರ್ಮಲ ಎಂದು ಗುರುತಿಸಲಾಗಿದೆ. ಸದ್ಯ ಅವರೆಲ್ಲಾ ಪ್ರಾಣಾಪಾಯದಿಂದ ಪಾರಾಗಿರುವುದಾಗಿ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.

No Comments

Leave A Comment