Log In
BREAKING NEWS >
ಮ೦ಗಳವಾರದಿ೦ದ ಪಿತೃ ಪಕ್ಷದ ಆರ೦ಭ...

ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್ ನಿಧನ

ಮಂಗಳೂರು, ಸೆ 13: ಹಿರಿಯ ಕಾಂಗ್ರೆಸ್ಸಿಗ, ರಾಜ್ಯಸಭಾ ಸದಸ್ಯ ಆಸ್ಕರ್‌ ಫರ್ನಾಂಡಿಸ್‌ (80) ಸೆ. 13 ರ ಸೋಮವಾರ ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ನಗರದ ಯೆನಪೋಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಿರಿಯ ಕಾಂಗ್ರೆಸ್ಸಿಗ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.

ಜು. 18 ರಂದು ತಮ್ಮ ನಿವಾಸದಲ್ಲಿ ಯೋಗ ಮಾಡುತ್ತಿದ್ದಾಗ ಜಾರಿ ಬಿದ್ದಿದ್ದರು. ಆ ಬಳಿಕ ತಪಾಸಣೆಗಾಗಿ ಆಸ್ಪತ್ರೆಗೆ ತೆರಳಿದಾಗ ತಲೆಯ ಒಳಗೆ ರಕ್ತಸ್ರಾವವಾಗಿರುವುದು ತಿಳಿದುಬಂದಿತ್ತು. ಮೆದುಳಿನಲ್ಲಿ ಹೆಪ್ಪುಗಟ್ಟಿರುವ ರಕ್ತವನ್ನು ತೆಗೆಯಲು ವೈದ್ಯರು ಸರ್ಜರಿ ಮಾಡಿದ್ದರು.ಆ ಬಳಿಕ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿತ್ತು.

ಎಐಸಿಸಿ ನಾಯಕರಾದ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ದೂರವಾಣಿ ಮೂಲಕ ಫರ್ನಾಂಡಿಸ್ ಕುಟುಂಬಸ್ಥರಿಗೆ ಧೈರ್ಯ ತುಂಬಿದ್ದರು. ಮಾತ್ರವಲ್ಲದೆ ಕರ್ನಾಟಕ ಕಾಂಗ್ರೆಸ್ ನಾಯಕರಾದ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ, ರಾಜಕೀಯ, ಧಾರ್ಮಿಕ ಹಿರಿಯ ಮುಂದಾಳು ಬಿ ಜನಾರ್ದನ ಪೂಜಾರಿ ಹಾಗೂ ಸ್ಥಳೀಯ ರಾಜಕೀಯ ನಾಯಕರು ಆಸ್ಪತ್ರೆಗೆ ಭೇಟಿ ನೀಡಿ ಆಸ್ಕರ್ ಫರ್ನಾಂಡಿಸ್ ಆರೋಗ್ಯ ವಿಚಾರಿಸಿದ್ದರು.

ಆಸ್ಕರ್ ಫರ್ನಾಂಡಿಸ್ ಯುಪಿಎ ಸರ್ಕಾರದ ಆಡಳಿತದ ಅವಧಿಯಲ್ಲಿ ಕೇಂದ್ರ ಮಂತ್ರಿಯಾಗಿದ್ದರು. ರಸ್ತೆ, ಸಾರಿಗೆ, ಹೆದ್ದಾರಿ ಮತ್ತು ಕಾರ್ಮಿಕ ಸಚಿವರಾಗಿಯೂ ಕೆಲಸ ಮಾಡಿದ್ದರು. ರಾಜೀವ್ ಗಾಂಧಿ ಜೊತೆಗೆ ಸಂಸತ್ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ್ದರು.

ಆಸ್ಕರ್‌ ಫರ್ನಾಂಡಿಸ್‌ ಅವರ ರಾಜಕೀಯ ಜೀವನ:

1980ರಲ್ಲಿ ಭಾರತದ ಏಳನೇ ಲೋಕಸಭೆಗೆ ಪ್ರತಿನಿಧಿಯಾಗಿ ಉಡುಪಿ ಲೋಕಸಭಾ ಕ್ಷೇತ್ರದಿಂದ ಚುನಾಯಿತರಾದರು. ಬಳಿಕ 1984,1989,1991 ಹಾಗೂ 1996ರವರೆಗೂ ಲೋಕಸಭಾ ಸದಸ್ಯರಾಗಿ ಉಡುಪಿ ಲೋಕಸಭಾ ಕ್ಷೇತ್ರದಿಂಧ ಸತತವಾಗಿ ಚುನಾಯಿತರಾದರು.1998 ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದರು. ತಮ್ಮ ಸದಸ್ಯತ್ವದ ಅವಧಿ 2004ರಲ್ಲಿ ಮುಗಿದಾಗ ರಾಜ್ಯಸಭೆಗೆ ಮರು ಆಯ್ಕೆಗೊಂಡರು.

ಭಾರತ ಸರ್ಕಾರದ ಕೆಂದ್ರ ಸಂಪುಟದಲ್ಲಿ ಹಲವಾರು ಖಾತೆಗಳ ಸಂಪುಟ ಹಾಗೂ ರಾಜ್ಯ ದರ್ಜೆಯ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ವಿವಿಧ ಅವಧಿಗಳಲ್ಲಿ ಪ್ರಮುಖವಾಗಿ ಸಾರಿಗೆ ಖಾತೆ,ಅಂಕಿ ಅಂಶ ಖಾತೆ, ಯುವಜನ ಮತ್ತು ಕ್ರೀಡಾ ಖಾತೆ, ಕಾರ್ಮಿಕ ಸಚಿವಾಲಯ, ಅನಿವಾಸಿ ಭಾರತೀಯರ ಸಚಿವಾಲಯಗಳ ಸಚಿವರಾಗಿದ್ದರು.

ಎರಡು ಅವಧಿಗಳ ಕಾಲ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿಯೂ ಸದಸ್ಯರಾಗಿದ್ದರು. ಬಾರತದ ಮಾಜಿ ಪ್ರಧಾನಿ ರಾಜೀವ ಗಾಂಧಿಯವರಿಗೆ ಆಪ್ತರಾಗಿದ್ದ ಇವರು, ರಾಜೀವ ಗಾಂಧಿಯವರ ಸಂಸದೀಯ ಕಾರ್ಯದರ್ಶಿಯಾಗಿಯೂ ಕಾರ್ಯ ನಿರ್ವಹಿಸಿದ್ದರು. ಕಾಂಗ್ರಸ್‌ ಪಕ್ಷದ ಕೇಂದ್ರ ಚುನಾವಣಾ ಸಮಿತಿಯ ಅಧ್ಯಕ್ಷರಾಗಿದ್ದರು, ಜೊತೆಗೆ ಒಂದು ಅವಧಿಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯೂ ಆಗಿದ್ದರು. ಕಾಗ್ರೆಸ್‌ ಪಕ್ಷದ ಪ್ರಮುಖ ನಿರ್ಧಾರಗಳಿಗೆ ಇವರ ಸಲಹೆಗಳೂ ಪ್ರಮುಖ ಪಾತ್ರವಹಿಸುತ್ತಿದ್ದವು.

No Comments

Leave A Comment