Log In
BREAKING NEWS >
ಉಡುಪಿ ನಗರದಲ್ಲಿ ರಿಕ್ಷಾ ಮೀಟರ್ ಕನಿಷ್ಠದರ ರೂ.40/-ಫಿಕ್ಸ್:ಕಿ.ಮೀಟರ್ ಗೆ ರೂ.20/-ಜಾರಿಗೆ ಕ್ಷಣಗಣನೆ…

ಉಡುಪಿ ಶ್ರೀಕೃಷ್ಣಮಠದಲ್ಲಿ ಲೋಕಹಿತಕ್ಕಾಗಿ ಆತ್ಮಕ್ಷೇಮಕ್ಕಾಗಿ ಸರ್ವರೋಗ ಪರಿಹಾರಕಕ್ಕಾಗಿ ಪಾಪನಿವಾರಕ 108 ಪವಮಾನ ಹೋಮಕ್ಕೆ ಚಾಲನೆ…

ಶ್ರೀಕೃಷ್ಣಮಠದಲ್ಲಿ,ಪರ್ಯಾಯ ಅದಮಾರು ಮಠದ ಹಿರಿಯ ಮಠಾಧೀಶರಾದ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು ಮತ್ತು ಪರ್ಯಾಯ ಪೀಠಾಧೀಶರಾದ ಶ್ರೀಈಶಪ್ರಿಯತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ, ಲೋಕಕಲ್ಯಾಣಾರ್ಥವಾಗಿ ಮತ್ತು ಕೊರೋನಾದಂತಹ ಮಹಾಮಾರಿಯ ನಿವೃತ್ತಿ ಹಾಗೂ ನಾಡಿನ ಪ್ರಜೆಗಳ ಕ್ಷೇಮಕ್ಕಾಗಿ ಇಂದಿನಿಂದ 108ದಿನಗಳ ಪರ್ಯಂತ ‘ಪವಮಾನ ಸೂಕ್ತ’ ಹೋಮ ಅಂಬಲಪಾಡಿ ಶ್ರೀರಮಣ ಆಚಾರ್ಯರ ನೇತೃತ್ವದಲ್ಲಿ ಬುಧವಾರದ೦ದು ಪ್ರಾರಂಭಗೊಂಡಿತು.

ಸಜ್ಜನ ವೃಂದ ದಲ್ಲೊಂದು ವಿಜ್ಞಾಪನೆ ಶ್ರೀಕೃಷ್ಣ-ಮಧ್ವಪ್ರಾಣರ ದಿವ್ಯವಾದ ಸನ್ನಿಧಾನದಲ್ಲಿ ಪರ್ಯಾಯ ಮುಗಿಯುವ ಕಾಲದವರೆಗೆ ಲೋಕಹಿತಕ್ಕಾಗಿ ಆತ್ಮಕ್ಷೇಮಕ್ಕಾಗಿ ಸರ್ವರೋಗಪರಿಹಾರಕಕ್ಕಾಗಿ ಪಾಪನಿವಾರಕ 108 ಪವಮಾನ ಹೋಮವನ್ನು ಸಂಕಲ್ಪಿಸಲಾಗಿದೆ.
ಪರ್ಯಾಯ ಉಭಯ ಶ್ರೀಪಾದರ ಆದೇಶದಂತೆ ಈ ವಿಶಿಷ್ಟವಾದ ಸಂಕಲ್ಪದಲ್ಲಿ ಸಜ್ಜನಸಮೂಹವು ಭಾಗವಹಿಸುವುದಕ್ಕೆ ಅನುಕೂಲವನ್ನೂ ಕಲ್ಪಿಸಲಾಗಿದೆ. ಋಗ್ವೇದದಲ್ಲಿ ಕಾಣಸಿಗುವ, ಪವಮಾನ ಮಂಡಲದಲ್ಲಿ ಬರುವ ಆರುನೂರಹತ್ತು ಮಂತ್ರಗಳ ಗುಚ್ಛವೊಂದನ್ನು ಪಾರಾಯಣ ನಡೆಸಿ ಅದೇ ಮಂತ್ರಗಳಿಂದ ಆಹುತಿಗಳನ್ನಿತ್ತು ಶ್ರೀಕೃಷ್ಣಪರಮಾತ್ಮನ ಪ್ರೀತಿಯನ್ನು ಸಂಪಾದಿಸುವ ದೃಷ್ಟಿಯಿಂದ ಈ ಯೋಜನೆ ಕೈಗೊಳ್ಳಲಾಗಿದೆ.

ಈ ಅಪೂರ್ವವಾದ ಮಂತ್ರಗಳ ಪಾರಾಯಣದಿಂದ, ಆಹುತಿ ಪ್ರದಾನಗಳಿಂದ ಮಹಾಪಾತಕಾದಿ ಸಕಲವಿಧ ದೋಷಗಳನ್ನು ಕಳೆದುಕೊಳ್ಳಬಹುದು. ಈ ಮಂತ್ರಗಳಿಗೆ ನೀರಾಜನ ಮಂತ್ರಗಳೆಂದೂ ಹೆಸರಿದೆ. ಭಗವಂತನು ಬಹಳ ಮೆಚ್ಚುವ ವಿಶಿಷ್ಟವಾದ ಮಂತ್ರಗಳ ಸಮೂಹ ಇದು. ಪವಮಾನ ಎಂದರೆ ಪವಿತ್ರೀಕರಿಸುವ ಶಕ್ತಿ. ಪ್ರಾಣ ನಾರಾಯಣರು ಪವಮಾನ ಪ್ರತಿಪಾದ್ಯರು. ಮನೋನಿಯಾಮಕ ಚಂದ್ರನೂ ಸೋಮಲತಾ ದೇವತೆಯೂ ಮಂತ್ರಗಳಲ್ಲಿ ಕಾಣಸಿಗುವ ಶಕ್ತಿಗಳು.

ಎಲ್ಲರ ಮನಸ್ಸನ್ನೂ ದೇಹವನ್ನೂ ದೇಶವನ್ನೂ ಶುದ್ಧಿಗೊಳಿಸಿ ನೆಮ್ಮದಿ ನೆಲೆಗೊಳ್ಳಲಿ. ಭಗವತ್ಪ್ರಜ್ಞೆಯ ಜತೆಗೆ ಭಾರತೀಯಪ್ರಜ್ಞೆ ಜಾಗೃತವಾಗಲಿ ಎಂಬುದು ಅದಮಾರು ಮಠದ ಹಿರಿಯ ಶ್ರೀಪಾದರಾದ ಶ್ರೀ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಮತ್ತು ಪರ್ಯಾಯ ಪೀಠಾಧೀಶರಾದ ಶ್ರೀ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರ ಆಶಯವಾಗಿದೆ.

No Comments

Leave A Comment