Log In
BREAKING NEWS >
ಉಡುಪಿ ನಗರದಲ್ಲಿ ರಿಕ್ಷಾ ಮೀಟರ್ ಕನಿಷ್ಠದರ ರೂ.40/-ಫಿಕ್ಸ್:ಕಿ.ಮೀಟರ್ ಗೆ ರೂ.20/-ಜಾರಿಗೆ ಕ್ಷಣಗಣನೆ…

ಪಾಲಿಕೆ ಪೈಪೋಟಿ: ಬೆಳಗಾವಿ ಮಹಾನಗರ ಪಾಲಿಕೆ ಬಿಜೆಪಿ ತೆಕ್ಕೆಗೆ, ಹುಬ್ಬಳ್ಳಿ-ಧಾರವಾಡದಲ್ಲಿ ಕಮಲ ಪಡೆ, ಕಲಬುರಗಿಯಲ್ಲಿ ಕಾಂಗ್ರೆಸ್ ಮೇಲುಗೈ

ಬೆಂಗಳೂರು: 3 ನಗರಗಳ ಮಹಾನಗರ ಪಾಲಿಕೆ ಚುನಾವಣಾ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು, ಬೆಳಗಾವಿ ಮಹಾನಗರ ಪಾಲಿಕೆ ಬಿಜೆಪಿ ತೆಕ್ಕೆಗೆ ಜಾರಿದ್ದು, ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಕಮಲ ಪಡೆ ಮ್ಯಾಜಿಕ್ ನಂಬರ್ ಸಾಧಿಸದಿದ್ದರೂ, ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಕಲಬುರಗಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ.

ಮಹಾ ನಗರ ಪಾಲಿಕೆ ಪೈಪೋಟಿ
ಒಟ್ಟು ವಾರ್ಡ್ ಗಳು ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಎಂಇಎಸ್ ಇತರರು
ಬೆಳಗಾವಿ 58 36 09 00 02 11
ಕಲಬುರಗಿ 55 21 23 03 01
ಹುಬ್ಬಳ್ಳಿ-ಧಾರವಾಡ 82 39 33 01 09

ಇತಿಹಾಸ ಬರೆದ ಬಿಜೆಪಿ

ಬೆಳಗಾವಿ ಮಹಾನಗರ ಪಾಲಿಕೆಯ ಒಟ್ಟು 58 ಕ್ಷೇತ್ರಗಳ ಪೈಕಿ 36 ವಾರ್ಡುಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು ಆ ಮೂಲಕ ಕುಂದಾ ನಗರಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವುದು ಖಚಿತವಾಗಿದೆ. ಹಾಲಿ ಚುನಾವಣೆಯಲ್ಲಿ ಭಾರಿ ಸದ್ದು ಮಾಡಿದ್ದ ಮಹಾರಾಷ್ಚ್ರ ಏಕೀಕರಣ ಸಮಿತಿ (ಎಂಇಎಸ್)ಗೆ ಭಾರಿ ಮುಖಭಂಗವಾಗಿದ್ದು, ಕೇವಲ ಸ್ಥಾನಗಳಿಗೆ ಮಾತ್ರ ತೃಪ್ತಿ ಪಟ್ಟುಕೊಂಡಿದೆ. ಉಳಿದಂತೆ ಕಾಂಗ್ರೆಸ್ 9 ವಾರ್ಡ್ ಗಳಲ್ಲಿ ಮತ್ತು ಇತರರು 11 ವಾರ್ಡ್ ಗಳಲ್ಲಿ ಜಯ ಸಾಧಿಸಿದ್ದಾರೆ.

ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ 25 ವರ್ಷಗಳ ಬಳಿಕ ಚಿಹ್ನೆ ಮುಂದಿಟ್ಟುಕೊಂಡು ಸ್ಪರ್ಧಿಸಿದ್ದ ಬಿಜೆಪಿಗೆ, ಹಾಲಿ ಚುನಾವಣೆ ಫಲ ನೀಡಿದೆ. ಬೆಳಗಾವಿ ರಾಜಕೀಯ ಇತಿಹಾಸದಲ್ಲೇ ಮೊದಲ ಬಾರಿಗೆ ಬಿಜೆಪಿ ಅಧಿಕಾರದ ಗದ್ದುಗೆ ಏರುತ್ತಿದೆ.

ಗೆಲುವಿನ ಖಾತೆ ತೆರೆದ ಎಂಇಎಸ್
15ನೇ ವಾರ್ಡ್ ನಲ್ಲಿ ಬಿಜೆಪಿಯ ನೇತ್ರಾವತಿ ವಿನೋದ ಭಾಗವತ್,  ವಾರ್ಡ್ ನಂಬರ್ 14 ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್)ಯ ಶಿವಾಜಿ ಮಂಡೋಳಕರ್ ಮತ್ತು ವಾರ್ಡ್ ನಂಬರ್ 40ರಲ್ಲಿ ಬಿಜೆಪಿಯ ಹೇಮಾ ಕಾಮ್ಕರ್ ಗೆಲುವು ಸಾಧಿಸಿದ್ದಾರೆ. ವಾರ್ಡ್ ನಂಬರ್ 18ರಲ್ಲಿ ಎಐಎಂಐಎಂ ಅಭ್ಯರ್ಥಿ ಶಾಹಿಖಾನ್ ಪಠಾಣ್ ಗೆಲುವು ಸಾಧಿಸಿದ್ದಾರೆ ಎಂದು ತಿಳಿದುಬಂದಿದೆ.

ನಂಬರ್ 11 ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಮಿವುಲ್ಲಾ ಮಾಡೆವಾಲೆ ಗೆಲುವು ಸಾಧಿಸಿದ್ದಾರೆ.

ಬೆಳಗಾವಿ ವಾರ್ಡ್ ನಂಬರ್ 02 ರ ಕಾಂಗ್ರೆಸ್ ಅಭ್ಯರ್ಥಿ ಮುಜಮಿಲ್ ಡೋನಿಗೆ ಗೆಲುವು. ಆ ಮೂಲಕ ಸತತ ಮೂರನೇ ಬಾರಿಗೆ ಮುಜಮಿಲ್ ಡೋನಿ ಆಯ್ಕೆಯಾದಂತಾಗಿದೆ. ಬೆಳಗಾವಿ ವಾರ್ಡ್ ನಂಬರ್ 12ರ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗೆ ಜಯ ಲಭಿಸಿದ್ದು, ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಮೋದಿನಸಾಬ್ ಮತವಾಲೆ ಜಯಭೇರಿ ಭಾರಿಸಿದ್ದಾರೆ.

ಹುಬ್ಬಳ್ಳಿ-ಧಾರವಾಡದಲ್ಲಿ ಬಿಜೆಪಿ ಮೇಲುಗೈ
ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಕಮಲ ಪಡೆ ಮ್ಯಾಜಿಕ್ ನಂಬರ್ ಸಾಧಿಸದಿದ್ದರೂ, ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಒಟ್ಟು 82 ವಾರ್ಡ್ ಗಳ ಪೈಕಿ 39ರಲ್ಲಿ ಬಿಜೆಪಿ, 33ರಲ್ಲಿ ಕಾಂಗ್ರೆಸ್, ಜೆಡಿಎಸ್ 1 ಮತ್ತು ಇತರರು 9 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ. ಈ ಪೈಕಿ 42 ನೇ ವಾರ್ಡ್​ನಿಂದ ಸ್ಪರ್ಧಿಸಿದ ಮಹಾದೇವಪ್ಪ ನರಗುಂದ ಅವರು ಗೆಲುವಿನ ನಗೆ ಬೀರಿದ್ದಾರೆ. ಹುಬ್ಬಳ್ಳಿ-ಧಾರವಾಡದಲ್ಲಿ  ಮ್ಯಾಜಿಕ್ ನಂಬರ್ ಗೆ ಕಮಲ ಪಡೆಗೆ 42 ಸದಸ್ಯರ ಬೆಂಬಲ ಬೇಕಿದೆ. ಹೀಗಾಗಿ ಇಲ್ಲಿಯೂ ಕಮಲ ಪಡೆ ಅಧಿಕಾರದ ಚುಕ್ಕಾಣಿ ಹಿಡಿಯುವುದು ಬಹುತೇಕ ಖಚಿತವಾಗಿದೆ.

ಕಲಬುರಗಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ
ಕಾಂಗ್ರೆಸ್ ಭದ್ರಕೋಟೆ ಕಲಬುರಗಿಯಲ್ಲೂ ಕಾಂಗ್ರೆಸ್ ಗೆ ಹಿನ್ನಡೆಯಾಗಿದ್ದು, ಒಟ್ಟು 55 ವಾರ್ಡ್ ಗಳ ಪೈಕಿ 21 ವಾರ್ಡ್ ಗಳಲ್ಲಿ ಬಿಜೆಪಿ, 23 ವಾರ್ಡ್ ಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ 3 ಮತ್ತು ಇತರರು 1 ವಾರ್ಡ್ ನಲ್ಲಿ ಜಯ ಗಳಿಸಿದ್ದಾರೆ. ಕಲಬುರಗಿಯ ವಾರ್ಡ್ ನಂಬರ್ 1 ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪುಥಲಿ ಬೇಗಂ ಜಯ ಗಳಿಸಿದ್ದಾರೆ ಎಂದು ತಿಳಿದುಬಂದಿದೆ.

No Comments

Leave A Comment