Log In
BREAKING NEWS >
ಉಡುಪಿ ನಗರದಲ್ಲಿ ರಿಕ್ಷಾ ಮೀಟರ್ ಕನಿಷ್ಠದರ ರೂ.40/-ಫಿಕ್ಸ್:ಕಿ.ಮೀಟರ್ ಗೆ ರೂ.20/-ಜಾರಿಗೆ ಕ್ಷಣಗಣನೆ…

ರಾಜಕೀಯ ಮುಖಂಡರ ಕಿರುಕುಳಕ್ಕೆ ಕಂದಾಯ ನಿರೀಕ್ಷಕ ಆತ್ಮಹತ್ಯೆ

ಚಿಕ್ಕಮಗಳೂರು: ತರೀಕೆರೆಯಲ್ಲಿ ಕಂದಾಯ ನಿರೀಕ್ಷಕರಾಗಿ ಕೆಲಸ ಮಾಡುತ್ತಿದ್ದ ಸೋಮಶೇಖರ್ ಎಂಬವರು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕಂದಾಯ ಇಲಾಖೆಯಲ್ಲಿ ದುಡ್ಡಿಲ್ಲದೆ ಯಾವ ಕೆಲಸನೂ ಆಗಲ್ಲ ಅನ್ನೋ ಮಾತಿದೆ. ಆದ್ರೆ ತರೀಕೆರೆಯಲ್ಲಿ ಕಂದಾಯ ನಿರೀಕ್ಷಕರಾಗಿ ಕೆಲಸ ಮಾಡುತ್ತಿದ್ದ ಸೋಮಶೇಖರ್ ಒಂದು ರೀತಿ ಬಡವರ ಪಾಲಿನ ಬಂಧುವಾಗಿದ್ರು. ತಾನಾಯಿತು, ತನ್ನ ಕೆಲಸವಾಯ್ತು ಅಂತ ಕರ್ತವ್ಯ ಮಾಡಿಕೊಂಡಿದ್ದ ಸೋಮಶೇಖರ್‌ಗೆ ಅಕ್ರಮವಾಗಿ ಬಗರ್ ಹುಕುಂ ಜಮೀನುಗಳನ್ನು ಸಕ್ರಮ ಮಾಡಿಕೊಳ್ಳುವಂತೆ ಸ್ಥಳೀಯ ರಾಜಕೀಯ ಮುಖಂಡರು ಒತ್ತಡ ಹೇರುತ್ತಿದ್ದರು ಎಂದು ತಿಳಿದು ಬಂದಿದೆ. ಜನರಿಂದ ಲಕ್ಷಗಟ್ಟಲೆ ಹಣವನ್ನು ತೆಗೆದುಕೊಂಡು ದಾಖಲೆ ಮಾಡಿಕೊಡುವಂತೆ ಅವರ ಮೇಲೆ ಪ್ರತಿನಿತ್ಯ ಕಿರುಕುಳ ನೀಡುತ್ತಿದ್ದರಂತೆ. ಈ ಬಗ್ಗೆ ಸ್ಥಳೀಯ ರಾಜಕೀಯ ಮುಖಂಡರಾದ ಧನ್ಪಾಲ್, ರಮೇಶ್, ಸಂಜೀವ್ ಕುಮಾರ್ ಹೆಸರನ್ನ ಡೆತ್‌ನೋಟ್‌ನಲ್ಲಿ  ಬರೆದಿಟ್ಟು ಲಕ್ಕವಳ್ಳಿಯ ರಂಗನಾಥ ಸ್ವಾಮಿ ದೇವಸ್ಥಾನ ಪಕ್ಕದ ಭದ್ರಾ ಜಲಾಶಯಕ್ಕೆ ಹಾರಿ ಕಂದಾಯ ನಿರೀಕ್ಷಕ ಸೋಮಶೇಖರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇತ್ತ ಕಂದಾಯ ನಿರೀಕ್ಷಕ ಸೋಮಶೇಖರ್ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಂತೆ ನೂರಾರು ಸಂಖ್ಯೆಯಲ್ಲಿ ಜನರು ಜಲಾಶಯದ ಬಳಿ ಜಮಾಯಿಸಿದ್ರು. ಅಲ್ಲದೇ ಲಕ್ಕವಳ್ಳಿ ಪೊಲೀಸ್ ಠಾಣೆ ಎದುರು ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ.

 ಪೊಲೀಸರು ರಾಜಕೀಯ ಒತ್ತಡಕ್ಕೆ ಮಣಿಯದೆ ಡೆತ್‌ನೋಟ್‌ನಲ್ಲಿ ಹೆಸರಿಸಿರುವ  ವ್ಯಕ್ತಿಗಳನ್ನು ಬಂಧಿಸಬೇಕು ಎಂದು ಮೃತ ಅಧಿಕಾರಿಯ ಕುಟುಂಬಸ್ಥರು, ಸ್ಥಳೀಯರು ಒತ್ತಾಯಿಸಿದ್ದಾರೆ.

ಬಗರ್ ಹುಕುಂ ಕಮಿಟಿಯಲ್ಲಿ ಭಾರಿ ಅಕ್ರಮದ ಹೊಗೆಯಾಡುತ್ತಿದ್ದು, ರಾಜಕೀಯ ಮುಖಂಡರ ಹಣದಾಸೆಗೆ ಪ್ರಾಮಾಣಿಕ ಅಧಿಕಾರಿಯ ಬಲಿಯಾಗಿದೆ. ಡೆತ್‌ನೋಟ್ನಲ್ಲಿ ಆರೋಪಿಗಳ ಹೆಸರನ್ನ ಉಲ್ಲೇಖಿಸಿರೋದ್ರಿಂದ ಸೂಕ್ತ ಕ್ರಮ ಜರುಗಿಸಬೇಕು ಅನ್ನೋ ಆಗ್ರಹ ಕೇಳಿಬಂದಿದ್ದು, ಇತ್ತ ಆರೋಪಿಗಳು ಗ್ರಾಮದಿಂದ ಪರಾರಿಯಾಗಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.

No Comments

Leave A Comment