Log In
BREAKING NEWS >
ಉಡುಪಿ: ಇಂದ್ರಾಳಿ ರೈಲ್ವೆ ಬ್ರಿಡ್ಜ್ ಬಳಿ ಕಾಂಕ್ರೀಟಿಕರಣ ಹಿನ್ನಲೆ : 45 ದಿನ ಘನ ವಾಹನ ಸಂಚಾರಕ್ಕೆ ನಿಷೇಧ- ಡಿಸಿ ಆದೇಶ...

ನೂತನ ಕೃಷಿ ಕಾಯ್ದೆಯಿಂದ ರೈತರ ಬೆಳೆಗೆ ಹೆಚ್ಚಿನ ಬೆಲೆ, ರಾಜ್ಯ ರಾಜಕಾರಣಕ್ಕೆ ಮರಳುವುದಿಲ್ಲ: ಶೋಭಾ ಕರಂದ್ಲಾಜೆ

ಮೈಸೂರು: ಹಳ್ಳಿಯಲ್ಲಿ ನಾನು ಓದುವಾಗ ವಿದ್ಯುತ್, ರಸ್ತೆ ಇರಲಿಲ್ಲ. ಅಂತಹ ಹಳ್ಳಿಯಿಂದ ಬಂದವಳಿಗೆ ಕೃಷಿ ಖಾತೆ ಕೊಟ್ಟು ಕೆಲಸ ಮಾಡಲು ಅನುಕೂಲ ಮಾಡಿಕೊಟ್ಟಿದ್ದಾರೆ. ನಾವು ದೇಶದ ಶೇಕಡ 80ರಷ್ಟು ರೈತರ ಹಿತ ಕಾಯಬೇಕಿದೆ. ರೈತರು ಬೇರೆ ಕೆಲಸಗಳಿಗೆ ಹೋಗದೆ ಕೃಷಿಯಲ್ಲೇ ಉಳಿಯುವಂತೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ಇಲಾಖೆಯಿಂದ ಕಾರ್ಯಯೋಜನೆ ರೂಪಿಸುತ್ತೇನೆ ಎಂದು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಹೋಗಿ ಚಾಮುಡೇಶ್ವರಿಗೆ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಪ್ರತಿ ವರ್ಷ ಆಷಾಢ ಮಾಸದಲ್ಲಿ ಚಾಮುಂಡಿ ಬೆಟ್ಟದ ಮೆಟ್ಟಿಲುಗಳನ್ನು ಹತ್ತುತ್ತಿದ್ದೆ. ಈ ವರ್ಷ ಸಚಿವರೆಲ್ಲ ದೆಹಲಿಯಲ್ಲೇ ಇರಬೇಕು ಎಂಬ ಆದೇಶ ಬಂದಿತ್ತು. ಈ ಹಿನ್ನೆಲೆಯಲ್ಲಿ ಆಷಾಢಕ್ಕೆ ಬರಲು ಸಾಧ್ಯ ಆಗಿರಲಿಲ್ಲ. ಮುಂದೆ ನವರಾತ್ರಿಗೆ ಬಂದು ಮೆಟ್ಟಿಲು ಹತ್ತುತ್ತೇನೆ. ತಾಯಿ ಚಾಮುಂಡೇಶ್ವರಿ ನನಗೆ ಎಲ್ಲ ಬಗೆಯ ಶಕ್ತಿ ತುಂಬಿದ್ದಾಳೆ. ನಾನು ಮೊದಲು ಮೈಸೂರಿಗೆ ಬಂದಾಗ ದಸರಾ ಆಚರಣೆ ಮಾಡೋದು ಗೊತ್ತಿಲ್ಲ ಎಲ್ಲರೂ ಗೇಲಿ ಮಾಡಿದ್ದರು. ಆದರೆ ತಾಯಿ ಕೃಪೆಯಿಂದ ಅದನ್ನು ಮಾಡಿ ತೋರಿಸಿದ್ದೇನೆ ಎಂದರು.

ಯುವಪೀಳಿಗೆ ಕೃಷಿಯಲ್ಲಿ ತೊಡಗುತ್ತಿರುವುದು ಸಂತಸ: ಇಂದು ಯುವಪೀಳಿಗೆ ಐಟಿ-ಬಿಟಿ ಕ್ಷೇತ್ರದಲ್ಲಿ ಉದ್ಯೋಗದಲ್ಲಿರುವವರು ಕೂಡ ಹಳ್ಳಿಗಳಿಗೆ ವಾಪಸ್ ಹೋಗಿ ಕೃಷಿಯಲ್ಲಿ ತಮ್ಮ ಉದ್ಯೋಗ ಜೊತೆ ತೊಡಗಿಸಿಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.

ನಂತರ ಸುತ್ತೂರು ಮಠಕ್ಕೆ ತೆರಳಿ ಶ್ರೀಗಳ ಆಶೀರ್ವಾದ ಪಡೆದರು. ಕೇಂದ್ರ ಸಚಿವೆಯಾದ ಬಳಿಕ ಜನಾಶೀರ್ವಾದ ಯಾತ್ರೆಯ ಸಂದರ್ಭದಲ್ಲಿ ಇಂದು ಬೆಳಗ್ಗೆ ಸುತ್ತೂರು ಮಠಕ್ಕೆ ಭೇಟಿ ನೀಡಿದ ಅವರಿಗೆ ಪೂರ್ಣಕುಂಭ ಸ್ವಾಗತ ದೊರೆಯಿತು. ಸುತ್ತೂರು ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ಬಳಿಕ ಅಲ್ಲಿಯೇ ಉಪಾಹಾರ ಸೇವಿಸಿದರು.

ಸೆಪ್ಟೆಂಬರ್​ನಲ್ಲಿ ಕೃಷಿಕರ ಬಗ್ಗೆ ಕಾರ್ಯಕ್ರಮ ಮಾಡುವಂತೆ ಸುತ್ತೂರು ಶ್ರೀಗಳು ಹೇಳಿದ್ದಾರೆ. ಕೆವಿಕೆ, ಕೃಷಿ ಇಲಾಖೆ, ಸುತ್ತೂರು ಮಠ ಆಶ್ರಯದಲ್ಲಿ ರೈತರ ಅಭಿವೃದ್ಧಿಗೆ ಶ್ರಮಿಸುತ್ತೇವೆ ಎಂದು ಹೇಳಿದರು.

ಈ ವೇಳೆ ರಾಜ್ಯ ರಾಜಕರಣಕ್ಕೆ ಮರಳುತ್ತೀರಾ ಎಂದು ಕೇಳಿದಾಗ ಶೋಭಾ ಕರಂದ್ಲಾಜೆ ನಗುತ್ತಾ ಇಲ್ಲ ಎಂದರು.

ಕೃಷಿ ತಿದ್ದುಪಡಿ ಕಾಯ್ದೆಗಳಿಗೆ ವಿರೋಧ ವಿಚಾರಕ್ಕೆ ಪ್ರತಿಕ್ರಿಯೆ: ಕೃಷಿ ಸಚಿವೆಯಾಗಿ ಕೃಷಿ ತಿದ್ದುಪಡಿ ಕಾಯ್ದೆಗಳಿಗೆ ವಿರೋಧ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ನಿದ್ದೆ ಮಾಡುವವರನ್ನು ಬೇಕಾದರೆ ನಾವು ಎಚ್ಚರಿಸಬಹುದು. ಆದರೆ ನಿದ್ದೆ ಮಾಡಿದಂತೆ ನಟಿಸುವವರನ್ನು ಎಚ್ಚರಿಸುವುದಕ್ಕೆ ಆಗಲ್ಲ. ರೈತರಿಗೆ ಕೃಷಿ ಕಾಯ್ದೆ ಉಪಯೋಗದ ಬಗ್ಗೆ ತಿಳಿ ಹೇಳಬಹುದು. ಆದರೆ ರೈತರಂತೆ ನಟಿಸುವವರನ್ನು ಮನವೊಲಿಸಲು ಆಗಲ್ಲ. ದೆಹಲಿಯಲ್ಲಿ ಕೇವಲ ದಲ್ಲಾಳಿಗಳ ಹೋರಾಟವಾಗಿ ಉಳಿದಿದೆ. ಈ ಕಾಯ್ದೆಗಳಿಂದ ರೈತರ ಬೆಳೆ ಮಾರಾಟಕ್ಕೆ ಅನುಕೂಲವಾಗಲಿದೆ. ರೈತರ ಹೊಲಕ್ಕೆ ಮುಂಬೈನಿಂದ ಟ್ರಕ್ ಬಂದು ನಿಲ್ಲುತ್ತದೆ, ನೂತನ ಕಾಯ್ದೆಯಿಂದ ರೈತರು ಎಪಿಎಂಸಿ ಹೊರತಾಗಿ ಹೊರಗೆ ವ್ಯಾಪಾರ ಮಾಡಬಹುದು. ರೈತ ಹೆಚ್ಚಿನ ಬೆಲೆಗೆ ತನ್ನ ಬೆಳೆ ಮಾರಾಟ ಮಾಡಲು ಅನುಕೂಲ ಆಗಲಿದೆ ಎಂದರು.

ಕೇಂದ್ರ ಕೃಷಿ ಸಚಿವೆಯಾದ ನಂತರ ರಾಜ್ಯದಲ್ಲಿ ಎಲ್ಲಾ ಜಿಲ್ಲೆಗಳಿಗೂ ಪ್ರವಾಸ ಮಾಡುವೆ. ಒಂದೊಂದು ಜಿಲ್ಲೆಯ ರೈತರ ಸಮಸ್ಯೆ ಬೇರೆಯದಾಗಿದೆ. ಅಯಾ ಜಿಲ್ಲೆಗಳಿಗೆ ತೆರಳಿ ಅಲ್ಲಿನ ಸಮಸ್ಯೆಗಳಿಗೆ ಪರಿಹಾರ ನೀಡುವ ಕೆಲಸ ಮಾಡುತ್ತೇನೆ. ಕೊರೊನಾದಿಂದ ಕೃಷಿಗೆ ತೊಡಕಾಗಿದೆ ಅಂತ ಇಲ್ಲ. ದೇಶದಲ್ಲಿ ದಾಖಲೆ ಪ್ರಮಾಣದಲ್ಲಿ ಆಹಾರ ಪದಾರ್ಥಗಳ ಶೇಖರಣೆ ಆಗಿರುವುದನ್ನು ವರದಿಗಳು ಹೇಳುತ್ತಿವೆ. ಕೊರೊನಾ ಸಂದರ್ಭದಲ್ಲೂ ದೇಶದಲ್ಲಿ ದಾಖಲೆ ಪ್ರಮಾಣದ ಕೃಷಿ ಉತ್ಪನ್ನ ಶೇಖರಣೆಯಾಗಿದೆ. ಅದೇ ರೀತಿ ದಾಖಲೆ ಪ್ರಮಾಣದಲ್ಲಿ ಹಣ್ಣು, ತರಕಾರಿ ಬೆಳೆಯಲಾಗಿದೆ. ನಗರಗಳಲ್ಲಿ ಇದ್ದ ನಮ್ಮ ಯುವಕರು ಹಳ್ಳಿಗೆ ಹೋಗಿ ಕೃಷಿ ಮಾಡಿದ ಪರಿಣಾಮ ಇದು ಸಾಧ್ಯವಾಗಿದೆ ಎಂದು ಸಚಿವೆ ಅಭಿಪ್ರಾಯಪಟ್ಟರು.

ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸ ವಿಚಾರದ ಬಗ್ಗೆ ಮಾತನಾಡಿದ ಅವರು, ಇದೊಂದು ತೀರ್ವ ಖಂಡನೀಯ ವಿಚಾರ. ಪ್ರಜಾಪ್ರಭುತ್ವ ರಾಷ್ಟ್ರಗಳ ಮೇಲೆ ಇಂತಹ ದಾಳಿ ನಡೆಯುತ್ತಿರುವುದು ಆತಂಕ ತಂದಿದೆ. ಆಫ್ಘಾನಿಸ್ತಾನದ ಪಕ್ಕದಲ್ಲೇ ಪಾಕಿಸ್ತಾನ ಇದೆ. ಈ ವಿಚಾರದಲ್ಲಿ ಎಲ್ಲಾ ದೇಶಗಳು ಒಟ್ಟಾಗಿ ದನಿ ಎತ್ತಬೇಕು. ವಿಶ್ವಸಂಸ್ಥೆ ಮೇಲೆ ಒತ್ತಡ ಹೇರಿ ಸಮಸ್ಯೆ ಬಗೆಹರಿಸಬೇಕು ಎಂದು ಹೇಳಿದರು.

No Comments

Leave A Comment