Log In
BREAKING NEWS >
ನ. 21ರ೦ದು ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ "ವಿಶ್ವರೂಪದರ್ಶನ"ಜರಗಲಿದೆ...

ಕುಂದಾಪುರದಲ್ಲಿ ಯುವ ಉದ್ಯಮಿಯ ಭೀಕರ ಕೊಲೆ!

ಉಡುಪಿ: ಹಣಕಾಸು ವಿಚಾರದಲ್ಲಿ ಯುವ ಉದ್ಯಮಿಯೊಬ್ಬರನ್ನು ಹತ್ಯೆ ಮಾಡಿರುವ ಘಟನೆ ಕುಂದಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕಾಳಾವರದಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.

ಅಜೇಂದ್ರ ಶೆಟ್ಟಿ (33) ಹತ್ಯೆಯಾದ ಉದ್ಯಮಿಯಾಗಿದ್ದಾರೆ. ಅಜೇಂದ್ರ ಅವರು ಅನೂಪ್ ಎಂಬುವವರೊಂದಿಗೆ ಕಳೆದ 5 ವರ್ಷಗಳಿಂದ ಪಾಲುದಾರಿಕೆಯಲ್ಲಿ ಡ್ರೀಮ್ ಫೈನಾನ್ಸ್ ಎಂಬ ಹೆಸರಿನಲ್ಲಿ ವ್ಯವಹಾರ ನಡೆಸುತ್ತಿದ್ದರು. ಅಜೇಂದ್ರ ಅವರು ಅವಿವಾಹಿತರಾಗಿದ್ದು, ಸಾಮಾಜಿಕ ಕಾರ್ಯಕರ್ತರೂ ಆಗಿದ್ದಾರೆ.

ರಾತ್ರಿ 11 ಗಂಟೆಯಾದರೂ ಅಜೇಂದ್ರ ಮನೆಗೆ ಬಾರದ ಕಾರಣ ಅನುಮಾನಗೊಂಡ ಕುಟುಂಬಸ್ಥರು ಮೊಬೈಲ್’ಗೆ ಕರೆ ಮಾಡಿದ್ದಾರೆ. ಈ ವೇಳೆ ಸಂಪರ್ಕಕ್ಕೆ ಸಿಗದ ಕಾರಣ ಕಚೇರಿಗೆ ಹೋಗಿ ನೋಡಿದಾಗ ಅಜೇಂದ್ರ ಅವರು ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ.

ಆಘಾತಗೊಂಡ ಕುಟುಂಬಸ್ಥರು ಕೂಡಲೇ ಹತ್ತಿರವಿದ್ದ ಎನ್ಆರ್ ಆಚಾರ್ಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ. ಘಟನೆ ಸಂಬಂಧ ಅಜೇಂದ್ರ ಅವರ ಸಹೋದರ ಮಹೇಂದ್ರ ಶೆಟ್ಟಿ (35) ಪೊಲೀಸರಿಗೆ ದೂರು ನೀಡಿದ್ದಾರೆ.

ಅಜೇಂದ್ರ ಮುಖದ ಮೇಲೆ ಹಲವಾರು ಗಾಯಗಳು ಕಂಡು ಬಂದಿತ್ತು. ಹತ್ಯೆ ಹಿಂದೆ ಅನೂಪ್ ಕೈವಾಡವಿದೆ ಎಂದು ಮಹೇಂದ್ರ ಶೆಟ್ಟಿಯವರು ಶಂಕೆ ವ್ಯಕ್ತಪಡಿಸಿದ್ದಾರೆ.

ವ್ಯವಹಾರ ಸಂಬಂಧ ಹಲವು ವಿಚಾರಗಳಲ್ಲಿ ಅನೂಪ್ ವಿರೋಧ ವ್ಯಕ್ತಪಡಿಸಿದ್ದು, ಈ ಕುರಿತು ಅಜೇಂದ್ರ ಹಲವು ಬಾರಿ ಹೇಳಿಕೊಂಡಿದ್ದ. ಅಜೇಂದ್ರ ಕತ್ತಿನಲ್ಲಿ ಚಿನ್ನದ ಸರವಿತ್ತು. ಅದು ನಾಪತ್ತೆಯಾಗಿದೆ. ಅನೂಪ್ ಆ ಸರವನ್ನು ತೆಗೆದುಕೊಂಡಿರಬಹುದು. ಅಜೇಂದ್ರ ಇತ್ತೀಚೆಗೆ ಖರೀದಿ ಮಾಡಿದ್ದ ಕಾರನ್ನೂ ಅನೂಪ್ ತೆಗೆದುಕೊಂಡು ಹೋಗಿದ್ದಾನೆಂದು ತಿಳಿಸಿದ್ದಾರೆ.

ಹತ್ಯೆ ಸಂಬಂಧ ಕಂದಾಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಐಸಿಪಿ ಸೆಕ್ಷನ್ 397 ಮತ್ತು 302ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನು ಘಟನೆ ಸಂಬಂಧ ಅಜೇಂದ್ರ ಕಚೇರಿ ಬಳಿಯಿರುವ ಅಂಗಡಿಯ ಮಾಲೀಕರು ಮಾಹಿತಿ ನೀಡಿ, ರಾತ್ರಿ 8.30ರವರೆಗೂ ಅನೂಪ್ ಹಾಗೂ ಅಜೇಂದ್ರ ಇಬ್ಬರೂ ಕಚೇರಿಯಲ್ಲಿಯೇ ಇದ್ದರು. ರಾತ್ರಿ 8.30 ಬಳಿಕ ಕೊಲೆಯಾಗಿರಬಹುದು ಎಂದು ಹೇಳಿದ್ದಾರೆ.

ಪ್ರಕರಣ ಸಂಬಂಧ ತಂಡವೊಂದನ್ನು ರಚಿಸಿ ಪೊಲೀಸರು ತನಿಖೆ ಆರಂಭಿಸಿದ್ದು, ಅನೂಪ್ ಗಾಗಿ ಹುಡುಕಾಟ ಆರಂಭವಾಗಿದೆ ಎಂದು ತಿಳಿದುಬಂದಿದೆ.

ಈ ನಡುವೆ ಘಟನೆ ಸಂಬಂಧ ಉಡುಪಿ ಎಸ್’ಪಿ ವಿಷ್ಣುವರ್ಧನ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಪ್ರಕರಣದ ತನಿಖೆ ಪ್ರಗತಿಯಲ್ಲಿದ್ದು, ಈ ಸಂದರ್ಭದಲ್ಲಿ ಯಾವುದೇ ರೀತಿಯ ಹೇಳಿಕೆಯನ್ನೂ ನೀಡಲು ಸಾಧ್ಯವಿಲ್ಲ ಎಂದು ವಿಷ್ಣುವರ್ದನ್ ಅವರು ಹೇಳಿದ್ದಾರೆ.

No Comments

Leave A Comment