Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿನ 94ನೇ ಭಜನಾ ಸಪ್ತಾಹ ಮಹೋತ್ಸವಕ್ಕೆ ದೀಪ ಪ್ರಜ್ವಲನೆಯೊ೦ದಿಗೆ ವಿದ್ಯುಕ್ತ ಚಾಲನೆ.......ಡಿ.2ರ ಶುಕ್ರವಾರದ೦ದು ಪುತ್ತಿಗೆ ಮಠದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ಪರ್ಯಾಯ ಮಹೋತ್ಸವಕ್ಕೆ ಬಾಳೆಮುಹೂರ್ತ ಕಾರ್ಯಕ್ರಮವು 8ಗ೦ಟೆಗೆ ಪುತ್ತಿಗೆ ಮಠದ ಆವರಣದಲ್ಲಿ ಜರಗಲಿದೆ...

‘ಅಭಿನಯ ಶಾರದೆ’ ಹಿರಿಯ ನಟಿ ಜಯಂತಿ ಇನ್ನಿಲ್ಲ

ಬೆಂಗಳೂರು: ಅಭಿನಯ ಶಾರದೆ ಎಂದು ಪ್ರೀತಿಯಿಂದ ಅಭಿಮಾನಿಗಳಿಂದ ಕರೆಸಿಕೊಳ್ಳುತ್ತಿದ್ದ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿದ್ದ ಹಿರಿಯ ನಟಿ ಜಯಂತಿ ನಿಧನರಾಗಿದ್ದಾರೆ.

ಸೋಮವಾರ ನಸುಕಿನ ಜಾವ ಬೆಂಗಳೂರಿನ ತಮ್ಮ ನಿವಾಸದಲ್ಲಿ ಅವರು ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದಾರೆ.ಅವರಿಗೆ 76 ವರ್ಷ ವಯಸ್ಸಾಗಿತ್ತು. ಕಳೆದ ಕೆಲ ವರ್ಷಗಳಿಂದ ಅಸ್ತಮಾ,ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಹಿರಿಯ ನಟಿ ಕಳೆದ ವರ್ಷ ಕೋವಿಡ್-19 ಸಮಯದಲ್ಲಿ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಯಲ್ಲಿ 40 ದಿನಗಳ ಕಾಲ ಇದ್ದು ಚೇತರಿಸಿಕೊಂಡು ಮನೆಗೆ ಹಿಂತಿರುಗಿದ್ದರು. ಆದರೆ ಇಂದು ಕೊನೆಯುಸಿರೆಳೆದಿದ್ದಾರೆ.

ಕನ್ನಡ ಸೇರಿದಂತೆ ದಕ್ಷಿಣ ಭಾರತ ಚಿತ್ರರಂಗದಲ್ಲಿ ನಟಿ ಜಯಂತಿಯವರ ಹೆಸರು ಚಿರಪರಿಚಿತ. ಕನ್ನಡದಲ್ಲಿಯೇ 190 ಚಿತ್ರಗಳಲ್ಲಿ ಅಭಿನಯಿಸಿದ್ದ ಜಯಂತಿಯವರು ತೆಲುಗು, ತಮಿಳು, ಮಲಯಾಳಂ, ಹಿಂದಿ ಮತ್ತು ಮರಾಠಿ ಸೇರಿದಂತೆ 500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.ಕನ್ನಡದ ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಅವರ ಜೊತೆ 45 ಚಿತ್ರಗಳಲ್ಲಿ ನಟಿಸಿದ ಹೆಗ್ಗಳಿಕೆ ಜಯಂತಿಯವರದ್ದು.

1950ರಲ್ಲಿ ಬಳ್ಳಾರಿಯಲ್ಲಿ ಜನಿಸಿದ್ದ ಜಯಂತಿಯವರ ಮೂಲ ಹೆಸರು ಕಮಲಾ ಕುಮಾರಿ. ಚಿತ್ರರಂಗಕ್ಕೆ ಬಂದ ನಂತರ ಜಯಂತಿಯಾದರು. ತಂದೆ ಬಾಲಸುಬ್ರಹ್ಮಣ್ಯಂ ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದರೆ, ತಾಯಿ ಸಂತಾನಲಕ್ಷ್ಮಿ ಗೃಹಿಣಿ.

ಜಯಂತಿಯವರು ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು ವೈ ಆರ್ ಪುಟ್ಟಸ್ವಾಮಿಯವರ ‘ಜೇನುಗೂಡು’ ಚಿತ್ರದ ಮೂಲಕ. ಅಲ್ಲಿಂದಲೇ ಕಮಲಾ ಕುಮಾರಿ ಜಯಂತಿಯಾಗಿದ್ದು.

ಕನ್ನಡ ಚಿತ್ರರಂಗದಲ್ಲೆ  ಮೊದಲ ಬಾರಿಗೆ ಬಿಕಿನಿ ತೊಟ್ಟು ಸುದ್ದಿಯಾಗಿದ್ದ ನಟಿ ಜಯಂತಿಯವರು ತಾವು ನಿರ್ವಹಿಸುವ ಪಾತ್ರಕ್ಕೆ ನ್ಯಾಯ ಒದಗಿಸುತ್ತಿದ್ದರು, ಪಾತ್ರ ಬೇಡುವ ರೀತಿಯಲ್ಲಿ ಅಭಿನಯಿಸುತ್ತಿದ್ದರು.

ಚಿತ್ರರಂಗದಲ್ಲಿ ಬಹುಬೇಡಿಕೆಯಲ್ಲಿದ್ದಾಗಲೇ ಪುಟ್ಟಣ್ಣ ಕಣಗಾಲ್ ಅವರ ನಾಗರಹಾವು ಚಿತ್ರದ ಒಂದೇ ಒಂದು ಹಾಡಿನಲ್ಲಿ ಕಾಣಿಸಿಕೊಂಡು ಕನ್ನಡ ಚಿತ್ರರಂಗದಲ್ಲಿ ಇತಿಹಾಸ ಸೃಷ್ಟಿಸಿದರು. ಒನಕೆ ಓಬವ್ವನ ಹಾಡಿನಲ್ಲಿ ಜಯಂತಿಯವರ ಅಭಿನಯ ಇಂದಿಗೂ ಜನಪ್ರಿಯ.

ನಟಿ ಜಯಂತಿ, 6 ಬಾರಿ ಅತ್ಯುತ್ತಮ ನಟಿ ಪ್ರಶಸ್ತಿಗೆ ಭಾಜನರಾಗಿದ್ದರು. 1960 ರಿಂದ 1980ರ ದಶಕದವರೆಗೂ ಚಿತ್ರರಂಗದಲ್ಲಿ ಬೇಡಿಕೆ ಉಳಿಸಿಕೊಂಡಿದ್ದರು. ಎಡಕಲ್ಲು ಗುಡ್ಡದ ಮೇಲೆ, ಮನಸ್ಸಿನಂತೆ ಮಾಂಗಲ್ಯ, ಧರ್ಮ ದಾರಿ ತಪ್ಪಿತ್ತು, ಮಸಣದ ಹೂವು, ಆನಂದ್, ಟುವಿ ಟುವಿ ಟುವಿ ಚಿತ್ರಗಳಿಗೆ ಜಯಂತಿ ರಾಜ್ಯ ಪ್ರಶಸ್ತಿ ಪಡೆದಿದ್ದ ನಟಿ ಜಯಂತಿ, ‘ಮಿಸ್ ಲೀಲಾವತಿ’ ಚಿತ್ರದ ಅಭಿನಯಕ್ಕಾಗಿ ರಾಷ್ಟ್ರ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿದ್ದರು.

ಕನ್ನಡದಲ್ಲಿ ಡಾ ರಾಜ್ ಕುಮಾರ್, ವಿಷ್ಣುವರ್ಧನ್, ಉದಯ್ ಕುಮಾರ್, ಕಲ್ಯಾಣ್ ಕುಮಾರ್, ಶ್ರೀನಾಥ್, ಅನಂತ್ ನಾಗ್ ಮೊದಲಾದ ಚಿತ್ರಗಳಲ್ಲಿ ನಟಿಸಿದ್ದರು.

ಸಿಎಂ ಸೇರಿ ಹಲವರ ಸಂತಾಪ: ಪ್ರಖ್ಯಾತ ಹಿರಿಯ ಕಲಾವಿದೆ, ಅಭಿನಯ ಶಾರದೆ ಜಯಂತಿ ಅವರ ನಿಧನದ ಸುದ್ದಿ ಅತೀವ ದುಃಖ ತಂದಿದೆ. ಚಿತ್ರರಂಗಕ್ಕೆ ಅವರ ಕೊಡುಗೆ ಅಪಾರವಾಗಿದ್ದು, ಕನ್ನಡ ಕಲಾಲೋಕಕ್ಕೆ ತುಂಬಲಾರದ ನಷ್ಟವುಂಟಾಗಿದೆ. ದೇವರು ಅವರ ಆತ್ಮಕ್ಕೆ ಸದ್ಗತಿ ಕರುಣಿಸಲಿ ಎಂದು ಸಿಎಂ ಬಿ ಎಸ್ ಯಡಿಯೂರಪ್ಪ ಸಂತಾಪ ಸೂಚಿಸಿದ್ದಾರೆ.

ಅದೇ ರೀತಿ ನನ್ನ ಇಷ್ಟದ ನಟಿ ಜಯಂತಿಯವರ ನಿಧನದಿಂದ ತೀವ್ರ ದುಃಖವಾಗುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ. ಅದೇ ರೀತಿ ಸರ್ಕಾರದ ಸಚಿವರುಗಳು, ಚಿತ್ರರಂಗದ ಗಣ್ಯರು, ಕಲಾವಿದರು ಹಿರಿಯ ನಟಿಯನ್ನು ಸ್ಮರಿಸಿಕೊಂಡು ಸಂತಾಪ ಸೂಚಿಸಿದ್ದಾರೆ.

ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನ: ನಟಿ ಜಯಂತಿಯವರ ಪಾರ್ಥಿವ ಶರೀರವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಇರಿಸಲು ಅಂತಿಮ ಸಿದ್ದತೆ ಮಾಡಿಕೊಳ್ಳಲಾಗುತ್ತಿದ್ದು, ಅಭಿಮಾನಿಗಳು, ಕಲಾವಿದರು ಅಂತಿಮ ದರ್ಶನ ಪಡೆಯಬಹುದೆಂದು ಸರ್ಕಾರದ ಮೂಲಗಳು ತಿಳಿಸಿವೆ.

No Comments

Leave A Comment