Log In
BREAKING NEWS >
ರೈತ ಮಕ್ಕಳಿಗೆ ಶಿಷ್ಯವೇತನ, ಸಂಧ್ಯಾ ಸುರಕ್ಷ, ಅಂಗವಿಕಲ ವೇತನ ಹೆಚ್ಚಳ: ಸಿಎಂ ಬೊಮ್ಮಾಯಿ ಸಂಪುಟದ ಮೊದಲ ನಿರ್ಣಯ...

ಮಹಾ ಮಳೆಗೆ ತತ್ತರಿಸಿದ ವಾಣಿಜ್ಯ ನಗರಿ: ಸಾವಿನ ಸಂಖ್ಯೆ 25ಕ್ಕೆ ಏರಿಕೆ, ಪ್ರಧಾನಿ, ರಾಷ್ಟ್ರಪತಿ ಸಂತಾಪ

ಮುಂಬೈ: ಭಾರೀ ಮಳೆಗೆ ಮುಂಬೈ ಮತ್ತು ಮುಂಬೈನ ಹೊರವಲಯ ಅಕ್ಷರಶಃ ತತ್ತರಿಸಿ ಹೋಗಿದೆ. ಮಳೆಯಿಂದ ಗೋಡೆ ಕುಸಿತ ಸೇರಿದಂತೆ ಸಂಭವಿಸಿದ ಇನ್ನಿತರೆ ಅನಾಹುತಗಳಿಂದ ಸಾವನ್ನಪ್ಪಿದವರ ಸಂಖ್ಯೆ 25ಕ್ಕೆ ಏರಿಕೆಯಾಗಿದೆ.

ನೆನ್ನೆ ತಡರಾತ್ರಿಯಿಂದ ಸುರಿದ ಧಾರಾಕಾರ ಮಳೆಯಿಂದಾಗಿ ಬೋರಿವಾಲಿ, ಕಂಡಿವಾಲಿ, ಮಲದ್, ಅಂಧೇರಿ, ಚೆಂಬರ್, ಕುರ್ಲಾ, ಗಾಂಧಿ ಮಾರುಕಟ್ಟೆ, ಹಿಂದುಮಾತಾ, ವಿಕ್ರೋಲಿ ಸೇರಿದಂತೆ ಹಲವು ಪ್ರದೇಶಗಳು ಸಂಪೂರ್ಣವಾಗಿ ಜಲಾವೃತಗೊಂಡು ದುರ್ಘಟನೆ ಸಂಭವಿಸಿದೆ

ಭಾರೀ ಮಳೆಯಿಂದ ಉಂಟಾದ ಭೂಕುಸಿತದಿಂದಾಗಿ ಈ ಅನಾಹುತ ಸಂಭವಿಸಿದೆ. ಮನೆ ಹಾಗೂ ಗೋಡೆಯ ಕೆಳಗೆ ಸಿಲುಕಿರುವ ಜನರ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.

ಮತ್ತೊಂದೆಡೆ ಭಾರಿ ಮಳೆಯಿಂದಾಗಿ ಮುಂಬೈನ ಹಲವು ಪ್ರದೇಶಗಳು ಸಂಪೂರ್ಣವಾಗಿ ಜಲಾವೃತವಾಗಿದ್ದು ಪರಿಹಾರ ಕಾರ್ಯಗಳಿಗೆ ಅಡ್ಡಿಯಾಗಿದೆ. ರೈಲು ಬಸ್ಸು ಸಂಚಾರಕ್ಕೆ ಅಡೆತಡೆಯಾಗಿದೆ.

ರೈಲ್ವೆ ಹಳಿಗಳ ಮೇಲೆ ಸಂಪೂರ್ಣವಾಗಿ ನೀರು ತುಂಬಿರುವ ಹಿನ್ನೆಲೆಯಲ್ಲಿ ರೈಲುಗಳು ಸಂಚರಿಸದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ. ಇನ್ನೂ ರಸ್ತೆಗಳಲ್ಲಿ ನೀರು ತುಂಬಿರುವುದರಿಂದ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಚಂಬರ್ ಪ್ರದೇಶದಲ್ಲಿ ಗೋಡೆ ಕುಸಿದು ಮೃತಪಟ್ಟವರ ಸಂಖ್ಯೆ 25ಕ್ಕೆ ಏರಿಕೆಯಾಗಿದೆ. ಘಟನೆಯಲ್ಲಿ ಹಲವು ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಬೃಹತ್ ಮಹಾನಗರ ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಶುರುವಾಯ್ತು ಪ್ರವಾಹ ಭೀತಿ
ಮುಂಬೈನಲ್ಲಿ ಧಾರಾಕಾರ ಮಳೆ ಮುಂದುವರೆದಿದ್ದು, ಬಡಾವಣೆಗಳೆಲ್ಲಾ ನದಿಗಳಾಗಿ ಮಾರ್ಪಟ್ಟಿವೆ. ಇದೀಗ ವಾಣಿಜ್ಯ ನಗರದಲ್ಲಿ ಪ್ರವಾಹ ಭೀತಿ ಎದುರಾಗಿದ್ದು, ವಾಹನಗಳೆಲ್ಲ ಕೊಚ್ಚಿ ಹೋಗುತ್ತಿವೆ. ರೈಲ್ವೆ ಹಳಿ ಜಲಾವೃತಗೊಂಡಿದ್ದು, ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ನಿತ್ಯ ವ್ಯಾಪಾರ ವಹಿವಾಟು ನಡೆಸುವ ನಗರದ ಬೃಹತ್ ಗಾಂಧಿ ಮಾರುಕಟ್ಟೆ ಪ್ರದೇಶ ಮುಳುಗಿ ಹೋಗಿದ್ದು, ಪ್ರಯಾಣಿಕರ ಸಂಚಾರ ಅಸ್ತವ್ಯಸ್ತವಾಗಿದೆ. ವಾಹನಗಳೆಲ್ಲ ನೀರಿನಲ್ಲಿ ಮುಳುಗುತ್ತಿವೆ. ಪ್ರವಾಹ ಭೀತಿ ದಟ್ಟವಾಗಿರುವುದರಿಂದ ಜನರು ಮನೆ ಬಿಟ್ಟು ಹೊರ ಬಾರದಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ರಾಷ್ಟ್ರಪತಿ, ಪ್ರಧಾನಿ ಸಂತಾಪ
ಮುಂಬೈನಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಚೆಂಬರ್,ವಿಕ್ರೋಲಿ ಮತ್ತಿತರ ಕಡೆ ಗೋಡೆ ಕುಸಿದು ೨5ಕ್ಕೂ ಹೆಚ್ಚು ಮಂದಿ ಮೃತಪಟ್ಟಿರುವ ಘಟನೆ ಸಂಬಂಧ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಸಂತಾಪ ಸೂಚಿಸಿದ್ದಾರೆ.

ರಾಷ್ಟ್ರಪತಿ ತಮ್ಮ ಸಂತಾಪಸೂಚಕದಲ್ಲಿ ಘಟನೆಯಲ್ಲಿ ಮೃತಪಟ್ಟ ಕುಟುಂಬಗಳ ಸದಸ್ಯರಿಗೆ ಸಾಂತ್ವನ ಹೇಳಿದ್ದಾರೆ.

ಮೃತರ ಕುಟುಂಬಕ್ಕೆ ರೂ.2 ಲಕ್ಷ ಪರಿಹಾರ ಘೋಷಣೆ
ಭಾರೀ ಮಳೆಯಿಂದ ಉಂಟಾದ ಅನಾಹುತ ಹಾಗೂ ಗೋಡೆ ಕುಸಿತದಿಂದ ಮೃತಪಟ್ಟ ಕುಟುಂಬದ ಸದಸ್ಯರಿಗೆ ತಲಾ ರೂ.2 ಲಕ್ಷ ಪರಿಹಾರವನ್ನು ಘೋಷಣೆ ಮಾಡಲಾಗಿದೆ.

ಪ್ರಧಾನ ಮಂತ್ರಿ ರಾಷ್ಟ್ರೀಯ ವಿಪತ್ತು ನಿಧಿ ಅಡಿ ಮೃತಪಟ್ಟ ಕುಟುಂಬಗಳ ಸದಸ್ಯರಿಗೆ ತಲಾ ರೂ. ೨ ಲಕ್ಷ ಹಾಗೂ ಗಾಯಗೊಂಡವರಿಗೆ ತಲಾ ರೂ.50 ಸಾವಿರ ನೀಡಲು ಉದ್ದೇಶಿಸಲಾಗಿದೆ ಎಂದು ಪ್ರಧಾನಮಂತ್ರಿಗಳ ಕಾರ್ಯಾಲಯ ಮಾಹಿತಿ ನೀಡಿದೆ.

No Comments

Leave A Comment